ADVERTISEMENT

ವಹಿವಾಟಿಗೆ ಸಜ್ಜಾಗಿದೆ ಜಯನಗರ ಕಾಂಪ್ಲೆಕ್ಸ್

ಪ್ರದೀಪ ಟಿ.ಕೆ
Published 22 ಏಪ್ರಿಲ್ 2019, 19:46 IST
Last Updated 22 ಏಪ್ರಿಲ್ 2019, 19:46 IST
ಹಳೆಯ ಶಾಪಿಂಗ್ ಕಟ್ಟಡ
ಹಳೆಯ ಶಾಪಿಂಗ್ ಕಟ್ಟಡ   

ಪುಟ್ಟಣ್ಣ ಕಣಗಾಲ್ ಚಿತ್ರಮಂದಿರ ಇದ್ದ ಜಾಗದಲ್ಲಿ ನಿರ್ಮಾಣವಾಗಿರುವ ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ಮೂರು ವರ್ಷ ಕಳೆದರೂ ವ್ಯಾಪಾರಕ್ಕೆ ಮುಕ್ತವಾಗಿಲ್ಲ ಎಂಬ ಕೂಗು ಕೇಳಿ ಬರುತ್ತಿತ್ತು. ಇದರ ಬೆನ್ನಲ್ಲೆ ಇದೀಗ ಶಾಪಿಂಗ್ ಕಾಂಪ್ಲೆಕ್ಸ್ ವಹಿವಾಟಿಗೆ ತೆರೆದಿದೆ. ಹಳೆಯ ಕಟ್ಟಡಕ್ಕಿಂತ ಸಂಪೂರ್ಣ ಭಿನ್ನವಾದ, ಸುಸಜ್ಜಿತ ಕಟ್ಟಡ ಇದಾಗಿದ್ದು ಸುಮಾರು 8301 ಚದರ ಮೀಟರ್ ವ್ಯಾಪ್ತಿಯಲ್ಲಿ ವಿಸ್ತರಿಸಿದೆ. ಮಾತ್ರವಲ್ಲ 7 ಅಂತಸ್ತುಗಳನ್ನು ಒಳಗೊಂಡಿರುವ ಭವ್ಯ ಕಟ್ಟಡ ಇದಾಗಿದೆ.

ನೆಲಮಹಡಿ, ಒಂದನೇ ಮತ್ತು ಎರಡನೇ ಮಹಡಿಯಲ್ಲಿ ತರಕಾರಿ ಮತ್ತು ಹಣ್ಣು ವ್ಯಾಪಾರದ 142 ಅಂಗಡಿಗಳಿವೆ. ಮೂರನೇ ಅಂತಸ್ತಿನಲ್ಲಿ ಸಗಟು ವ್ಯಾಪಾರದ 14 ಅಂಗಡಿ, 2 ತರಕಾರಿ ಮಳಿಗೆಗಳು, ನಾಲ್ಕು ಮತ್ತು ಐದನೇ ಮಹಡಿಗಳಲ್ಲಿ ಜನತಾ ಬಜಾರ್, ಆರನೇ ಮಹಡಿಯನ್ನು ಕೆನರಾ ಬ್ಯಾಂಕ್‌ಗೆ ಮೀಸಲಿಡಲಾಗಿದೆ.

ಏನೇನು ವ್ಯವಸ್ಥೆಗಳಿವೆ?: ನೆಲಮಾಳಿಗೆಯಲ್ಲಿ ಶೈತ್ಯಾಗಾರ ಹಾಗೂ 750ಕ್ಕೂ ಹೆಚ್ಚು ಕಾರುಗಳನ್ನು ನಿಲ್ಲಿಸುವ ಸೌಕರ್ಯ. ಜೊತೆಗೆ ದ್ವಿಚಕ್ರ ವಾಹನಗಳನ್ನು ನಿಲ್ಲಿಸುವ ವ್ಯವಸ್ತೆ ಮಾಡಲಾಗಿದೆ. ಪ್ರತ್ಯೇಕ ಸ್ವಚ್ಚ ಶೌಚಾಲಯ, ಲಿಫ್ಟ್ ವ್ಯವಸ್ಥೆ ಒದಗಿಸಲಾಗಿದೆ. ಕಟ್ಟಡದ ಸುತ್ತಲೂ ಹಾಗೂ ಒಳಗೆ ಎಲ್ಲೆಡೆ ಸಿಸಿ ಕೆಮೆರಾಗಳನ್ನು ಅಳವಡಿಸಲಾಗಿದೆ. ಗಾಳಿ, ಬೆಳಕು, ಕುಡಿಯುವ ನೀರು ಮುಂತಾದ ವ್ಯವಸ್ಥೆಗಳಿವೆ. ವೃದ್ಧರು, ಮಕ್ಕಳು, ಮಹಿಳೆಯರು ಮತ್ತು ಅಂಗವಿಕಲರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಕಟ್ಟಡದ ವಿನ್ಯಾಸ ಮಾಡಲಾಗಿದೆ. ಮಲ್ಟಿಫ್ಲೆಕ್ಸ್‌ ಒಳಗೊಂಡ ಮಾಲ್ ರೀತಿಯ ವಿನ್ಯಾಸವನ್ನು ಕಟ್ಟಡ ಒಳಗೊಂಡಿದೆ.

ADVERTISEMENT

ಪುಟ್ಟಣ್ಣ ಕಣಗಾಲ್ ಚಿತ್ರಮಂದಿರ: 1985ರ ನವೆಂಬರ್ 27ರಂದು ಪುಟ್ಟಣ್ಣ ಕಣಗಾಲ್‌ ನಿರ್ದೇಶನದ ‘ಮಸಣದ ಹೂವು’ ಚಿತ್ರದ ಮೂಲಕ ಇಲ್ಲಿ ಪ್ರದರ್ಶನ ಆರಂಭವಾಗಿತ್ತು. ಪುಟ್ಟಣ್ಣನವರ ಶಿಷ್ಯ ಎಡಕಲ್ಲು ಗುಡ್ಡದ ಖ್ಯಾತಿಯ ಚಂದ್ರಶೇಖರ್ ನಿರ್ದೇಶನದ ‘ಪೂರ್ವಾಪರ’ ಈ ಚಿತ್ರಮಂದಿರದಲ್ಲಿ ಪ್ರದರ್ಶನ ಕಂಡ ಕಡೆಯ ಚಿತ್ರ. ಸದ್ಯ ತೆರವಾಗಿರುವ ಚಿತ್ರಮಂದಿರವನ್ನು ಎರಡನೇ ಹಂತದ ಕಾಮಗಾರಿಯ ಆರನೇ ಮಹಡಿಯಲ್ಲಿ ಆಧುನಿಕ ರೀತಿಯಲ್ಲಿ ಪುನರ್‌ ನಿರ್ಮಿಸಲಾಗುವುದು ಎನ್ನುತ್ತಾರೆ ಅಧಿಕಾರಿಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.