ಬೆಂಗಳೂರು: ಉದ್ಯಾನದಲ್ಲಿ ವಾಯುವಿಹಾರ ಮಾಡುವ ಮಹಿಳೆಯರ ಫೋಟೊ ಕ್ಲಿಕ್ಕಿಸುತ್ತಿದ್ದ ಹಾಗೂ ವಿಡಿಯೊ ಚಿತ್ರೀಕರಿಸಿಟ್ಟುಕೊಳ್ಳುತ್ತಿದ್ದ ಆರೋಪದಡಿ ಪ್ರಸನ್ನ ಎಂಬುವರನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ.
‘ಜಯನಗರ 7ನೇ ಹಂತದ ನಿವಾಸಿ ಎನ್ನಲಾದ ಪ್ರಸನ್ನ ವಿರುದ್ಧ ಮಹಿಳೆಯೊಬ್ಬರು ದೂರು ನೀಡಿದ್ದಾರೆ. ಅದರನ್ವಯ ಆರೋಪಿಯನ್ನು ಬಂಧಿಸಲಾಗಿದೆ. ಆತನ ಮೊಬೈಲ್ ಜಪ್ತಿ ಮಾಡಿ, ಪರೀಕ್ಷೆಗೆಂದು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಜಯನಗರದ ಅಕ್ಕಮಹಾದೇವಿ ಉದ್ಯಾನದಲ್ಲಿ ಸುತ್ತಾಡುತ್ತಿದ್ದ ಆರೋಪಿ, ಮಹಿಳೆಯರ ಫೋಟೊಗಳನ್ನು ಮೊಬೈಲ್ ಕ್ಯಾಮೆರಾದಲ್ಲಿ ಕ್ಲಿಕ್ಕಿಸುತ್ತಿದ್ದ. ವಿಡಿಯೊ ಸಹ ಚಿತ್ರೀಕರಿಸುತ್ತಿದ್ದ. ಇದನ್ನು ನೋಡಿದ್ದ ಮಹಿಳೆಯೊಬ್ಬರು, ಆರೋಪಿಗೆ ಎಚ್ಚರಿಕೆ ನೀಡಿದ್ದರು. ಇದಾದ ನಂತರವೂ ಆರೋಪಿ, ಕೃತ್ಯ ಮುಂದುವರಿಸಿದ್ದ’ ಎಂದೂ ತಿಳಿಸಿದರು.
‘ಆರೋಪಿ ವರ್ತನೆಯಿಂದ ಬೇಸತ್ತ ಮಹಿಳೆಯೊಬ್ಬರು ಕುಟುಂಬದವರಿಗೆ ವಿಷಯ ತಿಳಿಸಿದ್ದರು. ನಂತರ, ಠಾಣೆಗೆ ಬಂದು ದೂರು ನೀಡಿದ್ದರು. ಆರೋಪಿ ಮೊಬೈಲ್ ಪರಿಶೀಲಿಸಿದಾಗ, ಮಹಿಳೆಯರ ಫೋಟೊ ಹಾಗೂ ವಿಡಿಯೊಗಳು ಪತ್ತೆಯಾಗಿವೆ’ ಎಂದೂ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.