ADVERTISEMENT

ಜನದನಿ | ಕುಂದು ಕೊರತೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2024, 4:27 IST
Last Updated 3 ಜೂನ್ 2024, 4:27 IST
ಎನ್‌.ಆರ್. ಕಾಲೊನಿಯ ಬಸ್ ನಿಲ್ದಾಣದ ಬಳಿ ಮರವೊಂದು ವಾಲಿರುವುದು
ಎನ್‌.ಆರ್. ಕಾಲೊನಿಯ ಬಸ್ ನಿಲ್ದಾಣದ ಬಳಿ ಮರವೊಂದು ವಾಲಿರುವುದು   

‘ಮರ ನೆಲಕ್ಕುರುಳುವ ಸಾಧ್ಯತೆ’

ಎನ್‌.ಆರ್. ಕಾಲೊನಿಯ ಬಸ್ ನಿಲ್ದಾಣದ ಸಮೀಪದಲ್ಲಿರುವ ಮರವೊಂದು ರಸ್ತೆಯ ಕಡೆಗೆ ವಾಲಿಕೊಂಡಿದೆ. ಇದರ ಬೇರುಗಳು ಮೇಲೆ ಬಂದಿದ್ದು, ಬುಡಕ್ಕೆ ಗೆದ್ದಲು ಹಿಡಿದಿದೆ. ಇಲ್ಲಿ ಮರದ ಸುತ್ತಮುತ್ತ ಹಲವರು ಕೈಗಾಡಿಯಲ್ಲಿ ಹೂವು ಮತ್ತು ತರಕಾರಿಯ ವ್ಯಾಪಾರ ಮಾಡುತ್ತಾರೆ. ಎಲ್ಲ ಸಂದರ್ಭಗಳಲ್ಲೂ ಇಲ್ಲಿ ಜನ ಇರುತ್ತಾರೆ. ಮಳೆಗಾಲ ಆರಂಭವಾಗಿದೆ. ಆಗಾಗ್ಗೆ ಬಿರುಗಾಳಿಯೂ ಬೀಸುತ್ತಿರುವುದರಿಂದ ಈ ಮರ ಯಾವುದೇ ಸಂದರ್ಭದಲ್ಲಿ ನೆಲಕ್ಕುರುಳುವ ಸಾಧ್ಯತೆಯಿದೆ. ಆದ್ದರಿಂದ ಬಿಬಿಎಂಪಿಯವರು ಈ ಬಗ್ಗೆ ಗಮನಹರಿಸಿ, ಅಗತ್ಯ ಕ್ರಮಗಳನ್ನು ಕೈಗೊಂಡರೆ ಮುಂದೆ ಆಗುವ ಅಪಾಯಗಳನ್ನು ತಪ್ಪಿಸಬಹುದು.

–ಕೆ.ಎಸ್. ನಾಗರಾಜ್, ಎನ್.ಆರ್. ಕಾಲೊನಿ

ADVERTISEMENT

‘ಶೆಡ್ ತೆರವುಗೊಳಿಸಿ’

ಲೋಕಸಭಾ ಚುನಾವಣೆಯ ಸಮಯದಲ್ಲಿ ವಾಹನಗಳ ತಪಾಸಣೆಗೆಂದು ಅನೇಕ ಸ್ಥಳಗಳಲ್ಲಿ ತಾತ್ಕಾಲಿಕವಾಗಿ ಶೆಡ್‌ಗಳನ್ನು ನಿರ್ಮಿಸಲಾಗಿದೆ. ಕರ್ನಾಟಕದಲ್ಲಿ ಚುನಾವಣೆ ಮುಗಿದು ಒಂದು ತಿಂಗಳಾದರೂ, ಆ ಶೆಡ್‌ಗಳನ್ನು ಇನ್ನೂ ತೆರವುಗೊಳಿಸಿಲ್ಲ. ಇದರಿಂದ, ವಾಹನ ಸವಾರರಿಗೆ ಸಂಚಾರಕ್ಕೆ ತೊಂದರೆಯಾಗಿದೆ. ಬನಶಂಕರಿಯ ಯಾರಬ್‌ ನಗರದ ಮುಖ್ಯರಸ್ತೆಯಲ್ಲಿ ಹಾಕಿರುವ ಶೆಡ್ ಪುಂಡ ಪೋಕರಿಗಳ ಅಡ್ಡೆಯಾಗಿ ಮಾರ್ಪಟ್ಟಿದೆ. ಆದ್ದರಿಂದ, ನಗರದಲ್ಲಿ ಹಾಕಿರುವ ಇಂತಹ ಶೆಡ್‌ಗಳನ್ನು ತೆರವುಗೊಳಿಸಬೇಕು.

–ಪತ್ತಂಗಿ ಎಸ್. ಮುರಳಿ, ಕುಮಾರಸ್ವಾಮಿ ಬಡಾವಣೆ,

‘ಪಾದಚಾರಿ ಮಾರ್ಗ ಸರಿಪಡಿಸಿ’

ಮೈಸೂರು ಬ್ಯಾಂಕ್ ಬಸ್‌ ತಂಗುದಾಣದಿಂದ ಕೆಂಪೇಗೌಡ ರಸ್ತೆಯ ಕಾವೇರಿ ಭವನ ಮುಂಭಾಗದಲ್ಲಿರುವ ಪಾದಚಾರಿ ಮಾರ್ಗಕ್ಕೆ ಅಳವಡಿಸಿದ್ದ ಪೇವರ್ಸ್‌ಗಳು ಕಿತ್ತು ಹೋಗಿದ್ದು, ಪಾದಚಾರಿಗಳ ಓಡಾಟಕ್ಕೆ ತೊಂದರೆಯಾಗಿದೆ. ಮೈಸೂರು ಬ್ಯಾಂಕ್‌ ವೃತ್ತದ ಸುತ್ತಮುತ್ತ ಸರ್ಕಾರಿ ಕಚೇರಿಗಳು ಸೇರಿದಂತೆ ಸಿವಿಲ್ ನ್ಯಾಯಾಲಯದ ಸಂಕೀರ್ಣ ಇರುವುದರಿಂದ ಈ ಮಾರ್ಗದಲ್ಲಿ ಪ್ರತಿನಿತ್ಯ ನೂರಾರು ಜನ ಓಡಾಡುತ್ತಾರೆ. ಪಾದಚಾರಿ ಮಾರ್ಗ ಹಾಳಾಗಿ ಇಷ್ಟು ದಿನಗಳಾದರೂ ದುರಸ್ತಿಗೊಳಿಸಿಲ್ಲ. ಇದರಿಂದ, ವೃದ್ಧರು, ಮಹಿಳೆಯರು ಸೇರಿದಂತೆ ಮಕ್ಕಳು ಮುಖ್ಯರಸ್ತೆಯಲ್ಲಿ ಹಾದು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಬಿಬಿಎಂಪಿ ಕೂಡಲೇ ಇಲ್ಲಿನ ಪಾದಚಾರಿ ಮಾರ್ಗವನ್ನು ಸರಿಪಡಿಸಬೇಕು. 

–ಶಿವಪ್ರಸಾದ್, ಪಾದಚಾರಿ

‘ರಸ್ತೆ ದುರಸ್ತಿಗೊಳಿಸಿ’

ಹೆಬ್ಬಾಳದ ಕೆಂಪಾಪುರದಲ್ಲಿರುವ ಎಲ್ಲ ಪ್ರಮುಖ ರಸ್ತೆಗಳು ಹಾಳಾಗಿವೆ. ಇದರಿಂದ, ಈ ಭಾಗದಲ್ಲಿ ಪ್ರತಿನಿತ್ಯ ಸಂಚಾರ ದಟ್ಟಣೆ ಇರುತ್ತದೆ. ವಿದ್ಯಾನಿಕೇತನ ಶಾಲೆಗೆ ಸಂಪರ್ಕಿಸುವ ರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದು,  ರಸ್ತೆ ಸಂಪೂರ್ಣ ಹದಗೆಟ್ಟಿದೆ. ಇದೇ ರಸ್ತೆಯ ಒಳಚರಂಡಿ ಪಕ್ಕದಲ್ಲಿ ಭಾರಿ ಹಳ್ಳ ಬಿದ್ದಿದ್ದು, ವಾಹನ ಸಂಚಾರ ಮಾಡುವುದೇ ದುಸ್ತರವಾಗಿದೆ. ದ್ವಿಚಕ್ರ ವಾಹನ ಸವಾರರು ಈ ರಸ್ತೆಯಲ್ಲಿ ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಬಿಬಿಎಂಪಿ ಕೂಡಲೇ ಈ ರಸ್ತೆಯನ್ನು ದುರಸ್ತಿಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು.

–ಶಿವರಾಜ್, ಕೆಂಪಾಪುರ

‘ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿಗೊಳಿಸಿ’

ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್‌ ನಿಲ್ದಾಣದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಹಾಳಾಗಿದ್ದು, ಪ್ರಯಾಣಿಕರು ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಿಲ್ದಾಣಕ್ಕೆ ಪ್ರತಿನಿತ್ಯ ಸಾವಿರಾರು ಪ್ರಯಾಣಿಕರು ಭೇಟಿ ನೀಡುತ್ತಾರೆ. ಆದರೆ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬಿಎಂಟಿಸಿ ಅಧಿಕಾರಿಗಳು ಕೂಡಲೇ ಇಲ್ಲಿನ ಶುದ್ಧ ಕುಡಿಯುವ ನೀರಿನ ಘಟಕದ ದುರಸ್ತಿಗೊಳಿಸಲು ಕ್ರಮ ಕೈಗೊಳ್ಳಬೇಕು.

–ಕಿರಣ್ ಕುಮಾರ್ ಜೆ. ಪ್ರಯಾಣಿಕ

ಬನಶಂಕರಿಯ ಯಾರಬ್‌ ನಗರದ ರಸ್ತೆಯಲ್ಲಿ ಹಾಕಿರುವ ಶೆಡ್.
ಮೈಸೂರು ರಸ್ತೆಯ ಪಾದಚಾರಿ ಮಾರ್ಗದ ಪೇವರ್ಸ್‌ ಕಿತ್ತು ಹೋಗಿರುವುದು.
ಕೆಂಪಾಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ದುಃಸ್ಥಿತಿ.
ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್‌ ನಿಲ್ದಾಣದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.