ಬೆಂಗಳೂರು: ‘ಮನೆ ಮುಂದೆ ಗಲೀಜು ಮಾಡುತ್ತದೆ’ ಎಂಬ ಕಾರಣಕ್ಕೆ ಏರ್‌ಗನ್‌ನಿಂದ ಬೀದಿನಾಯಿಗೆ ಗುಂಡು ಹೊಡೆದಿದ್ದ ಆರೋಪದಡಿನಿಮ್ಹಾನ್ಸ್ ಆಸ್ಪತ್ರೆಯ ನಿವೃತ್ತ ಪ್ರಾಧ್ಯಾಪಕ ಶ್ಯಾಮಸುಂದರ್ (83) ಎಂಬುವರನ್ನು ಜಯನಗರ ಪೊಲೀಸರು ಬಂಧಿಸಿ, ಠಾಣಾ ಜಾಮೀನು ಮೇಲೆ ಬಿಡುಗಡೆ ಮಾಡಿದ್ದಾರೆ.
‘ಜಯನಗರದ 5ನೇ ಹಂತದಲ್ಲಿ ಶ್ಯಾಮಸುಂದರ್ ವಾಸವಿದ್ದಾರೆ. ಅವರ ಮನೆ ಎದುರು ಬಂದು ಹೋಗುತ್ತಿದ್ದ ಬೀದಿನಾಯಿ ಗಲೀಜು ಮಾಡುತ್ತಿತ್ತು. ಜೋರಾಗಿ ಬೊಗಳುತ್ತಿತ್ತು. ಅದರಿಂದ ಕೋಪಗೊಂಡ ಅವರು, ನಾಯಿಯ ಮೇಲೆ ಏರ್‌ಗನ್‌ನಿಂದ ಮೂರು ಗುಂಡು ಹೊಡೆದಿದ್ದರು’ ಎಂದು ಪೊಲೀಸರು ಹೇಳಿದರು.
‘ನಾಯಿಯ ದೇಹದಿಂದ ರಕ್ತ ಬರುತ್ತಿತ್ತು. ನೋವಿನಿಂದ ನರಳಾಡುತ್ತಿತ್ತು. ಅದನ್ನು ಗಮನಿಸಿದ್ದ ಸ್ಥಳೀಯರು ನಾಯಿಯನ್ನು ಜಯನಗರ ಪಶು ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದರು. ಸ್ಕ್ಯಾನಿಂಗ್ ಮಾಡಿದಾಗಲೇ ಹೊಟ್ಟೆಯಲ್ಲಿ ಗುಂಡುಗಳು ಕಂಡುಬಂದಿದ್ದವು’ ಎಂದರು.
‘ಹೆಚ್ಚಿನ ಚಿಕಿತ್ಸೆಗಾಗಿ ನಾಯಿಯನ್ನು ಜೆ.ಪಿ. ನಗರದ ಖಾಸಗಿ ಪಶು ಆಸ್ಪತ್ರೆಗೆ ದಾಖಲಿಸಲಾಗಿದೆ. ಗುಂಡುಗಳನ್ನೂ ಹೊರಗೆ ತೆಗೆಯಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಪ್ರವೀಣ್ ಎಂಬುದರು ದೂರು ನೀಡಿದ್ದಾರೆ’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.