ADVERTISEMENT

ಜಯದೇವ: ಇಥಿಯೋಪಿಯಾದ ಮಕ್ಕಳಿಗೆ ಹೃದಯ ಶಸ್ತ್ರಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2024, 14:43 IST
Last Updated 27 ಫೆಬ್ರುವರಿ 2024, 14:43 IST
ಶಸ್ತ್ರಚಿಕಿತ್ಸೆಗೆ ಒಳಪಟ್ಟ ಇಥಿಯೋಪಿಯಾ ಮಕ್ಕಳೊಂದಿಗೆ ಡಾ.ಕೆ.ಎಸ್. ರವೀಂದ್ರನಾಥ್ ಹಾಗೂ ವೈದ್ಯರು ಉಪಸ್ಥಿತರಿದ್ದಾರೆ.
ಶಸ್ತ್ರಚಿಕಿತ್ಸೆಗೆ ಒಳಪಟ್ಟ ಇಥಿಯೋಪಿಯಾ ಮಕ್ಕಳೊಂದಿಗೆ ಡಾ.ಕೆ.ಎಸ್. ರವೀಂದ್ರನಾಥ್ ಹಾಗೂ ವೈದ್ಯರು ಉಪಸ್ಥಿತರಿದ್ದಾರೆ.   

ಬೆಂಗಳೂರು: ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ಇಥಿಯೋಪಿಯಾದ ಐವರು ಮಕ್ಕಳಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ ನಡೆಸಿದ್ದು, ಮಕ್ಕಳು ಚೇತರಿಸಿಕೊಂಡಿದ್ದಾರೆ. 

ಐವರಲ್ಲಿ ಮೂವರು ‘ನೀಲಿ ಮಕ್ಕಳು‘, ಇಬ್ಬರಿಗೆ ಶ್ವಾಸಕೋಶದ ಸಮಸ್ಯೆ, ಅಧಿಕ ರಕ್ತದೊತ್ತಡದ ಜತೆಗೆ ಹೃದಯದಲ್ಲಿ ರಂಧ್ರ ಇದ್ದವು. ಇಥಿಯೋಪಿಯಾದಲ್ಲಿ ವರ್ಷಗಟ್ಟಲೆ ಕಾಯ್ದರೂ ಚಿಕಿತ್ಸೆ ದೊರೆಯಲಿಲ್ಲ. ಇದರಿಂದಾಗಿ ಇಲ್ಲಿನ ಜಯದೇವ ಸಂಸ್ಥೆಗೆ ಬಂದಿದ್ದರು. 14 ವರ್ಷದ ಇಬ್ಸ್ರಾ, 12 ವರ್ಷದ ಮೇರಿಮ್ ಶಾಫಿ, 8 ವರ್ಷದ ಎಮಂಡಾ ಎಂಟೆಸೆಸೆಬ್, 6 ವರ್ಷದ ಅಮಿನಾದಾಬ್ ಅಲೆಮು ಹಾಗೂ 16 ವರ್ಷದ ಅಯೂಬ್ ಅಬ್ದುರೇಬ್ ಶಸ್ತ್ರಚಿಕಿತ್ಸೆಗೆ ಒಳಗಾದ ಮಕ್ಕಳು. 

‘ಪ್ರತಿ ಸಾವಿರ ಶಿಶುಗಳಲ್ಲಿ 8ರಿಂದ 10 ಶಿಶುಗಳು ಜನ್ಮಜಾತ ರೋಗಗಳನ್ನು ಹೊಂದಿರುತ್ತಾರೆ. ಸಾಮಾನ್ಯವಾಗಿ ಹೃದಯದಲ್ಲಿ ರಂಧ್ರವಾಗುವ ಅಥವಾ ಕವಾಟಗಳು ಕಿರಿದಾಗುವ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಈ ರೀತಿ ಸಮಸ್ಯೆ ಹೊಂದಿರುವವರಿಗೆ ಸಾಮಾನ್ಯವಾಗಿ ಜ್ವರ, ಕೆಮ್ಮು, ನೆಗಡಿ, ಬೆಳವಣಿಗೆ ಕುಂಠಿತಗೊಳ್ಳುವಿಕೆ, ಚರ್ಮ ಮತ್ತು ಉಗುರು ನೀಲಿ ಬಣ್ಣಕ್ಕೆ ತಿರುಗುವುದು ಸೇರಿ ವಿವಿಧ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ’ ಎಂದು ಸಂಸ್ಥೆ ನಿರ್ದೇಶಕ ಡಾ.ಕೆ.ಎಸ್. ರವೀಂದ್ರನಾಥ್ ತಿಳಿಸಿದ್ದಾರೆ. 

ADVERTISEMENT

‘2024ರ ಜ.31ರಂದು ಇಥಿಯೋಪಿಯಾದ ಐವರು ಮಕ್ಕಳು ದಾಖಲಾಗಿದ್ದರು. ರಿಯಾಯಿತಿ ದರದಲ್ಲಿ ಮಕ್ಕಳಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಇದಕ್ಕೆ ರೋಟರಿ ಮಿಡ್‌ ಟೌನ್‌ ಬೆಂಗಳೂರು ಮತ್ತು ರೋಟರಿ ನೀಡಿ ಹಾರ್ಟ್ ಫೌಂಡೇಶನ್ ಶಸ್ತ್ರಚಿಕಿತ್ಸೆಗೆ ಹಣವನ್ನು ದೇಣಿಗೆಯಾಗಿ ನೀಡಿದ್ದವು. ಉಳಿದ ಹಣವನ್ನು ಸಂಸ್ಥೆ ವತಿಯಿಂದ ಭರಿಸಲಾಗಿದೆ. ಡಾ.ಪಿ.ಕೆ. ಸುನೀಲ್, ಡಾ. ದಿವ್ಯಾ, ಡಾ. ರಶ್ಮಿ ನೇತೃತ್ವದಲ್ಲಿ ವೈದ್ಯರ ತಂಡವು ಹೃದಯ ಶಸ್ತ್ರಚಿಕಿತ್ಸೆ ನಡೆಸಿದೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.