ADVERTISEMENT

ಜಯಲಲಿತಾ ಅವರಿಂದ ಜಪ್ತಿ ಮಾಡಿದ್ದ ವಸ್ತುಗಳ ಹರಾಜು: ಪ್ರಾಸಿಕ್ಯೂಟರ್ ನೇಮಕ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2023, 20:45 IST
Last Updated 7 ಏಪ್ರಿಲ್ 2023, 20:45 IST
   

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಜಯಲಲಿತಾ ಅವರಿಂದ ಜಪ್ತಿ ಮಾಡಲಾಗಿದ್ದ ಕೋಟ್ಯಂತರ ರೂಪಾಯಿ ಬೆಲೆಬಾಳುವ ವಸ್ತುಗಳ ವಿಲೇವಾರಿ ಕಾನೂನು ಪ್ರಕ್ರಿಯೆ ಕೈಗೊಳ್ಳಲು ರಾಜ್ಯ ಪಬ್ಲಿಕ್ ಪ್ರಾಸಿಕ್ಯೂಟರ್-1 ಕಿರಣ್ ಎಸ್. ಜವಳಿ ಅವರನ್ನು ಪ್ರಕರಣದ ‘ವಿಶೇಷ ಪ್ರಾಸಿಕ್ಯೂಟರ್’ ಆಗಿ ನೇಮಕ ಮಾಡಲಾಗಿದೆ. ಜಯಲಲಿತಾ ವಿರುದ್ಧದ ಪ್ರಕರಣವನ್ನು ವಿಚಾರಣೆ ನಡೆಸಿದ್ದ ನಗರದ ವಿಶೇಷ ನ್ಯಾಯಾಲಯ (ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ) ಬರೆದ ಪತ್ರವನ್ನು ಆಧರಿಸಿ ರಾಜ್ಯ ಕಾನೂನು ಇಲಾಖೆ ಮಾರ್ಚ್ 27ರಂದು ಆದೇಶ ಹೊರಡಿಸಿದೆ.

ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ವಿಶೇಷ ನ್ಯಾಯಾಲಯವು ಜಯಲಲಿತಾಗೆ 4 ವರ್ಷ ಜೈಲು ಮತ್ತು ₹ 100 ಕೋಟಿ ದಂಡ ವಿಧಿಸಿ 2014ರ ಸೆಪ್ಟೆಂಬರ್ 27ರಂದು ಆದೇಶಿಸಿತ್ತು. ‘ಜಪ್ತಿ ಮಾಡಲಾಗಿದ್ದ ಬೆಲೆಬಾಳುವ ವಸ್ತುಗಳನ್ನು ಆರ್‌ಬಿಐ, ಎಸ್‌ಬಿಐಗೆ ಅಥವಾ ಸಾರ್ವಜನಿಕ ಹರಾಜು ಮೂಲಕ ಮಾರಾಟ ಮಾಡಬೇಕು. ಅದರಿಂದ ಬಂದ ಹಣವನ್ನು ದಂಡಮೊತ್ತಕ್ಕೆ ಹೊಂದಾಣಿಕೆ ಮಾಡಬೇಕು’ ಎಂದು ನಿರ್ದೇಶಿಸಲಾಗಿತ್ತು.

7 ಕೆ.ಜಿ ಚಿನ್ನ, 740 ಚಪ್ಪಲಿ

ADVERTISEMENT

7.04 ಕೆ.ಜಿ ತೂಕದ 468 ಬಗೆಯ ಚಿನ್ನ ಹಾಗೂ ವಜ್ರಖಚಿತ ಆಭರಣಗಳು, 700 ಕೆ.ಜಿ. ತೂಕದ ಬೆಳ್ಳಿ ಆಭರಣಗಳು, 740 ದುಬಾರಿ ಚಪ್ಪಲಿಗಳು, 11,344 ರೇಷ್ಮೆ ಸೀರೆಗಳು, 250 ಶಾಲು, 12 ರೆಫ್ರಿಜರೇಟರ್, 10 ಟಿವಿ ಸೆಟ್, 8 ವಿಸಿಆರ್, 1 ವಿಡಿಯೊ ಕ್ಯಾಮರಾ, 4 ಸಿಡಿ ಪ್ಲೇಯರ್, 2 ಆಡಿಯೊ ಡೆಕ್, 24 ಟೂ-ಇನ್ ಒನ್ ಟೇಪ್‌ ರೆಕಾರ್ಡರ್, 1040 ವಿಡಿಯೊ ಕ್ಯಾಸೆಟ್, 3 ಐರನ್ ಲಾಕರ್,

₹ 1,39,202 ನಗದು ಸೇರಿದಂತೆ ಹಲವು ವಸ್ತುಗಳನ್ನು ಜಯಲಲಿತಾ ಅವರಿಂದ ಜಪ್ತಿ ಮಾಡಲಾಗಿತ್ತು. ಈಗ ಇವುಗಳನ್ನು ವಿಲೇವಾರಿ ಮಾಡಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.