ಬೆಂಗಳೂರು: ‘ಹೃದಯದ ನಾಲ್ಕು ಪ್ರಧಾನ ಕವಾಟಗಳಲ್ಲಿ ಒಂದಾದ ಮಿಟ್ರಲ್ ಕವಾಟದ (ಎಡ ಹೃತ್ಕರ್ಣ) ಸಮಸ್ಯೆ ನಿವಾರಣೆಯ ಶಸ್ತ್ರಚಿಕಿತ್ಸೆಯಲ್ಲಿ (ಮಿಟ್ರಲ್ ವಾಲ್ವ್ ರಿಪೈರ್ಸ್- ಎಂವಿಆರ್) ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ಮುಂಚೂಣಿಯಲ್ಲಿದ್ದು, ಈವರೆಗೆ 2,614 ಮಿಟ್ರಲ್ ಕವಾಟಗಳ ಸಮಸ್ಯೆ ನಿವಾರಣೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ’ ಎಂದು ಸಂಸ್ಥೆಯ ಹೃದಯ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಪ್ರಸನ್ನ ಸಿಂಹ ಮೋಹನ್ ರಾವ್ ತಿಳಿಸಿದರು.
ಸಂಸ್ಥೆ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡ ‘ಜಯದೇವ ಮಿಟ್ರಲ್’ ಶೃಂಗಸಭೆ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ, ಮಾತನಾಡಿದರು.
‘ಮಿಟ್ರಲ್ ಕವಾಟ ಬದಲಿಗಿಂತ ಎಂವಿಆರ್ ಶಸ್ತ್ರಚಿಕಿತ್ಸೆಯು ರೋಗಿಗೆ ಹೆಚ್ಚು ಅನುಕೂಲಕರವಾಗಿದೆ. ಆದರೆ, ಈ ಶಸ್ತ್ರಚಿಕಿತ್ಸೆ ಸಂಕೀರ್ಣ ಪ್ರಕ್ರಿಯೆ. ಎಂವಿಆರ್ ಶಸ್ತ್ರಚಿಕಿತ್ಸೆ ಪ್ರಾರಂಭವಾದದ್ದು ನೂರು ವರ್ಷಗಳ ಹಿಂದೆ. ಸಂಕೀರ್ಣವಾದ ಈ ಶಸ್ತ್ರಚಿಕಿತ್ಸೆಯನ್ನು ತಂತ್ರಜ್ಞಾನ ಹಾಗೂ ತಜ್ಞವೈದ್ಯರ ನೆರವಿನಿಂದ ಸಂಸ್ಥೆಯಲ್ಲಿ ಮಾಡಲಾಗುತ್ತಿದೆ. ಈ ಶಸ್ತ್ರಚಿಕಿತ್ಸೆಯಲ್ಲಿ ಸಂಸ್ಥೆಯು ಆಗ್ನೇಯ ಏಷ್ಯಾದಲ್ಲಿಯೇ ಮುಂಚೂಣಿಯಲ್ಲಿದೆ. ಎಂವಿಆರ್ ಶಸ್ತ್ರಚಿಕಿತ್ಸೆಯ ಶತಮಾನೋತ್ಸವದ ಸ್ಮರಣಾರ್ಥ, ಈ ಶಸ್ತ್ರಚಿಕಿತ್ಸೆಯ ಹೊಸ ವಿಧಾನಗಳ ಬಗ್ಗೆ ಹೃದಯ ಶಸ್ತ್ರಚಿಕಿತ್ಸಾ ತಜ್ಞರಿಗೆ ತರಬೇತಿ ನೀಡಲಾಗುತ್ತಿದೆ’ ಎಂದು ಹೇಳಿದರು.
ಸಂಸ್ಥೆಯ ನಿರ್ದೇಶಕ ಡಾ.ಕೆ.ಎಸ್.ರವೀಂದ್ರನಾಥ್, ‘ಮಿಟ್ರಲ್ ಕವಾಟ ಸಮಸ್ಯೆ ನಿವಾರಣೆ ಶಸ್ತ್ರಚಿಕಿತ್ಸೆಗೆ ಸಾಕಷ್ಟು ಅನುಭವ ಹಾಗೂ ತರಬೇತಿ ಬೇಕಾಗುತ್ತದೆ. ಆದ್ದರಿಂದ ವೈದ್ಯಕೀಯ ತಜ್ಞರು ಯುವ ವೈದ್ಯರಿಗೆ ಈ ವಿಧಾನದಲ್ಲಿ ಅಗತ್ಯ ಮಾರ್ಗದರ್ಶನದ ಜತೆಗೆ ತರಬೇತಿಯನ್ನು ಒದಗಿಸಬೇಕು. ರೋಗಿಗಳ ಆರೋಗ್ಯ ಸುಧಾರಣೆಯೇ ನಮ್ಮ ಆದ್ಯತೆಯಾಗಬೇಕು. ಆ ನಿಟ್ಟಿನಲ್ಲಿ ಎಲ್ಲರೂ ಒಟ್ಟಾಗಿ ಕಾರ್ಯನಿರ್ವಹಿಸಬೇಕು’ ಎಂದು ತಿಳಿಸಿದರು.
ಫ್ರಾನ್ಸ್ ಸೇರಿ ವಿವಿಧ ದೇಶಗಳ 180 ಹೃದಯ ಚಿಕಿತ್ಸಾ ತಜ್ಞರು ಈ ಶೃಂಗಸಭೆಯಲ್ಲಿ ಭಾಗವಹಿಸಿದ್ದರು. ಎಂವಿಆರ್ ಶಸ್ತ್ರಚಿಕಿತ್ಸೆಗೆ ಇರುವ ಅವಕಾಶಗಳ ಬಗ್ಗೆ ಚರ್ಚಿಸಲಾಯಿತು. ಶನಿವಾರವೂ ಈ ಶೃಂಗ ನಡೆಯಲಿದ್ದು, ರೋಬೋಟ್‌ಗಳ ನೆರವಿನಿಂದ ಸಮಸ್ಯೆ ನಿವಾರಣೆ ಸೇರಿ ವಿವಿಧ ವಿಷಯಗಳ ಬಗ್ಗೆ ವಿಚಾರಗೋಷ್ಠಿ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.