ADVERTISEMENT

ಜನಸ್ಪಂದನ: ತ್ಯಾಜ್ಯ, ಪಾರ್ಕಿಂಗ್, ಅಶುದ್ಧ ಕೆರೆ ನೀರು...ಸಮಸ್ಯೆಗಳು ನೂರು

​ಪ್ರಜಾವಾಣಿ ವಾರ್ತೆ
Published 16 ಜುಲೈ 2022, 19:34 IST
Last Updated 16 ಜುಲೈ 2022, 19:34 IST
ಚಂದ್ರಶೇಖರ್
ಚಂದ್ರಶೇಖರ್   

ಆ್ಯಂಡ್ರೊ ಪೀಟರ್, ವಸಂತನಗರ

lಪ್ರಶ್ನೆ: 8ನೇ ಮುಖ್ಯರಸ್ತೆಯ 5ನೇ ಅಡ್ಡ ರಸ್ತೆಯಲ್ಲಿ ತ್ಯಾಜ್ಯ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿಲ್ಲ. ಚರಂಡಿಗಳೂ ತ್ಯಾಜ್ಯದಿಂದ ತುಂಬಿ ಕೊಳಚೆ ನೀರು ಸರಾಗವಾಗಿ ಹರಿಯಲು ಸಾಧ್ಯವಾಗುತ್ತಿಲ್ಲ.

ಉತ್ತರ: ಶಾಸಕ ರಿಜ್ವಾನ್‌ ಅರ್ಷದ್‌

ADVERTISEMENT

–ವಸಂತನಗರದ ಸಮಸ್ಯೆ ನನ್ನ ಗಮನಕ್ಕೆ ಬಂದಿದೆ. ಕಸ ವಿಲೇವಾರಿ ಜವಾಬ್ದಾರಿ ತೆಗೆದುಕೊಂಡ ಗುತ್ತಿಗೆದಾರರು ಸರಿಯಾಗಿ ಕೆಲಸ ನಿರ್ವಹಿಸದಿದ್ದರೆ ಬದಲಾಯಿಸುವಂತೆ ಸೂಚಿಸಿದ್ದೇನೆ. ನೋಟಿಸ್‌ ಕೊಟ್ಟರೂ ಕಸ ವಿಲೇವಾರಿ ಮಾಡದಿದ್ದರೆ ಬದಲಾವಣೆ ಅನಿವಾರ್ಯ. ಜವಾಬ್ದಾರಿ ತೆಗೆದುಕೊಂಡವರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಬಡಾವಣೆ ಜನರ ಹಿತದೃಷ್ಟಿಯಿಂದ ಕ್ರಮ ಕೈಗೊಳ್ಳುತ್ತೇನೆ.

ಇದೇ ಪ್ರಶ್ನೆಗೆ ವಲಯ ಆಯುಕ್ತ ರವೀಂದ್ರ ಪ್ರತಿಕ್ರಿಯೆ.

–ಶುಚಿತ್ವ ಕಾಪಾಡುವುದು ನಮ್ಮೆಲ್ಲರ ಕರ್ತವ್ಯ. ವಸಂತ ನಗರದ ಸಮಸ್ಯೆಯನ್ನು ಕೂಡಲೇ ಬಗೆಹರಿಸಲಾಗುವುದು.

***

ಎಂ.ಚಂದ್ರಶೇಖರ್‌, ಸಂಪಂಗಿರಾಮನಗರ

lಪ್ರಶ್ನೆ: ಇಲ್ಲಿನ 6ನೇ ಕ್ರಾಸ್‌ನಲ್ಲಿ ಎರಡೂ ಬದಿಯಲ್ಲಿ ನೂರಾರು ವಾಹನ ನಿಲುಗಡೆಯಿಂದ ಸ್ಥಳೀಯರಿಗೆ ತೊಂದರೆ ಆಗುತ್ತಿದೆ. ಬಡಾವಣೆಯಲ್ಲಿ ಹಳೇ ಶಾಲೆಯಿದ್ದು, ಮಳೆಗಾಲದಲ್ಲಿ ಸೋರುತ್ತಿದೆ. ದುರಸ್ತಿ ಪಡಿಸಬೇಕು.

ಶಾಸಕ: ಸಂಚಾರ ವ್ಯವಸ್ಥೆ ಸುಧಾರಣೆಗೆ ಹೊಸ ಯೋಜನೆ ರೂಪಿಸಲು ಪೊಲೀಸರಿಗೆ ಸೂಚಿಸಿರುವೆ. ರಸ್ತೆ ಬದಿಯಲ್ಲಿ ನಿಂತಿರುವ ವಾಹನ ತೆರವುಗೊಳಿಸಲು ಸೂಕ್ತ ಸ್ಥಳದ ಅವಶ್ಯವಿದೆ. ಅಧಿವೇಶನದಲ್ಲಿ ಇದನ್ನು ಪ್ರಶ್ನಿಸುವೆ. ಶಾಲೆ ಅಭಿವೃದ್ಧಿಗೆ ₹ 15 ಲಕ್ಷದ ಟೆಂಡರ್‌ಗೆ ಅನುಮೋದನೆ ಸಿಕ್ಕಿದೆ.

**

ಪ್ರಕಾಶ್‌, ಕೃಷ್ಣ ಗಾರ್ಡನ್

lಪ್ರಶ್ನೆ: ಬಸ್‌ ನಿಲ್ದಾಣವಿದ್ದರೂ ಬಸ್‌ಗಳು ಬರುತ್ತಿಲ್ಲ. ಬಂದ ಬಸ್‌ಗಳೂ ನಿಲುಗಡೆ ಮಾಡುತ್ತಿಲ್ಲ. ಶಾಲಾ ಮಕ್ಕಳು ಒಂದೂವರೆ ಕಿ.ಮೀ. ನಡೆದು ಶಾಲೆಗೆ ತೆರಳುತ್ತಿದ್ದಾರೆ. ಬೈಕ್‌ನಲ್ಲಿ ಹೋದರೆ ಪೊಲೀಸರು ಕಂಡಕಂಡಲ್ಲಿ ದಂಡ ವಿಧಿಸುತ್ತಾರೆ.

ಶಾಸಕ: ಕೋವಿಡ್‌ನಿಂದ ನಷ್ಟದ ಕಾರಣ ನೀಡಿ ಹಲವು ಮಾರ್ಗಗಳಲ್ಲಿ ಬಸ್‌ ಸಂಚಾರ ರದ್ದು ಪಡಿಸಲಾಗಿತ್ತು. ಆ ಮಾರ್ಗದಲ್ಲಿ ಮತ್ತೆ ಬಸ್‌ ಸಂಚಾರಕ್ಕೆ ವ್ಯವಸ್ಥೆ ಮಾಡುವೆ.

***

ಮಹೇಂದ್ರಕುಮಾರ್‌ ಜೈನ್‌, ಅಧ್ಯಕ್ಷ, ಹಲಸೂರು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ

lಪ್ರಶ್ನೆ: ಹಲಸೂರು ಕೆರೆ ಅಭಿವೃದ್ಧಿ ಪಡಿಸಬೇಕು. ಮಕ್ಕಳ ಆಟಕ್ಕೆ ಸೂಕ್ತ ಮೈದಾನ ಇಲ್ಲ.

ಶಾಸಕ: ಕೆರೆ ನೀರಿನ ಶುದ್ಧೀಕರಣಕ್ಕೆ ₹ 5 ಕೋಟಿ ಅನುದಾನ ಸಿಕ್ಕಿದೆ. ಆದರೆ, ಕೆರೆಯ ಸೌಂದರ್ಯೀಕರಣಕ್ಕೆ ಅನುದಾನ ಸಿಕ್ಕಿಲ್ಲ. ಪ್ರಮುಖ ವೃತ್ತಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆಗೆ ಕ್ಷೇತ್ರಕ್ಕೆ ₹ 20 ಲಕ್ಷ ಅನುದಾನ ನಿಗದಿಯಾಗಿದೆ. ಪ್ರಮುಖ ವೃತ್ತದಲ್ಲಿ ಕ್ಯಾಮೆರಾ ಅಳವಡಿಸಲಾಗುವುದು. ಎನ್‌.ವಿ ಗಾರ್ಡನ್‌ನಲ್ಲಿ ಮೈದಾನವಿದ್ದು, ₹ 8 ಕೋಟಿ ವೆಚ್ಚದಲ್ಲಿ ಸ್ಟೇಡಿಯಂ ನಿರ್ಮಿಸಲಾಗುವುದು.

***

ವಿನೋದ್, ಚಿನ್ನಪ್ಪ ಗಾರ್ಡನ್‌

lಪ್ರಶ್ನೆ: ಈ ಭಾಗದಲ್ಲಿ ಖಾಲಿ ನಿವೇಶನಗಳು ಹೆಚ್ಚಾಗಿವೆ. ಅವುಗಳು ಅಕ್ರಮ ಚಟುವಟಿಕೆಯ ತಾಣಗಳಾಗಿವೆ. ಯುವಕರು ಅಲ್ಲಿಗೆ ಬಂದು ಗಾಂಜಾ ಸೇವಿಸುತ್ತಾರೆ.

ಶಾಸಕ: ಈ ಭಾಗದ ಖಾಲಿ ಪ್ರದೇಶಗಳು ವಿವಾದದಿಂದ ಕೂಡಿವೆ. ಬೆಳೆದಿರುವ ಗಿಡಗಂಟಿಗಳನ್ನು ಬಿಬಿಎಂಪಿಯಿಂದಲೇ ತೆರವುಗೊಳಿಸಿ, ಬಳಿಕ ಮಾಲೀಕರಿಂದ ಖರ್ಚು ವಸೂಲಿ ಮಾಡಲು ಸಾಧ್ಯವೇ ಎಂದು ಪರಿಶೀಲಿಸಲಾಗುವುದು. ವಿವಾದಾತ್ಮಕ ಅಥವಾ ಖಾಸಗಿ ಜಾಗಕ್ಕೆ ಸರ್ಕಾರದಿಂದ ಕಾಂಪೌಂಡ್ ನಿರ್ಮಿಸಲು ಸಾಧ್ಯವಿಲ್ಲ. ಈ ಭಾಗದಲ್ಲಿ ಮತ್ತೊಮ್ಮೆ ಪಾದಯಾತ್ರೆ ನಡೆಸುವೆ.

***

ಜಯಸೂರ್ಯ, ಮುದ್ದಪ್ಪ ಗಾರ್ಡನ್‌

lಪ್ರಶ್ನೆ: ದಚಾರಿ ಮಾರ್ಗದಲ್ಲಿ ನಡೆಯಲು ಸಾಧ್ಯವಿಲ್ಲ. ಫುಟ್‌ಪಾತ್‌ಗಳು ಏರುಪೇರಾಗಿವೆ.

ಶಾಸಕ: ದುರಸ್ತಿಗಾಗಿ ತಕ್ಷಣವೇ ಕ್ರಮ ಕೈಗೊಳ್ಳಲಾಗುವುದು.

***

ಮಾಯಾ, ಕುಮಾರಕೃಪ

lಪ್ರಶ್ನೆ: ವಸತಿಯುತ ಬಡಾವಣೆಯಲ್ಲಿಯೇ ವೈನ್ಸ್‌ ಶಾಪ್‌ ಇದ್ದು, ನಾಗರಿಕರಿಗೆ ಕಿರಿಕಿರಿ ಉಂಟಾಗುತ್ತಿದೆ.

ಶಾಸಕ: ರಾತ್ರೋರಾತ್ರಿ ನಿರಾಕ್ಷೇಪಣಾ ಪತ್ರ ಪಡೆದುಕೊಂಡಿದ್ದಾರೆ. ಜನವಸತಿ ಪ್ರದೇಶದಲ್ಲಿ ವೈನ್ಸ್‌ ಶಾಪ್‌ಗೆ ಅನುಮತಿ ಯಾರು ಕೊಟ್ಟರೋ? ಕ್ರಮಕ್ಕೆ ಸೂಚಿಸುತ್ತೇನೆ.

***

ಡಿ.ಆರ್‌.ಪ್ರಕಾಶ್‌, ಸ್ಥಾಪಕ ಅಧ್ಯಕ್ಷ, ಆಸ್ಬರ್ನ್‌ ರಸ್ತೆ ನಿವಾಸಿಗಳ ಕ್ಷೇಮಾಭಿವೃದ್ಧಿ ಒಕ್ಕೂಟ

lಪ್ರಶ್ನೆ: ರಸ್ತೆ ಕಾಮಗಾರಿ ನಡೆದ ವಿವರದ ಬಗ್ಗೆ ಫಲಕ ಅಳವಡಿಸಬೇಕು. ಫುಟ್‌ಪಾತ್‌ಗಳು ಅವೈಜ್ಞಾನಿಕವಾಗಿದ್ದು ಸರಿ ಪಡಿಸಬೇಕು.

ಶಾಸಕ: ಕಾಮಗಾರಿ ವಿವರದ ಫಲಕ ಅಳವಡಿಸಲು ಬಿಬಿಎಂಪಿಗೆ ನಿರ್ದೇಶನ ನೀಡಲಾಗಿದೆ. ಈ ಪ್ರದೇಶಕ್ಕೆ ಖುದ್ದು ಭೇಟಿ ನೀಡಿ ಪರಿಶೀಲಿಸುವೆ.

***

ಗಿರೀಶ್‌, ಸಂಪಂಗಿರಾಮನಗರ

lಪ್ರಶ್ನೆ: ನೀರಿನ ಶುಲ್ಕವು ₹ 6 ಸಾವಿರದಷ್ಟು ಬಂದಿದೆ. ಕುಡಿಯುವ ನೀರು ಸಹ ಶುದ್ಧವಾಗಿಲ್ಲ.

ಶಾಸಕ: ನೀರಿನ ಶುಲ್ಕದ ಹಿಂಬಾಕಿ ಮನ್ನಾ ಮಾಡಲು ಸಾಧ್ಯವೇ ಎಂಬುದನ್ನು ಪರಿಶೀಲಿಸುವ ಕುರಿತು ಅಧಿಕಾರಿಗಳು ಹಾಗೂ ಸಚಿವರೊಂದಿಗೆ ಚರ್ಚಿಸಲಾಗುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.