ಬೆಂಗಳೂರು: ‘ಇಡ್ಲಿ’... ಇದು ದಕ್ಷಿಣ ಭಾರತದವರ ಅತ್ಯಂತ ಜನಪ್ರಿಯ ಲಘು ಉಪಾಹಾರ. ಎಂ.ಕಾಂ., ಎಂಬಿಎ ವ್ಯಾಸಂಗ ಮಾಡಿ ಕೈತುಂಬ ಸಂಬಳ ದೊರೆಯುವ ಉದ್ಯೋಗ ಗಿಟ್ಟಿಸಿಕೊಂಡಿದ್ದರೂ ಇಡ್ಲಿಯನ್ನೇ ಮಾರಾಟ ಮಾಡಿ ಬದುಕು ಕಟ್ಟಿಕೊಳ್ಳುವ ಮೂಲಕ ಕಿರು ಉದ್ಯಮದಲ್ಲಿ ಯಶಸ್ಸು ಸಾಧಿಸಿದವರು ಕೃಷ್ಣನ್ ಮಹಾದೇವನ್.
ವಿಜ್ಞಾನ ನಗರದಲ್ಲಿ ‘ಅಯ್ಯರ್ ಇಡ್ಲಿ’ ಹೆಸರಿನಲ್ಲಿ ಹೋಟೆಲ್ ನಡೆಸುತ್ತಿರುವ ಕೃಷ್ಣನ್ ಅವರು, ತಂದೆ ಆರಂಭಿಸಿದ ಉದ್ಯಮವನ್ನು ಮುನ್ನಡೆಸಲು ಖಾಸಗಿ ಕಂಪನಿಯ ನೌಕರಿ ತ್ಯಜಿಸಿದವರು. ಅದಕ್ಕೂ ಮೊದಲು ಒಂದು ವರ್ಷ ಉಪನ್ಯಾಸಕರಾಗಿ ಕೆಲಸ ಮಾಡಿದ್ದರು.
ತಾಯಿ ಉಮಾ ಅವರ ಸಹಕಾರದಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿರುವ ಇವರು ಕೋವಿಡ್ ಸಂಕಷ್ಟದ ಕಾಲದಲ್ಲಿ ನೌಕರಿ ಕಳೆದುಕೊಂಡ ಹಲವರಿಗೆ ಇದೇ ಉದ್ಯಮ ಆರಂಭಿಸಲು ಮಾರ್ಗದರ್ಶನ ನೀಡಿದ್ದಾರೆ. ತಾವು ಸಿದ್ಧಪಡಿಸುವ ಇಡ್ಲಿ ಹಾಗೂ ಚಟ್ನಿಯ ರೆಸಿಪಿಯನ್ನೂ ಹೇಳಿಕೊಟ್ಟಿದ್ದಾರೆ. ಈ ಮೂಲಕ ಸಣ್ಣದಾಗಿ ಹೋಟೆಲ್ ಉದ್ಯಮ ಆರಂಭಿಸುವವರಿಗೆ ಮಾರ್ಗದರ್ಶಕರಾಗಿದ್ದಾರೆ.
‘ಬೇರೆ ರಾಜ್ಯದವರೂ ಕೋವಿಡ್ ಕಾಲದಲ್ಲಿ, ಈ ಉದ್ಯಮ ಆರಂಭಿಸುವ ಬಗ್ಗೆ ಮಾರ್ಗದರ್ಶನ ಪಡೆದಿದ್ದು, ತಮ್ಮ ಊರಲ್ಲಿ ಇಡ್ಲಿ ವ್ಯಾಪಾರ ಆರಂಭಿಸಿದ್ದಾರೆ. ಯಾವುದೇ ಉದ್ಯಮ ಇರಲಿ ಆರಂಭದಲ್ಲಿ ಸಣ್ಣಮಟ್ಟದಲ್ಲಿ ಆರಂಭಿಸಬೇಕು. ಆಗ ಖರ್ಚು ಕಡಿಮೆ ಇರುತ್ತೆ. ಗುಣಮಟ್ಟದ ಆಹಾರ ನೀಡಲು ಸಾಧ್ಯವಾಗುತ್ತದೆ. ಬಳಿಕ ಹಂತ ಹಂತವಾಗಿ ಬೆಳೆಯಬೇಕು’ ಎಂದು ಕೃಷ್ಣನ್ ಹೇಳುತ್ತಾರೆ.
‘ಆರಂಭದಲ್ಲಿ ತಂದೆಯವರು ಇಡ್ಲಿ ಹಾಗೂ ದೋಸೆ ಹಿಟ್ಟು ಮಾರಾಟ ಆರಂಭಿಸಿದ್ದರು. ಆಗ ಶಾಲೆಗೆ ಹೋಗುತ್ತಿದ್ದ ನಾನೂ ಅಂಗಡಿಗಳಿಗೆ ತೆರಳಿ ಹಿಟ್ಟು ಮಾರುತ್ತಿದ್ದೆ. 2001ರಲ್ಲಿ ಸಣ್ಣ ಹೋಟೆಲ್ ಆರಂಭಿಸಿದೆವು. 2009ರಲ್ಲಿ ತಂದೆ ತೀರಿಕೊಂಡ ಬಳಿಕ ತಾಯಿ ಹಾಗೂ ನಾನು ಈ ಉದ್ಯಮವನ್ನು ಮನ್ನಡೆಸಿದೆವು. ನಾನು ಕಾಲೇಜಿನಲ್ಲಿ ಓದುತ್ತಿರುವಾಗಲೂ ಅನಂತರ ಕೆಲಸಕ್ಕೆ ಸೇರಿದ ಬಳಿಕವೂ ಕೆಲಸದ ಜೊತೆಗೆ ಈ ಉದ್ಯಮವನ್ನೂ ಮುನ್ನಡೆಸಿದ್ದೇನೆ. 2020ರಿಂದ ಪೂರ್ಣಪ್ರಮಾಣದಲ್ಲಿ ಇದರಲ್ಲೇ ತೊಡಗಿಸಿಕೊಂಡಿದ್ದೇನೆ’ ಎಂದು ಅವರು ಉದ್ಯಮ ಬೆಳೆದು ಬಂದ ಬಗೆಯನ್ನು ವಿವರಿಸುತ್ತಾರೆ.
ಬೆಳಿಗ್ಗೆ 6.30ರಿಂದ 11.30ರವರೆಗೆ ಹಾಗೂ ಸಂಜೆ 6ರಿಂದ 9ರ ವರೆಗೆ ‘ಅಯ್ಯರ್ ಇಡ್ಲಿ’ ಹೋಟೆಲ್ ತೆರೆದಿರುತ್ತದೆ. ಭಾನುವಾರ ಸಂಜೆ ಇರುವುದಿಲ್ಲ. ಮೊದಲು ನಿತ್ಯ 200 ಇಡ್ಲಿಗಳು ವ್ಯಾಪಾರವಾಗುತ್ತಿತ್ತು. ಈಗ ತಿಂಗಳಿಗೆ ಅಂದಾಜು 50 ಸಾವಿರಕ್ಕೂ ಹೆಚ್ಚು ಇಡ್ಲಿ ಮಾರಾಟ ಮಾಡುವವರೆಗೆಉದ್ಯಮ ಬೆಳೆದಿದೆ. ಇವರ ಹೋಟೆಲ್ ಶೇ 90ರಷ್ಟು ಗ್ರಾಹಕರು ಪಾರ್ಸೆಲ್ ಒಯ್ಯುವವರು.
‘ನಾವು 19 ವರ್ಷ ಬರೀ ಇಡ್ಲಿ ಮತ್ತು ಚಟ್ನಿ ಮಾತ್ರ ಮಾರಾಟ ಮಾಡಿದ್ದೇವೆ, ಇದೀಗ ಮೆನುಗೆ ಇಡ್ಲಿ-ವಡೆ, ಕೇಸರಿ ಭಾತ್, ಖಾರಾಬಾತ್ ಸೇರ್ಪಡೆಯಾಗಿದೆ.‘ಗ್ರಾಹಕರು ಆಟೊದಲ್ಲೂ ಬರುತ್ತಾರೆ, ಔಡಿ ಕಾರಲ್ಲೂ ಬರುತ್ತಾರೆ. ಎಲ್ಲರಿಗೂ ಒಂದೇ ರೀತಿಯ ಉಪಚಾರ’ ಎನ್ನುತ್ತಾರೆಕೃಷ್ಣನ್ ಅವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.