ಬೆಂಗಳೂರು: ಪ್ರತಿಷ್ಠಿತ ಜಯನಗರ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ 16 ಮತಗಳ ಅಂತರದಿಂದ ವಿಜಯ ಸಾಧಿಸಿದೆ. ಕ್ಷೇತ್ರ ಪುನರ್‌ವಿಂಗಡಣೆ ನಂತರ ಬೆಂಗಳೂರು ನಗರ ಜಿಲ್ಲೆಯಲ್ಲಿ ಈವರೆಗಿನ ಅತಿ ಕಡಿಮೆ ಅಂತರದ ಗೆಲುವು ಇದಾಗಿದ್ದು, ದಾಖಲೆ ನಿರ್ಮಿಸಿದೆ.
ಗಾಂಧಿನಗರ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ದಿನೇಶ್ ಗುಂಡೂರಾವ್ 105 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದೇ ಅತಿ ಕಡಿಮೆ ಅಂತರ ಎಂದು ದಾಖಲಾಗಿತ್ತು. ಆದರೆ ಬುಧವಾರ ಶನಿವಾರ ವೇಳೆಗೆ ಆ ದಾಖಲೆ ಜಯನಗರ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಪಾಲಾಯಿತು.
ಜಯನಗರದ ಎಸ್‌ಎಸ್‌ಎಂಆರ್‌ವಿ ಪಿಯು ಕಾಲೇಜಿನಲ್ಲಿ ಕ್ಷೇತ್ರದ ಮತ ಎಣಿಕೆ ನಡೆದಿತ್ತು. ಮತಯಂತ್ರಗಳ ಎಣಿಕೆ ಮುಗಿದಾಗ, ಕಾಂಗ್ರೆಸ್‌ನ ಸೌಮ್ಯ ರೆಡ್ಡಿ ಅವರಿಗೆ 57,591 ಮತಗಳು ಬಂದಿದ್ದವು. ಬಿಜೆಪಿಯ ಸಿ.ಕೆ. ರಾಮಮೂರ್ತಿ 57,297 ಮತಗಳನ್ನು ಗಳಿಸಿದ್ದರು. 294 ಮತಗಳಿಂದ ಕಾಂಗ್ರೆಸ್ ಮುನ್ನಡೆ ಸಾಧಿಸಿದ್ದಾಗ ಬಿಜೆಪಿ ಅಂಚೆ ಮತಗಳ ಮರು ಎಣಿಕೆಗೆ ಪಟ್ಟು ಹಿಡಿಯಿತು.
ಅಂಚೆ ಮತಗಳ ಎಣಿಕೆ ಮೊದಲೇ ಮುಗಿದಿತ್ತು. ಅವುಗಳಲ್ಲಿ ಸುಮಾರು 30 ಮತ ತಿರಸ್ಕರಿಸಲಾಗಿತ್ತು. ಈ ಬಗ್ಗೆ ಪರಿಶೀಲಿಸಬೇಕು ಎಂದು ಚುನಾವಣಾ ವೀಕ್ಷಕರಿಗೆ ಬಿಜೆಪಿಯ ಏಜೆಂಟರು ಕೋರಿದರು. ಸಂಸದ ತೇಜಸ್ವಿ ಸೂರ್ಯ ಸ್ಥಳಕ್ಕೆ ಬಂದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ರಾಮಲಿಂಗಾರೆಡ್ಡಿ ಕೂಡ ಅಲ್ಲಿದ್ದು, ತಿರಸ್ಕರಿಸಿರುವ ಮತಗಳನ್ನು ಮತ್ತೆ ಪರಿಗಣಿಸುವುದು ಅಥವಾ ಮರು ಎಣಿಕೆ ಬೇಡ ಎಂದು ಪಟ್ಟುಹಿಡಿದರು.
‘ಒಟ್ಟು 750 ಅಂಚೆ ಮತಗಳಿದ್ದವು. ಮನೆಯಿಂದ ಮತದಾನ ಮಾಡಿದ್ದ ಮತಗಳು ಇದ್ದವು. 30 ಮತಪತ್ರಗಳನ್ನು ಅಧಿಕಾರಿ ಸೀಲ್ ಹಾಕಿಲ್ಲ ಎಂಬ ಕಾರಣಕ್ಕಾಗಿ ಎಣಿಕೆ ವೇಳೆ ತಿರಸ್ಕರಿಸಲಾಗಿತ್ತು. ಇದು ಅಧಿಕಾರಿಗಳ ತಪ್ಪು, ಮತದಾರರದ್ದು ಅಲ್ಲ. ನಿಯಮದಂತೆ ಇವುಗಳನ್ನು ಪರಿಗಣಿಸಬೇಕು ಎಂದು ಆಗ್ರಹ
ಪಡಿಸಲಾಯಿತು. ಅದರಂತೆ ಕ್ರಮ ಕೈಗೊಂಡರು’ ಎಂದು ಬಿಜೆಪಿ ಬೂತ್ ಏಜೆಂಟ್ ಸೋಮಶೇಖರ್ ಹೇಳಿದರು.
ತಿರಸ್ಕರಿಸಿದ್ದ ಮತಗಳನ್ನು ನಿಯಮದಂತೆ ಪರಿಗಣಿಸಿದಾಗ, ಬಿಜೆಪಿಗೆ 17 ಮತಗಳ ಮುನ್ನಡೆ ದೊರೆಯಿತು. ಆ ಮತಗಳಲ್ಲಿ ಒಂದು ತೀರಾ ಗೋಜಲಾಗಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ಆರೋಪಿಸಿದರು. ಅದನ್ನು ಕೈಬಿಡಲಾಯಿತು. ಕೊನೆಗೆ 16 ಮತಗಳ ಮುನ್ನಡೆ ಬಿಜೆಪಿ ಅಭ್ಯರ್ಥಿ ಸಿ.ಕೆ.ರಾಮಮೂರ್ತಿ ಅವರಿಗೆ ಲಭಿಸಿತು. ಈ ಹಿಂದೆ ಫಲಿತಾಂಶ ಪ್ರಕಟಿಸಿದಂತೆ, ಹಳೆಯ 160 ಮತಗಳಿಂದ ಮುಂದಿದ್ದ ಕಾಂಗ್ರೆಸ್ ಅಭ್ಯರ್ಥಿಗೆ ಗೆಲುವು ಘೋಷಿಸಬೇಕೆಂದು ರಾಮಲಿಂಗಾರೆಡ್ಡಿ ಒತ್ತಾಯಿಸಿದರು. ಡಿ.ಕೆ. ಶಿವಕುಮಾರ್, ಸಂಸದ ಡಿ.ಕೆ.ಸುರೇಶ್, ಬಿಜೆಪಿಯ ಆರ್.ಅಶೋಕ ಅವರು ಸ್ಥಳಕ್ಕೆ ಬಂದಿದ್ದರಿಂದ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು.
ಶನಿವಾರ ಮಧ್ಯಾಹ್ನ 3.30ರಿಂದ ಈ ಪ್ರಹಸನ ಆರಂಭಗೊಂಡು ಮಧ್ಯರಾತ್ರಿವರೆಗೂ ನಡೆಯಿತು. ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಸ್ಥಳಕ್ಕೆ ಬಂದು ಮೂರು ಬಾರಿ ನಡೆದ ಮತಗಳ ಮರು ಎಣಿಕೆ, ಪರಿಗಣಿಸಿದ ಪ್ರಕ್ರಿಯೆಯನ್ನು ಪರಿಶೀಲಿಸಿದರು. ಎಲ್ಲವೂ ನಿಯಮದಂತೇ ಇದೆ ಎಂದು ಸಾಬೀತುಪಡಿಸಿದ ಮೇಲೆ ಬಿಜೆಪಿ ಅಭ್ಯರ್ಥಿ 16 ಮತಗಳಿಂದ ಜಯಗಳಿಸಿದ್ದಾರೆ ಎಂದು ಘೋಷಿಸಿ, ಪ್ರಮಾಣಪತ್ರ ವಿತರಿಸಿದರು.
ಅಂತಿಮವಾಗಿ, 750 ಮತಗಳಲ್ಲಿ 500 ಮತಗಳು ಬಿಜೆಪಿಗೆ ಹಾಗೂ 190 ಮತಗಳು ಕಾಂಗ್ರೆಸ್‌ಗೆ ಲಭಿಸಿದ್ದವು. ಉಳಿದವು ಇತರೆ ಪಕ್ಷಗಳಲ್ಲಿ ಹಂಚಿಹೋಗಿದ್ದವು. ಹೀಗಾಗಿ, ಕೊನೆಗೆ ಇವಿಎಂ ಮತಗಳು ಸೇರಿದಂತೆ 57,797 ಮತಗಳನ್ನು ರಾಮಮೂರ್ತಿ ಪಡೆದರೆ, ಸೌಮ್ಯ ರೆಡ್ಡಿ 57,781 ಮತಗಳಿಸಿದರು. ಬಿಜೆಪಿ ಅತ್ಯಂತ ಕಡಿಮೆ ಅಂತರದ ಗೆಲುವು ದಾಖಲಿಸಿತು.
ಮರುವಶಕ್ಕೆ ಜಯನಗರ ಕ್ಷೇತ್ರದಲ್ಲಿ ಎರಡು ಬಾರಿ ರಾಮಲಿಂಗಾರೆಡ್ಡಿ ವಿರುದ್ಧ ಸೋಲುಂಡಿದ್ದ ಬಿಜೆಪಿಯ ವಿಜಯಕುಮಾರ್ ಕ್ಷೇತ್ರ ಮರು ವಿಂಗಡಣೆಯಾದ ನಂತರದ 2008ರಿಂದ ಜಯನಗರದಲ್ಲಿ ಎರಡು ಬಾರಿ ಗೆಲುವು ಸಾಧಿಸಿದ್ದರು. 2018ರಲ್ಲಿ ಅವರ ನಿಧನಾನಂತರ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯ ರೆಡ್ಡಿ ಅವರು ಜೆಡಿಎಸ್ ಜೊತೆ ಹೊಂದಾಣಿಕೆಯೊಂದಿಗೆ ಗೆದ್ದಿದ್ದರು. ಈ ಕ್ಷೇತ್ರವನ್ನು ಮರುಪಡೆಯಬೇಕೆಂದು ಬಿಜೆಪಿ ಈ ಬಾರಿ ಶತಾಯಗತಾಯ ಪ್ರಯತ್ನಿಸಿತ್ತು. ತೀವ್ರ ಜಿದ್ದಾಜಿದ್ದಿಯಿಂದ ಕೂಡಿದ್ದ ಕ್ಷೇತ್ರದಲ್ಲಿ ಅತಿ ಕಡಿಮೆ ಅಂತರದ ಜಯ ದಾಖಲಾಗಿದೆ. ಇದರೊಂದಿಗೆ ಬಿಬಿಎಂಪಿಯ ಮಾಜಿ ಕಾರ್ಪೊರೇಟರ್ ಸಿ.ಕೆ. ರಾಮಮೂರ್ತಿ ಪ್ರಥಮ ಬಾರಿಗೆ ವಿಧಾನಸಭೆಗೆ ಪ್ರವೇಶಿಸುತ್ತಿದ್ದಾರೆ.
ಎಲ್ಲವೂ ನಿಯಮದಂತೆ: ರಾಮಮೂರ್ತಿ ಮತ ಎಣಿಕೆ ಕೇಂದ್ರದ ಕೊಠಡಿಗೆ ಮೊದಲು ರಾಮಲಿಂಗಾರೆಡ್ಡಿ ಅವರು ಬಂದು ಕೂಗಾಡಿದರು. ಅಧಿಕಾರಿಗಳು ಪ್ರತಿ ಮತದ ಮರು ಎಣಿಕೆಯನ್ನೂ ರೆಕಾರ್ಡ್ ಮಾಡಿದ್ದಾರೆ. ಎಲ್ಲ ನಿಯಮದಂತೆಯೇ ನಡೆದಿದೆ ಎಂದು ಬಿಜೆಪಿಯ ಸಿ.ಕೆ.ರಾಮಮೂರ್ತಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.