ಬೆಂಗಳೂರು: ಜೆಡಿಎಸ್ ವಿಧಾನ ಪರಿಷತ್ ಸದಸ್ಯರ ಬಂಡಾಯದ ಬಿಸಿ ಏರತೊಡಗಿದ್ದು, ತಾಂತ್ರಿಕವಾಗಿ ಪಕ್ಷದಲ್ಲಿದ್ದರೂ, ಮಾನಸಿಕವಾಗಿ ಪಕ್ಷವನ್ನು ಬಿಟ್ಟಿರುವುದಾಗಿ ಸಂದೇಶ್ ನಾಗರಾಜ್ ಹೇಳಿದ್ದಾರೆ.
‘ನಮಗೆ ಯಾವುದೇ ರೋಗವಿಲ್ಲ. ಆದ್ದರಿಂದ ಔಷಧಿ ಪಡೆಯುವ ಅಗತ್ಯವಿಲ್ಲ. ವಿನಾ ಕಾರಣ ತ್ರಿಶಂಕು ಸ್ವರ್ಗದಲ್ಲಿದ್ದೇವೆ. ತಾಂತ್ರಿಕವಾಗಿಯಷ್ಟೇ ಈಗಲೂ ಜೆಡಿಎಸ್‌ನಲ್ಲಿದ್ದೇವೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾದ 8 ದಿನಕ್ಕೆ ಮಾನಸಿಕವಾಗಿ ಜೆಡಿಎಸ್‌ನಿಂದ ದೂರವಾಗಿದ್ದೆವು’ ಎಂದು ಸಂದೇಶ್ ನಾಗರಾಜ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
‘ಜೆಡಿಎಸ್‌ಗೂ ನನಗೂ ಯಾವುದೇ ರೀತಿಯ ಸಂಬಂಧವಿಲ್ಲ. ಉಚ್ಚಾಟನೆ ಮಾಡಿದರೆ ತಾಯಿ ಚಾಮುಂಡೇಶ್ವರಿಗೆ 101 ತೆಂಗಿನಕಾಯಿ ಒಡೆಯುವೆ. ಪಕ್ಷದಿಂದ ಗೆದ್ದವ ನಾನಲ್ಲ. ವೈಯಕ್ತಿಕವಾಗಿ ಗೆದ್ದಿದ್ದೆ’ ಎಂದು ಅವರು ಹೇಳಿದ್ದಾರೆ.
ಆದರೆ ಪಕ್ಷದಿಂದ ಉಚ್ಚಾಟಿಸದೆ ಹೋದರೆ ಪಕ್ಷ ಬಿಟ್ಟು ಹೋಗುವುದಿಲ್ಲ, 2021ರಲ್ಲಿ ತಮ್ಮ ಅವಧಿ ಕೊನೆಗೊಳ್ಳಲಿದ್ದು, ಅಲ್ಲಿಯವರೆಗೂ ಪಕ್ಷದಲ್ಲಿಯೇ ಮುಂದುವರಿಯುವುದಾಗಿ ಸ್ಪಷ್ಟಪಡಿಸಿದ್ದಾರೆ. ಸದ್ಯಕ್ಕೆ ಯಾವ ಪಕ್ಷ ಸೇರುವ ಬಗ್ಗೆಯೂ ಯೋಚಿಸಿಲ್ಲ, ಸಿನಿಮಾ ನಿರ್ಮಾಣವನ್ನು ಮುಂದುವರಿಸುವುದಾಗಿ ಅವರು ಹೇಳಿದ್ದಾರೆ.
ಮೂರು ಬಾರಿ ವಿಧಾನ ಪರಿಷತ್‌ಗೆ ಆಯ್ಕೆಯಾಗಿದ್ದ ಪುಟ್ಟಣ್ಣ ಅವರನ್ನು ಪಕ್ಷ ಈಚೆಗೆ ಉಚ್ಚಾಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.