ADVERTISEMENT

ಎಸ್‌.ಕೆ.ಕಾಂತಾಗೆ ‘ಜೆ.ಎಚ್‌.ಪಟೇಲ್‌ ಪ್ರಶಸ್ತಿ’ ಪ್ರದಾನ

‘ವಿಪಕ್ಷದವರನ್ನೂ ವಿರೋಧಿಸದ ಪಟೇಲ್‌’

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2022, 20:22 IST
Last Updated 1 ಅಕ್ಟೋಬರ್ 2022, 20:22 IST
ಸಮಾರಂಭದಲ್ಲಿ ಎಸ್.ಕೆ.ಕಾಂತಾ ಅವರಿಗೆ ‘ಜೆ.ಎಚ್.ಪಟೇಲ್ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. (ಎಡದಿಂದ) ಪಾಲನೇತ್ರ, ಬಿ.ಎಸ್.ನವೀನ್, ವಿ.ಸೋಮಣ್ಣ, ಶೈಲಜಾ, ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಜಯಪ್ರಕಾಶ್ ಹೆಗ್ಡೆ, ಗೋವಿಂದ ಎಂ. ಕಾರಜೋಳ, ಅರುಣ್ ಸೋಮಣ್ಣ ಇದ್ದರು ಪ್ರಜಾವಾಣಿ ಚಿತ್ರ
ಸಮಾರಂಭದಲ್ಲಿ ಎಸ್.ಕೆ.ಕಾಂತಾ ಅವರಿಗೆ ‘ಜೆ.ಎಚ್.ಪಟೇಲ್ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. (ಎಡದಿಂದ) ಪಾಲನೇತ್ರ, ಬಿ.ಎಸ್.ನವೀನ್, ವಿ.ಸೋಮಣ್ಣ, ಶೈಲಜಾ, ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಜಯಪ್ರಕಾಶ್ ಹೆಗ್ಡೆ, ಗೋವಿಂದ ಎಂ. ಕಾರಜೋಳ, ಅರುಣ್ ಸೋಮಣ್ಣ ಇದ್ದರು ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಜೆ.ಎಚ್‌.ಪಟೇಲ್‌ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ವಿರೋಧ ಪಕ್ಷದ ಸದಸ್ಯರನ್ನೂ ವಿರೋಧಿಸಿದವರು ಅಲ್ಲ; ಎಲ್ಲರನ್ನೂ ಆತ್ಮೀಯವಾಗಿ ಮಾತನಾಡಿಸಿ ಕ್ಷೇತ್ರದ ಆಗುಹೋಗುಗಳ ಕುರಿತು ಚರ್ಚಿಸುತ್ತಿದ್ದರು’ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ಹೇಳಿದರು.

ವಿ.ಸೋಮಣ್ಣ ಪ್ರತಿಷ್ಠಾನದಿಂದ ನೀಡುವ ‘ಜೆ.ಎಚ್‌.ಪಟೇಲ್‌ ಪ್ರಶಸ್ತಿ’ಯನ್ನು ಮಾಜಿ ಸಚಿವ ಎಸ್‌.ಕೆ.ಕಾಂತಾ ಅವರಿಗೆ ಶನಿವಾರ ಪ್ರದಾನ ಮಾಡಿ ಮಾತನಾಡಿದರು.

‘ಮುಖ್ಯಮಂತ್ರಿ ಎಂಬ ಅಹಂ ಇರಲಿಲ್ಲ. ಸಾಮಾನ್ಯ ವ್ಯಕ್ತಿಯಂತೆಯೇ ಬದುಕಿದ್ದರು. ಹೊಸದಾಗಿ ಶಾಸಕರಾಗಿ ಆಯ್ಕೆಯಾದವರು ಸೂಕ್ತ ತಯಾರಿ ನಡೆಸಿ ಸದನಕ್ಕೆ ಬರುವಂತೆ ತಿಳಿಸುತ್ತಿದ್ದರು. ಪಟೇಲ್‌ರದ್ದು ನೇರನುಡಿಯ ವ್ಯಕ್ತಿತ್ವವಾಗಿತ್ತು’ ಎಂದು ಹೇಳಿದರು.

ADVERTISEMENT

ಸಚಿವ ಗೋವಿಂದ ಎಂ. ಕಾರಜೋಳ ಮಾತನಾಡಿ, ‘ಪಟೇಲರು ಪ್ರಕೃತಿಯ ಆರಾಧಕರಾಗಿದ್ದರು. ಬಸವಣ್ಣನವರ ಚಿಂತನೆ ಮೈಗೂಡಿಸಿಕೊಂಡು ಬದುಕಿದ್ದರು. ರಾಮಕೃಷ್ಣ ಹೆಗಡೆ, ಎಸ್‌.ಆರ್.ಬೊಮ್ಮಾಯಿ ಹಾಗೂ ಜೆ.ಎಚ್‌.ಪಟೇಲ್‌ ನನಗೆ ರಾಜಕೀಯ ಕ್ಷೇತ್ರದಲ್ಲಿ ಅವಕಾಶ ಕಲ್ಪಿಸಿದರು. ಅವರಿಂದ ವಿಧಾನಸಭೆ ಪ್ರವೇಶಿಸುವಂತೆ ಆಯಿತು’ ಎಂದರು.

‘ಬಡವರು ಹಾಗೂ ಪರಿಶಿಷ್ಟ ವರ್ಗದ ಬಗ್ಗೆ ಪಟೇಲ್‌ ಅವರಿಗೆ ಅಪಾರ ಕಾಳಜಿ ಇತ್ತು. ಸಾಕಷ್ಟು ವಿರೋಧವಿದ್ದರೂ ಸಂಪುಟದಲ್ಲಿ ಪರಿಶಿಷ್ಟರಿಗೆ ಆದ್ಯತೆ ನೀಡಿದ್ದರು. ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಿದ್ದರು. ಸದನದಲ್ಲಿ ಹಾಸ್ಯದ ಜತೆಗೇ ಚಾಟಿ ಬೀಸುತ್ತಿದ್ದರು. ಅಂತರ್ಜಾತಿಯ ವಿವಾಹಗಳು ಹೆಚ್ಚಾದರೆ ಜಾತಿ ವ್ಯವಸ್ಥೆ ದೂರವಾಗಲಿದೆ ಎಂದು ಪಟೇಲರು ನಂಬಿದ್ದರು’ ಎಂದು ಹೇಳಿದರು.

ಪ್ರಶಸ್ತಿ ಸ್ವೀಕರಿಸಿದ ಎಸ್‌.ಕೆ.ಕಾಂತಾ ಮಾತನಾಡಿ, ‘ಪಟೇಲರು ಒಮ್ಮೆ ಅಬಕಾರಿ ಹಾಗೂ ಕೆಇಬಿ ಎರಡೂ ಖಾತೆ ಹೊಂದಿದ್ದರು. ವಿರೋಧ ಪಕ್ಷದವರು ಪ್ರಶ್ನಿಸಿದಾಗ ‘ಕಿಕ್‌’ ಹಾಗೂ ‘ಶಾಕ್‌’ ಆಗ್ತೀರಾ ಎಂದು ಸದನವನ್ನು ನಗೆಯಲ್ಲಿ ತೇಲುವಂತೆ ಮಾಡುತ್ತಿದ್ದರು’ ಎಂದು ನೆನಪಿಸಿಕೊಂಡರು.

‘ಸಂಸತ್‌ಗೆ ಆಯ್ಕೆಯಾದ ವೇಳೆ ಮಾತೃಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿ, ಮಾತೃಭಾಷೆ ಪ್ರೇಮ ಮೆರೆದಿದ್ದರು. ಶ್ರೀಮಂತ ಕುಟುಂಬದ ಹಿನ್ನೆಲೆಯುಳ್ಳವರು ಸಮಾಜವಾದಿ ಪಕ್ಷಕ್ಕೆ ಬರುವುದು ಕಡಿಮೆ ಇತ್ತು. ಆದರೆ, ಪಟೇಲರು ಸಮಾಜವಾದಿ ಪಕ್ಷಕ್ಕೆ ಬಂದು ಸರಳತೆ ತೋರಿದ್ದರು. ಅವರದ್ದು ತ್ಯಾಗಮಯಿ ವ್ಯಕ್ತಿತ್ವ’ ಎಂದು ಹೇಳಿದರು.

ಸಾಣೇಹಳ್ಳಿ ತರಳಬಾಳು ಶಾಖಾಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ವಸತಿ ಸಚಿವ ವಿ.ಸೋಮಣ್ಣ, ವಿ.ಸೋಮಣ್ಣ ಪ್ರತಿಷ್ಠಾನದ ಅಧ್ಯಕ್ಷೆ ಶೈಲಜಾ, ಕಾರ್ಯಾಧ್ಯಕ್ಷ ಡಾ.ಅರುಣ್‌ ಸೋಮಣ್ಣ, ಕೋಶಾಧ್ಯಕ್ಷ ಡಾ.ಬಿ.ಎಸ್‌.ನವೀನ್‌, ಪ್ರಧಾನ ಕಾರ್ಯದರ್ಶಿ ಪಾಲನೇತ್ರ, ಕಾರ್ಯದರ್ಶಿ ದಿವ್ಯಾ ಅವಿನಾಶ್‌ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.