ಬೆಂಗಳೂರು: ‘ಜೈನರು ದಾನ ನೀಡಲು ಹಿಂಜರಿಯುತ್ತಿದ್ದಾರೆ. ತಮಗೆ ಅಗತ್ಯ ಇರುವುದನ್ನು ಕೇಳಿ ಪಡೆಯಲು ಆಸಕ್ತಿ ತೋರುತ್ತಿಲ್ಲ. ಇದರಿಂದ ಎಲ್ಲ ಕ್ಷೇತ್ರಗಳಲ್ಲೂ ಜೈನರು ಅಭಿವೃದ್ಧಿ ಹೊಂದಲು ಸಾಧ್ಯವಾಗಿಲ್ಲ. ಸಮುದಾಯದ ಏಳಿಗೆಗೆ ಈಗಿನವರು ಮುಂದಿನ ನೂರು ವರ್ಷಗಳಿಗೆ ಆಗುವ ಯೋಜನೆ ತಯಾರಿಸಿ ಮುಂದಡಿ ಇಡಬೇಕು’ ಎಂದು ಕರ್ನಾಟಕ ಜೈನ ಅಸೋಸಿಯೇಷನ್‌ನ ಗೌರವ ಅಧ್ಯಕ್ಷ ಸುರೇಂದ್ರ ಕುಮಾರ್ ಸಲಹೆ ನೀಡಿದರು.
ನಗರದಲ್ಲಿ ಭಾನುವಾರ ನಡೆದ ಜೈನ ಅಸೋಸಿಯೇಷನ್‌ನ ‘ಶತ ಸಂಭ್ರಮ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷ ಪದ್ಮರಾಜ ದಂಡಾವತಿ ಮಾತನಾಡಿ,‘ಒಂದು ಸಮಾಜಕ್ಕೆ ಮಾನವ ಸಂಪನ್ಮೂಲ ಹಾಗೂ ಶಿಕ್ಷಣದ ನೀಡಲು ಸಂಘಟನೆಯ ಅಗತ್ಯವಿರುತ್ತದೆ. ಅಂತಹ ಸಂಘಟನೆಯನ್ನು ಜೈನ ಅಸೋಸಿಯೇಷನ್ ಆರಂಭಿಸಿತು.ಇಲ್ಲಿ ವಿದ್ಯೆ ಪಡೆದ ವಿದ್ಯಾರ್ಥಿಗಳು ಸಮಾಜಕ್ಕೆ ಸಹಾಯಹಸ್ತ ನೀಡಬೇಕು. ಆಗಲೇ ತಾವು ಕಲಿತ ವಿದ್ಯೆಗೆ ಸಾರ್ಥಕತೆ ದೊರೆಯುತ್ತದೆ’ ಎಂದು ತಿಳಿಸಿದರು.
ಜೈನ ಅಸೋಸಿಯೇಷನ್‌ಸಂಸ್ಥಾಪಕ ಎಂ.ಎಲ್ ವರ್ಧಮಾನಯ್ಯ ಹಾಗೂ ಮೋತೀಖಾನೆ ಪದ್ಮನಾಭಯ್ಯ ಅವರ ತೈಲಚಿತ್ರಗಳನ್ನು ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಸ್.ರಾಜೇಂದ್ರಬಾಬು ಅನಾವರಣಗೊಳಿಸಿದರು.
ಪೋಸ್ಟ್ ಮಾಸ್ಟರ್ ಜನರಲ್ ಡಾ.ಚಾರ್ಲ್ಸ್ ಲೋಬೊ ವಿಶೇಷ ಅಂಚೆ ಲಕೋಟೆ ಬಿಡುಗಡೆಗೊಳಿಸಿದರು. ಸಾಹಿತಿ ಹಂಪ ನಾಗರಾಜಯ್ಯ, ಕರ್ನಾಟಕ ಜೈನ ಅಸೋಸಿಯೇಷನ್ ಅಧ್ಯಕ್ಷ ಎಸ್.ಜಿತೇಂದ್ರ ಕುಮಾರ್, ಕಾರ್ಯದರ್ಶಿ ಎಚ್.ಬಿ.ದೇವೇಂದ್ರಸ್ವಾಮಿ, ಕಾರ್ಯಾಧ್ಯಕ್ಷ ಪಿ.ವೈ.ರಾಜೇಂದ್ರ ಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.