ADVERTISEMENT

ಜ.3ರಿಂದ ಆನ್‌ಲೈನ್‌ನಲ್ಲೇ ಚಿತ್ರಸಂತೆ

ಕೊರೊನಾ ಸೇನಾನಿಗಳಿಗೆ ಅರ್ಪಣೆ l 1,500 ಕಲಾವಿದರು ಭಾಗವಹಿಸುವ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2020, 20:31 IST
Last Updated 21 ನವೆಂಬರ್ 2020, 20:31 IST
ಬಿ.ಎಲ್‌.ಶಂಕರ್‌
ಬಿ.ಎಲ್‌.ಶಂಕರ್‌   

ಬೆಂಗಳೂರು: ಕರ್ನಾಟಕ ಚಿತ್ರಕಲಾ ಪರಿಷತ್ತು ಆಯೋಜಿಸುವ ಚಿತ್ರಸಂತೆ, ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಆನ್‌ಲೈನ್‌ ಮೂಲಕ ಆಯೋಜಿಸಲ್ಪಡುತ್ತಿದ್ದು, 18ನೇ ಚಿತ್ರಸಂತೆಯುಜ.3ರಿಂದ ಆರಂಭವಾಗಿ ಒಂದು ತಿಂಗಳು ನಡೆಯಲಿದೆ.

‘ಸಾರ್ವಜನಿಕರ ಹಿತದೃಷ್ಟಿಯಿಂದ ಈ ಬಾರಿ ಆನ್‌ಲೈನ್‌ ಮೂಲಕ ಚಿತ್ರಸಂತೆ ನಡೆಸಲಾಗುತ್ತಿದೆ. ಕೊರೊನಾ ಸೇನಾನಿಗಳಿಗೆ ಈ ಬಾರಿಯ ಚಿತ್ರಸಂತೆ ಅರ್ಪಿಸಲಾಗುವುದು’ ಎಂದು ಚಿತ್ರಕಲಾ ಪರಿಷತ್‌ನ ಅಧ್ಯಕ್ಷ ಡಾ. ಬಿ.ಎಲ್. ಶಂಕರ್‌ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಪರಿಷತ್ತಿನ 5 ಗ್ಯಾಲರಿ ಮತ್ತು ಕಲಾ ವಿಶ್ವವಿದ್ಯಾಲಯದ 10 ತರಗತಿ ಕೊಠಡಿಗಳನ್ನು ಗ್ಯಾಲರಿಗಳಾಗಿ ಪರಿವರ್ತಿ
ಸಿದ್ದು ಅಲ್ಲಿಯೂ ಭಾರತದ ಆಯ್ದ ಮತ್ತು ಆಹ್ವಾನಿತ ಪ್ರಸಿದ್ಧ ಕಲಾವಿದರ ಕಲಾ ಕೃತಿಗಳನ್ನು ಚಿತ್ರಸಂತೆಯ ಅವಧಿ ಪೂರ್ತಿ ಪ್ರದರ್ಶಿಸಲಾಗುವುದು’ ಎಂದು ತಿಳಿಸಿದರು.

ADVERTISEMENT

‘ದೇಶ ಮತ್ತು ವಿದೇಶದ 18ರಿಂದ 80 ವಯೋಮಿತಿಯ 1,500 ಕಲಾವಿದರು ಭಾಗವಹಿಸಲಿದ್ದಾರೆ. ಪ್ರತಿ
ಯೊಬ್ಬರಿಗೂ ಪ್ರತ್ಯೇಕವಾಗಿ ಒಂದು ಆನ್‍ಲೈನ್ ಪುಟವನ್ನು ಮೀಸಲಿರಿಸಲಾಗುತ್ತದೆ. ಪ್ರತಿ ಕಲಾವಿದನೂ ತಮಗೆ ಮೀಸಲಿರಿಸಿದ ಪುಟದಲ್ಲಿ 10 ಕಲಾಕೃತಿ ಗಳನ್ನು ಪ್ರದರ್ಶಿಸಬಹುದು’ ಎಂದರು.

‘ಕಲಾವಿದರು ಪುಟದಲ್ಲಿ ತಮ್ಮಸಂಪರ್ಕದ ವಿವರಗಳನ್ನು ದಾಖಲಿಸಬೇಕು. ಕಲಾಸಕ್ತರು ತಮ್ಮ ಇಚ್ಛೆಯ ಪುಟಗಳಿಗೆ ಭೇಟಿ ನೀಡಿ ಕಲಾವಿದನನ್ನು ನೇರವಾಗಿ ಸಂಪರ್ಕಿಸಿ ಕಲಾಕೃತಿ ಕೊಳ್ಳಬಹುದು. ಕಲಾಕೃತಿಗಳ ಮಾರಾಟದಲ್ಲಿ ಕಲಾ ಪರಿಷತ್ತು ಯಾವುದೇ ಹಣ ಪಡೆಯುವುದಿಲ್ಲ. ಕಲಾವಿದ ಮತ್ತು ಕಲಾಸಕ್ತರ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸಲಿದೆ’ ಎಂದು ಹೇಳಿದರು.

ಚಿತ್ರಸಂತೆಯಲ್ಲಿ ಭಾಗವಹಿಸುವ ರಾಜ್ಯದ ಕಲಾವಿದರಿಗೆ ₹500, ಬೇರೆ ರಾಜ್ಯದ ಕಲಾವಿದರಿಗೆ ₹1,000 ಹಾಗೂ ಅಂತರರಾಷ್ಟ್ರೀಯ ಕಲಾವಿದರಿಗೆ ₹1,500 ಶುಲ್ಕ ನಿಗದಿಗೊಳಿಸಲಾಗಿದೆ ಎಂದು ಹೇಳಿದರು.

ಕರ್ನಾಟಕ ಚಿತ್ರಕಲಾ ಪರಿಷತ್ತಿನ ಜಾಲತಾಣಗಳಾದ ಫೇಸ್‍ಬುಕ್, ಇನ್‍ಸ್ಟಾಗ್ರಾಂ, ಯೂಟ್ಯೂಬ್ ಹಾಗೂhttps://www karnatakachitrakalaparishath.com/chitra-santhe/ ವೆಬ್‌ಸೈಟ್‌ನಲ್ಲಿ ಕಲಾಕೃತಿಗಳನ್ನು ವೀಕ್ಷಿಸಬಹುದು.

ನೀಲಿಮಾ ಶೇಖ್‌ಗೆ ಪ್ರಶಸ್ತಿ

ಚಿತ್ರಸಂತೆಯಲ್ಲಿ ನೀಡಲಾಗುವ ಪ್ರೊ.ಎಂ.ಎಸ್. ನಂಜುಂಡರಾವ್ ರಾಷ್ಟ್ರೀಯ ಪ್ರಶಸ್ತಿಯನ್ನು ಈ ಬಾರಿ ಬರೋಡಾದ ಕಲಾವಿದೆ ನೀಲಿಮಾ ಶೇಖ್‍ ಅವರಿಗೆ ನೀಡಲು ತೀರ್ಮಾನಿಸಲಾಗಿದೆ. ಪ್ರಶಸ್ತಿಯು ₹ 1 ಲಕ್ಷ ನಗದು ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.

ಚಿತ್ರಕಲಾ ಸಮ್ಮಾನ್ ಪ್ರಶಸ್ತಿಗಳ ಅಡಿಯಲ್ಲಿ ಡಿ. ದೇವರಾಜ್ ಅರಸು ಪ್ರಶಸ್ತಿ, ಎಚ್.ಕೆ. ಕೇಜ್ರಿವಾಲ್ ಪ್ರಶಸ್ತಿ, ಎಂ.ಆರ್ಯಮೂರ್ತಿ ಪ್ರಶಸ್ತಿ ಹಾಗೂ ವೈ. ಸುಬ್ರಹ್ಮಣ್ಯ ರಾಜು ಪ್ರಶಸ್ತಿಯನ್ನು ನಾಲ್ವರು ಕಲಾವಿದರಿಗೆ ನೀಡಲಾಗುತ್ತಿದ್ದು, ಇವು ತಲಾ ₹50 ಸಾವಿರ ನಗದು ಬಹುಮಾನ ಒಳಗೊಂಡಿವೆ ಎಂದು ಬಿ.ಎಲ್. ಶಂಕರ್ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.