ಬೆಂಗಳೂರು:ಆಪ್ಟಿಕಲ್ ಫೈಬರ್ ಕೇಬಲ್ (ಒಎಫ್‌ಸಿ) ಅಳವಡಿಕೆ ಸಂಬಂಧಖಾಸಗಿ ಕಂಪನಿಯು ರಸ್ತೆಗಳಲ್ಲಿ ಗುಂಡಿಗಳನ್ನು ತೆಗೆದಿರುವುದಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.
ಜಯನಗರದ 9ನೇ ಬಡಾವಣೆಯ ಈಸ್ಟ್ ವಿಂಡ್ ಸಿ ಮುಖ್ಯ ರಸ್ತೆಯಲ್ಲಿ ಒಎಫ್‌ಸಿ ಕೇಬಲ್ ಅಳವಡಿಕೆಗೆ ಗುಂಡಿಗಳನ್ನು ತೆಗೆಯಲಾಗಿದ್ದು, ಕೆಲವೆಡೆ ಕಂಬಗಳನ್ನು ನಿಲ್ಲಿಸಲಾಗಿದೆ. ಇದೀಗ ಬಿಬಿಎಂಪಿ ದಿಢೀರ್ ಒಎಫ್‌ಸಿ ಕೇಬಲ್ ಅಳವಡಿಕೆಗೆ ನೀಡಿದ ಅನುಮತಿಯನ್ನು ರದ್ದುಪಡಿಸಿದ ಪರಿಣಾಮ ಕಂಪನಿಯವರು ಗುಂಡಿಗಳಿಗೆ ಮಣ್ಣನ್ನು ಹಾಕಿ ಹೋಗಿದ್ದಾರೆ. ಅವೈಜ್ಞಾನಿಕವಾಗಿ ಗುಂಡಿಗಳನ್ನು ತೆಗೆದಿರುವುದು ಹಾಗೂ ರಸ್ತೆಗಳಿಗೆ ಹಾನಿ ಮಾಡಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
‘ಖಾಸಗಿ ಕಂಪನಿಗಳು ಎಲ್ಲೆಂದರಲ್ಲಿ ಒಎಫ್‌ಸಿ ಕೇಬಲ್ ಅಳವಡಿಕೆ ಮಾಡುತ್ತಿದ್ದರೂ ಬಿಬಿಎಂಪಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಣ್ಣುಮುಚ್ಚಿ ಕುಳಿತುಕೊಂಡಿದ್ದಾರೆ. ಇನ್ನೊಬ್ಬರಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡು
ವುದು ಸರಿಯಲ್ಲ’ ಎಂದು ಸ್ಥಳೀಯ ನಿವಾಸಿಗಳು ಬೇಸರ ವ್ಯಕ್ತಪಡಿಸಿದರು.
‘ಸ್ಥಳೀಯರಿಗೆ ಮಾಹಿತಿ ನೀಡದೆಯೇ ಎಲ್ಲೆಂದರಲ್ಲಿ ರಸ್ತೆಗಳಲ್ಲಿ ಒಎಫ್‌ಸಿ ಕೇಬಲ್ ಅಳವಡಿಕೆಗೆ ಗುಂಡಿಗಳನ್ನು ತೋಡಲಾಗಿದೆ. ಇದರಿಂದ ಮರಗಳ ಬೇರುಗಳು ತುಂಡಾಗಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ. ಒಂದು ವೇಳೆ ಒಎಫ್‌ಸಿ ಕೇಬಲ್ ಅಳವಡಿಕೆ ಮಾಡಲೇಬೇಕಾದಲ್ಲಿ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಸಾರ್ವಜನಿಕರಿಗೆ ಸಮಸ್ಯೆಯಾಗದ ರೀತಿಯಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲಿ’ ಎಂದು ರಂಗ ನಿರ್ದೇಶಕ ಹಾಗೂ ಸ್ಥಳೀಯ ನಿವಾಸಿ ಎಸ್. ರಘುನಂದನ್ ತಿಳಿಸಿದರು.
‘ರಸ್ತೆಗಳು ಕಿರಿದಾಗಿವೆ. ಇದರ ನಡುವೆ ಒಎಫ್‌ಸಿ ಕೇಬಲ್ ಅಳವಡಿಕೆ ಸೇರಿದಂತೆ ವಿವಿಧ ಕಾಮಗಾರಿ ಹಿನ್ನೆಲೆಯಲ್ಲಿ ರಸ್ತೆಗಳನ್ನು ಅಗೆಯುವುದರಿಂದ ಪ್ರತಿನಿತ್ಯ ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಆಂಬುಲೆನ್ಸ್ ಸಾಗುವುದು ಕಷ್ಟವಾಗಿದೆ’ ಎಂದುನಮ್ರತಾ ಆರ್ಥೋಪೆಡಿಕ್ ಸೆಂಟರ್‌ನ ಸಿಬ್ಬಂದಿ ಬೇಸರ ವ್ಯಕ್ತಪಡಿಸಿದರು.
**
ಒಎಫ್‌ಸಿ ಕೇಬಲ್ ಅಳವಡಿಕೆ ಮಾಡಲು ಎಲ್ಲೆಂದರೆಲ್ಲಿ ಗುಂಡಿಗಳನ್ನು ತೋಡಿರುವುದರಿಂದ ಮಕ್ಕಳು ಹಾಗೂ ವೃದ್ಧರು ರಸ್ತೆಯಲ್ಲಿ ಸಾಗುವುದೇ ಕಷ್ಟವಾಗಿದೆ
- ವೆಂಕಟಸುಬ್ಬಯ್ಯ, ಸ್ಥಳೀಯ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.