ADVERTISEMENT

ಬೆಂಗಳೂರು: ಕೆರೆ ಸ್ವಚ್ಛತೆಗೆ ಸಿದ್ಧವಾದ ‘ಜಲದೋಸ್ತ್‌’

ಏರ್‌ಬೋಟ್‌ ಯಂತ್ರ ತಯಾರಿಸಿದ ಸಿಎಸ್‌ಐಆರ್‌– ಎನ್‌ಎಎಲ್‌ ವಿಜ್ಞಾನಿಗಳು

​ಪ್ರಜಾವಾಣಿ ವಾರ್ತೆ
Published 7 ಜೂನ್ 2024, 0:30 IST
Last Updated 7 ಜೂನ್ 2024, 0:30 IST
ಕೆರೆ ಸ್ವಚ್ಛಗೊಳಿಸುವ ಪ್ರಾತ್ಯಕ್ಷಿಕೆ ನೀಡುತ್ತಿರುವ ‘ಜಲದೋಸ್ತ್‌’ ಏರ್‌ಬೋಟ್‌
ಕೆರೆ ಸ್ವಚ್ಛಗೊಳಿಸುವ ಪ್ರಾತ್ಯಕ್ಷಿಕೆ ನೀಡುತ್ತಿರುವ ‘ಜಲದೋಸ್ತ್‌’ ಏರ್‌ಬೋಟ್‌   

ಬೆಂಗಳೂರು: ಕೆರೆಗಳಲ್ಲಿರುವ ಜೊಂಡು, ತ್ಯಾಜ್ಯಗಳನ್ನು ತೆರವು ಮಾಡಿ ಪುನರುಜ್ಜೀವನಗೊಳಿಸಲು ಸಿಎಸ್‌ಐಆರ್‌–ಎನ್‌ಎಎಲ್‌ ‘ಜಲದೋಸ್ತ್‌’ ಏರ್‌ಬೋಟ್‌ ಯಂತ್ರವನ್ನು ತಯಾರಿಸಿದೆ. ಬಿಬಿಎಂಪಿ ವ್ಯಾಪ್ತಿಯ ಕೆರೆಗಳ ಸ್ವಚ್ಛತೆಗೆ ಈ ಯಂತ್ರಗಳು ಬಳಕೆಯಾಗಲಿವೆ.

ಜಲದೋಸ್ತ್‌ ಯಂತ್ರ ನೀರಲ್ಲಿ ತೇಲುತ್ತಾ ತ್ಯಾಜ್ಯಗಳನ್ನು ಸಂಗ್ರಹಿಸುತ್ತದೆ. ಒಂದು ಬಾರಿಗೆ ನಾಲ್ಕು ಟನ್ನಿನಷ್ಟು  ಜಲಕಳೆಯನ್ನು ಸಂಗ್ರಹಿಸಿ ಹೊರ ಹಾಕುತ್ತದೆ. ಪ್ರತಿ 15 ನಿಮಿಷಕ್ಕೆ ಒಂದು ಟ್ರಿಪ್‌ನಂತೆ ಕಸ ವಿಲೇವಾರಿ ಕೆಲಸ ಮಾಡುತ್ತದೆ. ಎಂಟು ಗಂಟೆಯಲ್ಲಿ ಈ ಯಂತ್ರವು 120 ಟನ್‌ ಜಲಸಸ್ಯವನ್ನು ಹೊರಗೆ ಹಾಕುತ್ತದೆ. ಒಂದು ದಿನಕ್ಕೆ 2 ಎಕರೆ ಜಲಪ್ರದೇಶ ಸ್ವಚ್ಛಗೊಳ್ಳಲಿದೆ ಎಂಬುದು ವೈಜ್ಞಾನಿಕ ಹಾಗೂ ಕೈಗಾರಿಕಾ ಸಂಶೋಧನಾ ಮಂಡಳಿ (ಸಿಎಸ್‌ಐಆರ್‌)– ರಾಷ್ಟ್ರೀಯ ವೈಮಾಂತರೀಕ್ಷ ಪ್ರಯೋಗಾಲಯದ (ಎನ್‌ಎಎಲ್‌) ವಿಜ್ಞಾನಿಗಳ ವಿವರಣೆ.

ತ್ಯಾಜ್ಯ ವಿಲೇವಾರಿಯನ್ನು ಟನ್‌ಗಳ ಬದಲಿಗೆ ಕ್ಯೂಬ್‌ಗಳಲ್ಲಿ ಮಾಪನ ಮಾಡಲಾಗುತ್ತದೆ. ಒಂದು ಟ್ರಿಪ್‌ಗೆ 15 ಮೀಟರ್‌ ಕ್ಯೂಬ್‌ ಸಂಗ್ರಹಿಸುವ ಸಾಮರ್ಥ್ಯವನ್ನು ‘ಜಲದೋಸ್ತ್‌’ ಹೊಂದಿದೆ.

ADVERTISEMENT

ಗಂಟೆಗೆ 5 ರಿಂದ 6 ಲೀಟರ್‌ ಡೀಸೆಲ್‌ ಸಾಕಾಗುತ್ತದೆ. ಈಗಾಗಲೇ ಈ ಯಂತ್ರದಿಂದ ಹಲಸೂರು ಕೆರೆಯಲ್ಲಿ ಜಲಕಳೆ ಮತ್ತು ತ್ಯಾಜ್ಯವನ್ನು ತೆಗೆದು ಸ್ವಚ್ಛ ಮಾಡಲಾಗಿದೆ. ಮಂಚನಬೆಲೆ ಜಲಾಶಯ ಮತ್ತು ಕನ್ನಮಂಗಲ ಕೆರೆಗಳನ್ನು ಸ್ವಚ್ಛಗೊಳಿಸಲಾಗಿದೆ. 

ಕಡಿಮೆ ವೆಚ್ಚದಲ್ಲಿ ಯಂತ್ರ ತಯಾರಿ: ಇಷ್ಟೇ ಸಾಮರ್ಥ್ಯವಿರುವ ಯಂತ್ರಗಳನ್ನು ಅಮೆರಿಕ, ಕೆನಡಾ ಸೇರಿದಂತೆ, ಪಾಶ್ಚಿಮಾತ್ಯ ದೇಶಗಳಲ್ಲಿ ಕೆರೆ ಸ್ವಚ್ಛತೆಗೆ ಬಳಸುತ್ತಾರೆ. ಅಲ್ಲಿ ಒಂದು ಯಂತ್ರದ ಬೆಲೆ ₹ 2.5 ಕೋಟಿ ಇದೆ. ಭಾರತದಲ್ಲಿ ಸದ್ಯ ವಿದೇಶದ ಎರಡು–ಮೂರು ಯಂತ್ರಗಳು ಬಳಕೆಯಲ್ಲಿವೆ. ಇದನ್ನು ಮನಗಂಡು ಬಿಬಿಎಂಪಿಯವರು ಸ್ಥಳೀಯವಾಗಿ ಯಂತ್ರ ತಯಾರಿಸುವಂತೆ ಸಲಹೆ ನೀಡಿದ್ದರು. ಅದರಂತೆ ದೇಶೀಯ ಎಂಜಿನ್‌, ಬಿಡಿಭಾಗಗಳನ್ನು ಬಳಸಿ ‘ಜಲದೋಸ್ತ್‌’ ತಯಾರಿಸಲಾಗಿದೆ. ಯಂತ್ರದ ಬೆಲೆ ಜಿಎಸ್‌ಟಿ ಸೇರಿ ₹95 ಲಕ್ಷವಾಗುತ್ತದೆ‘ ಎಂದು ಸಿಎಸ್‌ಐಆರ್‌–ಎನ್‌ಎಎಲ್‌ನ ವೈಜ್ಞಾನಿಕ ಹಾಗೂ ಕೈಗಾರಿಕಾ ಸಂಶೋಧನಾ ವಿಭಾಗದ ಪ್ರಧಾನ ವಿಜ್ಞಾನಿ ಟಿ. ಕಾರ್ತಿಕೇಯನ್‌ ಮಾಹಿತಿ ನೀಡಿದರು.

ಶ್ರೀವಾರಿ ಎಂಜಿನಿಯರಿಂಗ್‌ ಸಿಸ್ಟಮ್ಸ್‌ ಮೂಲಕ ಅಗತ್ಯ ಇದ್ದವರಿಗೆ ಯಂತ್ರ ಪೂರೈಸಲಾಗುತ್ತದೆ. ಬಾಡಿಗೆಗೆ ಬೇಕಾದರೂ ನೀಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ವಿವರ ನೀಡಿದರು.

‘ಜಲದೋಸ್ತ್‌’ ಏರ್‌ಬೋಟ್‌ ಯಂತ್ರವನ್ನು ಖರೀದಿಸಲು ಬಿಬಿಎಂಪಿ ಜೊತೆಗೆ ಒಡಂಬಡಿಕೆ ಮಾಡಿಕೊಳ್ಳಲಾಗುತ್ತಿದೆ. ಈ ಪ್ರಕ್ರಿಯೆ ಅಧಿಕಾರಿಗಳ ಹಂತದಲ್ಲಿ ನಡೆಯುತ್ತಿದೆ
- ಟಿ. ಕಾರ್ತಿಕೇಯನ್‌ ಸಿಎಸ್‌ಐಆರ್‌–ಎನ್‌ಎಎಲ್‌ನ ವೈಜ್ಞಾನಿಕ ಹಾಗೂ ಕೈಗಾರಿಕಾ ಸಂಶೋಧನಾ ವಿಭಾಗದ ಪ್ರಧಾನ ವಿಜ್ಞಾನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.