ADVERTISEMENT

‘ಜೈ ಶ್ರೀರಾಮ್’ ರೀಲ್ಸ್‌ ಮಾಡಿದ್ದವರಿಗೆ ಬೆದರಿಕೆ: ಚಾಲಕ ಬಂಧನ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2023, 19:40 IST
Last Updated 31 ಆಗಸ್ಟ್ 2023, 19:40 IST
ನಯಾಜ್
ನಯಾಜ್   

ಬೆಂಗಳೂರು: ‘ಜೈ ಶ್ರೀರಾಮ್’ ಎಂಬುದಾಗಿ ರೀಲ್ಸ್ ಮಾಡಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದ ಯುವಕ–ಯುವತಿಗೆ ಜೀವ ಬೆದರಿಕೆಯೊಡ್ಡಿದ್ದ ಆರೋಪದಡಿ ನಯಾಜ್‌ನನ್ನು (22) ತಲಘಟ್ಟಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಕೋಣನಕುಂಟೆ ಬಳಿಯ ಹರಿನಗರ ನಿವಾಸಿ ನಯಾಜ್, ಆಟೊ ಚಾಲಕ. ಯುವಕ–ಯುವತಿಗೆ ಬೆದರಿಕೆಯೊಡ್ಡಿ ವಿಡಿಯೊ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿದ್ದ. ವಿಡಿಯೊ ಆಧರಿಸಿ ಪ್ರಕರಣ ದಾಖಲಿಸಿಕೊಂಡು, ನಯಾಜ್‌ನನ್ನು ಸೆರೆ ಹಿಡಿಯಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಬುರ್ಖಾ ಧರಿಸಿದ್ದ ಯುವತಿ ಹಾಗೂ ಟೋಪಿ ಧರಿಸಿದ್ದ ಯುವಕ, ಒಟ್ಟಿಗೆ ರೀಲ್ಸ್ ಮಾಡಿದ್ದರು. ‘ನಮ್ಮ ಮನದಲ್ಲಿ ಒಂದೇ ಹೆಸರು. ಜೈ ಶ್ರೀರಾಮ್... ಜೈ ಶ್ರೀರಾಮ್...’ ಎಂಬುದಾಗಿ ವಿಡಿಯೊದಲ್ಲಿ ಹೇಳಿದ್ದರು. ಸೌಹಾರ್ದತೆ ಮೂಡಿಸುವ ಉದ್ದೇಶದಿಂದ ಈ ವಿಡಿಯೊ ಮಾಡಿದ್ದರು. ಇದೇ ವಿಡಿಯೊ ಹಲವೆಡೆ ಹರಿದಾಡಿತ್ತು.’

ADVERTISEMENT

‘ಯುವಕ–ಯುವತಿಯ ವಿಡಿಯೊಗೆ ಪ್ರತಿಕ್ರಿಯಿಸಿ ಮತ್ತೊಂದು ವಿಡಿಯೊ ಮಾಡಿದ್ದ ಆರೋಪಿ ನಯಾಜ್, ‘ಬುರ್ಖಾ ಹಾಗೂ ಟೋಪಿ ತೆಗೆದು ಮಾತನಾಡಿ. ನಿಮ್ಮಿಬ್ಬರು ಎದುರಿಗೆ ಸಿಕ್ಕರೆ ಸೀಳಿ ಬಿಡುತ್ತೇವೆ’ ಎಂಬುದಾಗಿ ಬೆದರಿಸಿದ್ದ. ಈತನ ವಿಡಿಯೊವನ್ನು ಪೊಲೀಸ್ ಸಾಮಾಜಿಕ ಮಾಧ್ಯಮ ನಿರ್ವಹಣೆ ಘಟಕಕ್ಕೆ ಕಳುಹಿಸಿದ್ದ ಸಾರ್ವಜನಿಕರು, ಕ್ರಮಕ್ಕೆ ಒತ್ತಾಯಿಸಿದ್ದರು’ ಎಂದು ಪೊಲೀಸರು ತಿಳಿಸಿದರು.

‘ವಿಡಿಯೊ ಅಪ್‌ಲೋಡ್ ಮಾಡಿದ್ದ ಮಾಹಿತಿ ಆಧರಿಸಿ ಆರೋಪಿ ವಿಳಾಸ ಪತ್ತೆ ಮಾಡಲಾಗಿತ್ತು. ಪ್ರಕರಣ ದಾಖಲಾದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಲಾಗಿದೆ’ ಎಂದರು.

‘ಯುವಕ–ಯುವತಿ ವಿಡಿಯೊದಿಂದ ಕೋಪಗೊಂಡು ವಿಡಿಯೊ ಮಾಡಿದ್ದೆ. ಕೆಲ ನಿಮಿಷಗಳ ನಂತರ, ವಿಡಿಯೊ ಅಳಿಸಿ ಹಾಕಿದ್ದೆ. ಅಷ್ಟರಲ್ಲೇ ವಿಡಿಯೊ ಹಲವೆಡೆ ಹರಿದಾಡಿದೆ’ ಎಂಬುದಾಗಿ ಆರೋಪಿ ಹೇಳಿಕೆ ನೀಡಿದ್ದಾನೆ’ ಎಂದು ಪೊಲೀಸರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.