ಬೆಂಗಳೂರು: ಎತ್ತ ನೋಡಿದರೂ ಕೊಳೆತ ತರಕಾರಿಗಳ ರಾಶಿ. ಕೊಳೆಗೇರಿಯಂತಾದ ಸ್ಥಳದಲ್ಲೇ ನಿತ್ಯವೂ ನಡೆಯುತ್ತಿರುವ ವ್ಯಾಪಾರ, ಎಲ್ಲೆಡೆ ಕಸದ ರಾಶಿ, ದುರ್ನಾತ....
ಕಲಾಸಿಪಾಳ್ಯದಲ್ಲಿರುವ ಜಯಚಾಮರಾಜೇಂದ್ರ ಹಣ್ಣು ಮತ್ತು ತರಕಾರಿ ಮಾರುಕಟ್ಟೆಯ ದುಃಸ್ಥಿತಿ ಇದು.
ನಗರದ ಹೃದಯಭಾಗದಲ್ಲಿರುವ ಐತಿಹಾಸಿಕ ಹಣ್ಣು ಮತ್ತು ತರಕಾರಿ ಸಗಟು ಮಾರುಕಟ್ಟೆ ಮೂಲಸೌಕರ್ಯಗಳಿಂದ ವಂಚಿತವಾಗಿದೆ. ಮಾರುಕಟ್ಟೆ ಸ್ಥಳಾಂತರಿಸಬೇಕು ಎಂಬ ವ್ಯಾಪಾರಿಗಳ ಬಹುವರ್ಷಗಳ ಬೇಡಿಕೆ ಇದುವರೆಗೂ ಈಡೇರಿಲ್ಲ. ನಿತ್ಯ ಕಸದ ರಾಶಿಯಲ್ಲಿ ಹೆಜ್ಜೆ ಹಾಕುವ ರೈತರ ಅಸಹಾಯಕತೆಯನ್ನು ನೋಡಿ ಸಗಟು ವ್ಯಾಪಾರವನ್ನಾದರೂ ಶೀಘ್ರವಾಗಿ ಸ್ಥಳಾಂತರ ಮಾಡಿ ಎಂಬ ವ್ಯಾಪಾರಿಗಳ ಬೇಡಿಕೆಗೆ ಸರ್ಕಾರ ಸ್ಪಂದಿಸುತ್ತಿಲ್ಲ.
‘ತರಕಾರಿಗಳನ್ನು ವಾಹನಗಳ ಮೂಲಕ ಹೊತ್ತು ತರುವ ರೈತರ ವಾಹನಗಳಿಗೆ ಈ ಮಾರುಕಟ್ಟೆಯಲ್ಲಿ ನಿಲುಗಡೆಗೆ ಸ್ಥಳಾವಕಾಶ ಇಲ್ಲ. ಇಡೀ ಪ್ರದೇಶದಲ್ಲಿ ಪಾರ್ಕಿಂಗ್ ಮಾಫಿಯಾ ಮೀತಿಮೀರಿದೆ. ಜೆ.ಸಿ. ಮಾರುಕಟ್ಟೆಯನ್ನು ಸಂಪೂರ್ಣವಾಗಿ ಬಿಬಿಎಂಪಿಯೇ ನಿರ್ವಹಣೆ ಮಾಡಲಿ. ಇದರಿಂದ, ಮೂಲಸೌಕರ್ಯಗಳು ಖಾತ್ರಿಯಾಗುತ್ತವೆ’ ಎನ್ನುವುದು ವ್ಯಾಪಾರಿಗಳ ಒತ್ತಾಯ.
‘ರಾಜ್ಯದ ವಿವಿಧ ಜಿಲ್ಲೆಗಳಿಂದ ಹಾಗೂ ತಮಿಳುನಾಡು, ಕೇರಳ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ಸೇರಿ ಹಲವು ರಾಜ್ಯಗಳಿಂದ ಪ್ರತಿನಿತ್ಯ ಮಾರುಕಟ್ಟೆಗೆ ನೂರಾರು ರೈತರು ಬರುತ್ತಾರೆ. ಇವರಿಗೆಲ್ಲ ಶೌಚಾಲಯ ವ್ಯವಸ್ಥೆಯೇ ಇಲ್ಲದಾಗಿದೆ. ಇದರಿಂದಾಗಿ ಇಡೀ ಮಾರುಕಟ್ಟೆಯಲ್ಲಿ ದುರ್ನಾತ ತುಂಬಿಕೊಂಡಿದೆ. ಜತೆಗೆ, ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ’ ಎನ್ನುವುದು ವ್ಯಾಪಾರಿಗಳ ಆರೋಪ.
ಅಕ್ರಮ ಅಂಗಡಿಗಳೇ ಜಾಸ್ತಿ: ‘ಮಾರುಕಟ್ಟೆಯಲ್ಲಿ ಪರವಾನಗಿ ಹೊಂದಿರುವ ಅಂಗಡಿಗಳಿಗಿಂತ ಅಕ್ರಮವಾಗಿ ತೆರೆದಿರುವ ಅಂಗಡಿಗಳೇ ಹೆಚ್ಚಿದ್ದು, ಇವುಗಳಿಗೆ ಕಡಿವಾಣ ಹಾಕಬೇಕು ಎಂದು ವರ್ತಕರ ಸಂಘದಿಂದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗುತ್ತಿಲ್ಲ. ಮಾರುಕಟ್ಟೆಯಲ್ಲಿ ಸಿಸಿಟಿವಿ ಕ್ಯಾಮೆರಾವನ್ನೂ ಅಳವಡಿಸಬೇಕು ಎನ್ನುವ ಬೇಡಿಕೆಯೂ ಈಡೇರಿಲ್ಲ’ ಎಂದು ವ್ಯಾಪಾರಿ ಫಯಾಜ್ ಅಹ್ಮದ್ ದೂರಿದರು.
ಮಾರುಕಟ್ಟೆ ಸ್ಥಳಾಂತರಿಸಿ ‘ನಗರದ ಹೃದಯ ಭಾಗದಲ್ಲಿರುವುದೇ ಈ ಮಾರುಕಟ್ಟೆಯ ದೊಡ್ಡ ಸಮಸ್ಯೆ. ಬೆಳಿಗ್ಗೆ 7 ಗಂಟೆ ಒಳಗೆ ಮತ್ತು ರಾತ್ರಿ 7 ಗಂಟೆ ನಂತರ ವಾಹನಗಳು ಮಾರುಕಟ್ಟೆಗೆ ಪ್ರವೇಶಿಸಬೇಕು. ಇಲ್ಲದಿದ್ದರೆ ವಾಹನ ದಟ್ಟಣೆ ಉಂಟಾಗುತ್ತದೆ. ಈ ಎಲ್ಲ ಕಾರಣಕ್ಕೆ ನಗರದ ಹೊರವಲಯಕ್ಕೆ ಈ ಮಾರುಕಟ್ಟೆಯನ್ನು ಸ್ಥಳಾಂತರಿಸಬೇಕು ಎನ್ನುವುದು ವ್ಯಾಪಾರಿಗಳ ಬಹುವರ್ಷಗಳ ಬೇಡಿಕೆ. ಆದರೆ ಇದುವರೆಗೂ ಈಡೇರಿಲ್ಲ’ ಎಂದು ವ್ಯಾಪಾರಿ ಗಿರೀಶ್ ತಿಳಿಸಿದರು.
ಜೆ.ಸಿ. ಮಾರುಕಟ್ಟೆಯನ್ನು ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಎರಡು ಬಾರಿ ಸ್ವಚ್ಛಗೊಳಿಸಿದರೆ ಮಾತ್ರ ಗ್ರಾಹಕರು ಮಾರುಕಟ್ಟೆಗೆ ಬರುತ್ತಾರೆ. ಪಾದಚಾರಿ ಮಾರ್ಗದಲ್ಲಿ ಹಚ್ಚಿರುವ ಅಂಗಡಿಗಳಿಂದಲೇ ತರಕಾರಿ ಖರೀದಿಸುತ್ತಾರೆ. ಫಯಾಜ್ ಅಹ್ಮದ್ ವ್ಯಾಪಾರಿ
‘ವಾಹನ ದಟ್ಟಣೆ ನಿಯಂತ್ರಿಸಿ’ ಜೆ.ಸಿ. ಮಾರುಕಟ್ಟೆಯಲ್ಲಿ ಉಂಟಾಗುತ್ತಿರುವ ವಾಹನ ದಟ್ಟಣೆಯನ್ನು ನಿಯಂತ್ರಿಸಬೇಕು. ಯಾವ ದ್ವಾರದಿಂದ ವಾಹನಗಳು ಮಾರುಕಟ್ಟೆಗೆ ಬರುತ್ತವೆಯೋ ಅದೇ ರಸ್ತೆಯಲ್ಲಿ ಮರಳಿ ಹೋಗಬೇಕೆಂಬ ಎಪಿಎಂಸಿ ಅಧಿಕಾರಿಗಳ ಅಲಿಖಿತ ನಿಯಮದಿಂದ ವ್ಯಾಪಾರಿಗಳು ಪರದಾಡುತ್ತಿದ್ದಾರೆ. ಸಂಬಂಧಪಟ್ಟ ಸಚಿವರು ಈ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮಕೈಗೊಳ್ಳಬೇಕು ಆಶ್ಪಾಕ್ ಉಲ್ಲಾ ಶರೀಫ್ ವ್ಯಾಪಾರಿ
ಐತಿಹಾಸಿಕ ಮಾರುಕಟ್ಟೆ ಮಾಹಿತಿ
* ಕೆ.ಆರ್. ಮಾರುಕಟ್ಟೆಯ ಅಧೀನದಲ್ಲಿದ್ದ ಜೆ.ಸಿ. ಮಾರುಕಟ್ಟೆಯು 1992ರಲ್ಲಿ ಕೃಷಿ ಉತ್ಪನ್ನ ಮಾರುಟಕಟ್ಟೆ ಸಮಿತಿ (ಎಪಿಎಂಸಿ) ಅಧೀನಕ್ಕೆ ಸೇರಿತು * 1984ರಲ್ಲಿ ಜೆ.ಸಿ. ಮಾರುಕಟ್ಟೆಯು ಕಲಾಸಿಪಾಳ್ಯಕ್ಕೆ ಸ್ಥಳಾಂತರಗೊಂಡಿತು * ಮಾರುಕಟ್ಟೆ ವ್ಯಾಪ್ತಿಯು ಮೂರು ಎಕರೆಯಷ್ಟಿದೆ * 493ಕ್ಕೂ ಹೆಚ್ಚು ಅಂಗಡಿಗಳಿದ್ದು ಅಂಗಡಿಗಳನ್ನು ತೆರೆಯಲು 970 ಜನ ಪರವಾನಗಿ ಪಡೆದುಕೊಂಡಿದ್ದಾರೆ
‘ಸ್ಥಳಾಂತರ ಸದ್ಯಕ್ಕೆ ಕಷ್ಟಸಾಧ್ಯ’
‘ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬ್ಯಾಟರಾಯನಪುರದ ಬಳಿ 30 ಎಕರೆ ಪ್ರದೇಶದಲ್ಲಿ ಮಾರುಕಟ್ಟೆ ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು. ಆದರೆ ಹಲವು ವರ್ಷಗಳಾದರೂ ಮಾರುಕಟ್ಟೆ ನಿರ್ಮಾಣವಾಗಲೇ ಇಲ್ಲ. ಇತ್ತೀಚೆಗೆ ಮಾರುಕಟ್ಟೆಯನ್ನು ಎಲೆಕ್ಟ್ರಾನಿಕ್ ಸಿಟಿ ಸಮೀಪದಲ್ಲಿರುವ ಸಿಂಗೇನ ಅಗ್ರಹಾರದ ಬಳಿ ಎಪಿಎಂಸಿಗೆ ನೀಡಿರುವ 42 ಎಕರೆ ಜಾಗಕ್ಕೆ ಮಾರುಕಟ್ಟೆ ಸ್ಥಳಾಂತರ ಆಗಲಿದೆ ಎನ್ನಲಾಗುತ್ತಿದೆ. ಆದರೆ ಇಲ್ಲಿ ಮಾರುಕಟ್ಟೆ ನಿರ್ಮಿಸಬಾರದು ಎಂದು ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣ ಇತ್ಯರ್ಥವಾಗುವವರೆಗೆ ಮಾರುಕಟ್ಟೆ ಸ್ಥಳಾಂತರ ಆಗುವುದಿಲ್ಲ’ ಎಂದು ಎಪಿಎಂಸಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.