ADVERTISEMENT

ಜನಸ್ಪಂದನ ಕಾರ್ಯಕ್ರಮ: ಅಹವಾಲುಗಳ ಮಳೆ; ಪರಿಹಾರದ ಆಶಾಕಿರಣ

​ಪ್ರಜಾವಾಣಿ ವಾರ್ತೆ
Published 16 ಜುಲೈ 2022, 19:30 IST
Last Updated 16 ಜುಲೈ 2022, 19:30 IST
ಜನಸ್ಪಂದನ ಕಾರ್ಯಕ್ರಮದಲ್ಲಿ ಶಾಸಕ ರಿಜ್ವಾನ್ ಅರ್ಷದ್ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿದರು. (ಎಡದಿಂದ) ಬೆಂಗಳೂರು ಪೂರ್ವ ಸಂಚಾರ ವಿಭಾಗದ ಎಸಿಪಿ ಎಂ.ಸಿ.ಕವಿತಾ, ಸಾರ್ವಜನಿಕ ಆರೋಗ್ಯಾಧಿಕಾರಿ ಡಾ.ಎಸ್.ಕೆ.ಸವಿತಾ, ಬಿಬಿಎಂಪಿ ರಸ್ತೆ ಮೂಲಸೌಕರ್ಯ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಸಿ.ಗೀತಾ, ಯಲಹಂಕ ತಹಶೀಲ್ದಾರ್ ಎಸ್.ಕವಿತಾ, ಬಿಬಿಎಂಪಿ ಪೂರ್ವ ವಲಯ ಆಯುಕ್ತ ಪಿ.ಎನ್.ರವೀಂದ್ರ, ಮುಖ್ಯ ಎಂಜಿನಿಯರ್ ಆರ್‌.ಸುಗುಣಾ ಮತ್ತು ಜಂಟಿ ಆಯುಕ್ತೆ ಆರ್.ಶಿಲ್ಪಾ ಇದ್ದರು. –ಪ್ರಜಾವಾಣಿ ಚಿತ್ರ
ಜನಸ್ಪಂದನ ಕಾರ್ಯಕ್ರಮದಲ್ಲಿ ಶಾಸಕ ರಿಜ್ವಾನ್ ಅರ್ಷದ್ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿದರು. (ಎಡದಿಂದ) ಬೆಂಗಳೂರು ಪೂರ್ವ ಸಂಚಾರ ವಿಭಾಗದ ಎಸಿಪಿ ಎಂ.ಸಿ.ಕವಿತಾ, ಸಾರ್ವಜನಿಕ ಆರೋಗ್ಯಾಧಿಕಾರಿ ಡಾ.ಎಸ್.ಕೆ.ಸವಿತಾ, ಬಿಬಿಎಂಪಿ ರಸ್ತೆ ಮೂಲಸೌಕರ್ಯ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಸಿ.ಗೀತಾ, ಯಲಹಂಕ ತಹಶೀಲ್ದಾರ್ ಎಸ್.ಕವಿತಾ, ಬಿಬಿಎಂಪಿ ಪೂರ್ವ ವಲಯ ಆಯುಕ್ತ ಪಿ.ಎನ್.ರವೀಂದ್ರ, ಮುಖ್ಯ ಎಂಜಿನಿಯರ್ ಆರ್‌.ಸುಗುಣಾ ಮತ್ತು ಜಂಟಿ ಆಯುಕ್ತೆ ಆರ್.ಶಿಲ್ಪಾ ಇದ್ದರು. –ಪ್ರಜಾವಾಣಿ ಚಿತ್ರ   

ಬೆಂಗಳೂರು: ರಸ್ತೆ ಬದಿಯಲ್ಲಿ ಆಗಾಗ ಬೀಳುವ ಕಸ, ಅವ್ಯವಸ್ಥೆಯಿಂದ ಕೂಡಿರುವ ಪಾದಚಾರಿ ಮಾರ್ಗ, ಅಡ್ಡಾದಿಡ್ಡಿ
ನಿಲ್ಲುವ ವಾಹನಗಳು, ಕದ್ದು ಕುಳಿತು ವಾಹನ ಹಿಡಿಯುವ ಪೊಲೀಸರು... ಹೀಗೆ ಹತ್ತು ಹಲವು ದೂರು–ದುಮ್ಮಾನ
ಗಳನ್ನು ಹೊತ್ತು ಬಂದಿದ್ದ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಜನರಿಗೆ ಕೊಂಚ ಸಮಾಧಾನ ದೊರೆಯಿತು.

‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್‌’ ಪತ್ರಿಕೆಗಳ ವತಿಯಿಂದ ಶನಿವಾರ ಆಯೋಜಿಸಿದ್ದ ಜನಸ್ಪಂದನ ಕಾರ್ಯಕ್ರಮವು ಕಚೇರಿ ಅಲೆದು ಸುಸ್ತಾಗಿದ್ದ ಜನರಲ್ಲಿ ಆಶಾಭಾವ ಮೂಡಿಸಿತು. ನಾಗರಿಕರು ಹೊತ್ತು ಬಂದಿದ್ದ ಸಮಸ್ಯೆಗಳನ್ನು ಮೂರೂವರೆ ಗಂಟೆಗಳಿಗೂ ಹೆಚ್ಚು ಕಾಲ ತಾಳ್ಮೆಯಿಂದ ಆಲಿಸಿದ ಶಾಸಕ ರಿಜ್ವಾನ್ ಅರ್ಷದ್, ಕೆಲ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸುವ ಪ್ರಯತ್ನ ಮಾಡಿದರು. ಕೆಲವರು ಏರುಧ್ವನಿಯಲ್ಲಿ ಎತ್ತಿದ ಪ್ರಶ್ನೆಗಳಿಗೂ ಶಾಸಕರು ಸಮಾಧಾನದಿಂದ ಉತ್ತರ ನೀಡಿ ಪರಿಹರಿಸುವ ಭರವಸೆ ನೀಡಿದರು.

ಗಂಭೀರ ಸಮಸ್ಯೆಗಳನ್ನು ಜನ ಹಂಚಿಕೊಂಡಾಗ, ಸಭೆ ಮುಗಿದ ಕೂಡಲೇ ಸ್ಥಳಕ್ಕೆ ಹೋಗಿ ಸಮಸ್ಯೆ ಬಗೆಹರಿಸಿದ ವರದಿ ನೀಡಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. ‘ಅಧಿಕಾರಿಗಳು ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಬೇಕು. ಪದೇ ಪದೇ ಹೇಳಿದರೂ ಗಮನಹರಿಸದಿದ್ದರೆ ಅಂತಹ ಅಧಿಕಾರಿಗಳನ್ನು ಬದಲಾವಣೆ ಮಾಡಿಸಬೇಕಾಗುತ್ತದೆ’ ಎಂದೂ ಎಚ್ಚರಿಕೆ ನೀಡಿದರು.

ADVERTISEMENT

ಸಭೆಯಲ್ಲಿ ಮೊದಲನೇ ಪ್ರಶ್ನೆಯೇ ಕಸ ವಿಲೇವಾರಿ ಸಮಸ್ಯೆಯದ್ದಾಗಿತ್ತು.

‘ಕಸ ಸುರಿಯುವ ತಾಣವಾಗಿದ್ದ ಹಲವು ಪ್ರದೇಶಗಳನ್ನು ಗುರುತಿಸಿ ನಾವೇ ಖುದ್ದು ಸ್ವಚ್ಛಗೊಳಿಸುವ ಕೆಲಸ ಮಾಡಿದ್ದೇವೆ. ಸಂಪೂರ್ಣವಾಗಿ ಸಮಸ್ಯೆ ಸರಿಯಾಗಿದೆ ಎಂದು ಹೇಳುವುದಿಲ್ಲ. ಶಕ್ತಿಮೀರಿ ಪ್ರಯತ್ನ ಮಾಡಿದ್ದೇನೆ. ಸಮಸ್ಯೆಗಳು ಇದ್ದರೆ ನೇರವಾಗಿ ಜನ ನಮ್ಮನ್ನು ಪ್ರಶ್ನಿಸಬಹುದು, ಬೇಸರಪಡದೆ ಪರಿಹರಿಸಲು ಯತ್ನಿಸುತ್ತೇನೆ’ ಎಂದರು.

ಸಂಪಂಗಿರಾಮನಗರದಲ್ಲಿ ಸಂಚಾರ ದಟ್ಟಣೆ ಸಮಸ್ಯೆ, ರಸ್ತೆ ಬದಿ ಅಡ್ಡಾದಿಡ್ಡಿ ನಿಲ್ಲುವ ವಾಹನಗಳು ಸಂಚಾರಕ್ಕೆ ಕಿರಿಕಿರಿ ಉಂಟು ಮಾಡುತ್ತಿರುವ ಬಗ್ಗೆ ಹಲವರು ಶಾಸಕರ ಗಮನಕ್ಕೆ ತಂದರು. ಇಡೀ ಬಡಾವಣೆಯಲ್ಲಿ ಪಾದಯಾತ್ರೆ ನಡೆಸಿ ಸಮಸ್ಯೆ ಬಗೆಹರಿಸುವ ಭರವಸೆಯನ್ನು ರಿಜ್ವಾನ್ ಅರ್ಷದ್ ನೀಡಿದರು.

ಮುಖ್ಯಮಂತ್ರಿ ಗೃಹ ಕಚೇರಿ, ವಿರೋಧ ಪಕ್ಷದ ನಾಯಕರು, ಸಚಿವರಬಂಗಲೆಗಳು ಇರುವ ಪ್ರತಿಷ್ಠಿತ ಬಡಾವಣೆ
ಗಳಲ್ಲಿ ಒಂದಾದ ಕುಮಾರಕೃಪಾ ಪಶ್ಚಿಮದಲ್ಲೂ ಕಸದ ಸಮಸ್ಯೆಯನ್ನು ನಿವಾಸಿಗಳು ಹೇಳಿಕೊಂಡರು. ಸಮಯಕ್ಕೆ ಸರಿಯಾಗಿ ಬಾರದ ಬಿಎಂಟಿಸಿ ಬಸ್‌ಗಳು, ಬಂದರೂ ನಿಲ್ದಾಣಗಳ ಬಳಿ ನಿಲ್ಲಿಸದೆ ಪರದಾಡುವ ಪ್ರಯಾಣಿಕರು, ಕಬ್ಬನ್ ಪಾರ್ಕ್ ಮೆಟ್ರೊ ನಿಲ್ದಾಣದಿಂದ ಫೀಡರ್ ಬಸ್‌ಗಳ ಅಗತ್ಯದ ಬಗ್ಗೆಯೂ ಶಾಸಕರಿಗೆ ಜನ ಮನವರಿಕೆ ಮಾಡಿಕೊಟ್ಟರು.

ಶಿವಾಜಿನಗರಕ್ಕೆ ಹೊಸ ಲುಕ್‌‌

‘ಅಭಿವೃದ್ಧಿ ವಿಷಯದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಶಿವಾಜಿನಗರಕ್ಕೆ ಇನ್ನು ಕೆಲವೇ ದಿನಗಳಲ್ಲಿ ಹೊಸ ಲುಕ್ ಬರಲಿದೆ’ ಎಂದು ರಿಜ್ವಾನ್ ಅರ್ಷದ್ ತಿಳಿಸಿದರು.

‘ಕಾಮರಾಜ ರಸ್ತೆಯಿಂದ ಎಚ್‌ಕೆಪಿ ರಸ್ತೆ ತನಕ ಎಲ್ಲಾ ರಸ್ತೆಗಳ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಪೂರ್ಣಗೊಂಡ ಬಳಿಕ ಶಿವಾಜಿ ರಸ್ತೆಯ ಅಭಿವೃದ್ಧಿ ಕೈಗೆತ್ತಿಕೊಳ್ಳಲಾಗುವುದು. ರಸೆಲ್ ಮಾರುಕಟ್ಟೆ ಎದುರಿನ ಪ್ರದೇಶ ಸೇರಿ ಇಡೀ ಪ್ರದೇಶವನ್ನು ಸ್ಮಾರ್ಟ್‌ಸಿಟಿ ಯೋಜನೆಯಡಿ ಅಭಿವೃದ್ಧಿಪಡಿಸಲಾಗುತ್ತಿದೆ. ಕೆಲವೇ ದಿನಗಳಲ್ಲಿ ಈ ಪ್ರದೇಶದ ಚಿತ್ರಣವೇ ಬದಲಾಗಲಿದೆ’ ಎಂದರು.

ಅಂತರರಾಷ್ಟ್ರೀಯ ಮಟ್ಟದ ಶಾಲೆ

‘ಶಿವಾಜಿನಗರದಲ್ಲಿ ಸರ್ಕಾರಿ ಶಾಲೆಯೊಂದನ್ನು ಅಂತರರಾಷ್ಟ್ರೀಯ ಮಟ್ಟದ ಮೂಲಸೌಕರ್ಯಗಳೊಂದಿಗೆ ಅಭಿವೃದ್ಧಿಪಡಿಸಲಾಗುತ್ತಿದೆ’ ಎಂದು ರಿಜ್ವಾನ್ ಅರ್ಷದ್ ಹೇಳಿದರು.

‘ಇದಲ್ಲದೇ 6 ಸರ್ಕಾರಿ ಶಾಲೆಗಳನ್ನು ಮಾದರಿಯಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಒಟ್ಟಾರೆ ₹10 ಕೊಟಿಗೂ ಹೆಚ್ಚು ವೆಚ್ಚದಲ್ಲಿ ಶಾಲೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ(ಸಿಎಸ್‌ಆರ್‌) ನಿಧಿ ಮತ್ತು ಸರ್ಕಾರದ ಅನುದಾನ ಬಳಸಿಕೊಳ್ಳಲಾಗುತ್ತಿದೆ’ ಎಂದರು.

ತಿಂಗಳಿಗೆ 2 ವಾರ್ಡ್‌ ಸಮಿತಿ ಸಭೆ

‘ಮುಂದಿನ ದಿನಗಳಲ್ಲಿ ಪ್ರತಿ ತಿಂಗಳ ಮೊದಲ ಮತ್ತು ಮೂರನೇ ಶನಿವಾರ ವಾರ್ಡ್‌ ಸಮಿತಿ ಸಭೆಗಳು ಕಡ್ಡಾಯವಾಗಿ ನಡೆಯಲಿವೆ’ ಎಂದು ಬಿಬಿಎಂಪಿ ಪೂರ್ವ ವಲಯ ಆಯುಕ್ತ ಪಿ.ಎನ್. ರವೀಂದ್ರ ತಿಳಿಸಿದರು.

‘ಪ್ರತಿ ವಾರ್ಡ್‌ಗೆ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಿಸಿ ಶುಕ್ರವಾರವಷ್ಟೇ ಆದೇಶ ಹೊರಡಿಸಿದ್ದೇನೆ. ಮೂರು–ನಾಲ್ಕು ವಾರ್ಡ್‌ಗೆ ಒಬ್ಬ ಮೇಲ್ವಿಚಾರಕರು ಇರಲಿದ್ದಾರೆ. ಸಭೆಗೆ ಮೂರು ದಿನ ಮುಂಚೆಯೇ ಅಜೆಂಡಾ ನೀಡಬೇಕು. ಅದರ ಹೊರತಾಗಿ ವಿಷಯಗಳು ಬಂದರೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು. ನಂತರ ಮೂರು–ನಾಲ್ಕು ದಿನಗಳಲ್ಲಿ ನಡಾವಳಿ ಸಿದ್ಧಪಡಿಸಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಲು ಸೂಚನೆ ನೀಡಲಾಗಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.