ಬೆಂಗಳೂರು: ‘ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಜಿಂದಾಲ್ ಕಂಪನಿಗೆ 3,666 ಎಕರೆ ಕೊಡಲು ತೀರ್ಮಾನಿಸಿ, 2021ರ ಮೇ 5ರಂದು ಸರ್ಕಾರಿ ಆದೇಶ ಹೊರಡಿಸಿತ್ತು. ಹೈಕೋರ್ಟ್ ಸೂಚನೆಯಂತೆ ಅದೇ ಆದೇಶವನ್ನು ಜಾರಿ ಮಾಡಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. ಇಲ್ಲಿ ಯಾವ ಅಕ್ರಮವೂ ಇಲ್ಲ’ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದ್ದಾರೆ.
‘ಈ ವಿಷಯದಲ್ಲಿ ಸರ್ಕಾರ ಒಳ ಒಪ್ಪಂದ ಮಾಡಿಕೊಂಡಿದೆ ಎನ್ನುವ ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ ಅವರ ಆರೋಪ ನಿರಾಧಾರ. ಒಂದು ವೇಳೆ ಒಳ ಒಪ್ಪಂದ ಆಗಿದ್ದರೆ ಅದು ಅವರದ್ದೇ ಪಕ್ಷದ ಸರ್ಕಾರದ ಜತೆ ಆಗಿರಬೇಕು’ ಎಂದು ಆರೋಪಿಸಿದರು.
‘ಯಡಿಯೂರಪ್ಪ ಸರ್ಕಾರದ ಆದೇಶ ಜಾರಿಯಾಗದ ಕಾರಣ ಜಿಂದಾಲ್ ಕಂಪನಿ ಹೈಕೋರ್ಟ್‌ಗೆ ಹೋಯಿತು. ಆ ಆದೇಶವನ್ನು ಪಾಲಿಸುವಂತೆ ಹೈಕೋರ್ಟ್ ಸೂಚಿಸಿತು. ಅದರಂತೆ ನಮ್ಮ ಸರ್ಕಾರ ನಡೆದುಕೊಂಡಿದೆ’ ಎಂದರು.
‘ಜಿಂದಾಲ್ ಕಂಪನಿ ರಾಜ್ಯದಲ್ಲಿ ₹ 90 ಸಾವಿರ ಕೋಟಿ ಹೂಡಿಕೆ ಮಾಡಿ, 50 ಸಾವಿರ ಜನರಿಗೆ ಉದ್ಯೋಗ ನೀಡಿದೆ. ಸರ್ಕಾರದ ಷರತ್ತುಗಳನ್ನು ಪಾಲಿಸಿದ ನಂತರವೂ ಅವರಿಗೆ ಜಮೀನಿನ ಗುತ್ತಿಗೆ ಮಾರಾಟ ಮಾಡದಿದ್ದರೆ ಹೂಡಿಕೆ ವಲಯಕ್ಕೆ ಕೆಟ್ಟ ಸಂದೇಶ ಹೋಗುತ್ತದೆ. ಇದು ಹೂಡಿಕೆಗೆ ಮಾರಕ’ ಎಂದೂ ಹೇಳಿದರು.
‘ದೇವನಹಳ್ಳಿ ಸಮೀಪದ ಕೈಗಾರಿಕಾ ಪ್ರದೇಶದಲ್ಲಿ ಚಾಣಕ್ಯ ವಿಶ್ವವಿದ್ಯಾಲಯಕ್ಕೆ 116 ಎಕರೆಯನ್ನು ಭಾರಿ ರಿಯಾಯಿತಿ ದರದಲ್ಲಿ ಹಿಂದಿನ ಬಿಜೆಪಿ ಸರ್ಕಾರ ನೀಡಿದೆ. ಬಿಜೆಪಿ ಸರ್ಕಾರದ ನಿರ್ಧಾರದಿಂದ ಬೊಕ್ಕಸಕ್ಕೆ ₹137 ಕೋಟಿ ನಷ್ಟವಾಗಿದೆ’ ಎಂದು ಎಂ.ಬಿ.ಪಾಟೀಲ ಆರೋಪಿಸಿದರು. ‘ನಾವು ಬಿಜೆಪಿಯಂತೆ ಯಾವ ರಿಯಾಯಿತಿಯನ್ನೂ ಕೊಟ್ಟಿಲ್ಲ. 20 ವರ್ಷಗಳ ಹಿಂದೆ ಇದ್ದ ಮಾರುಕಟ್ಟೆ ದರವನ್ನು ಆಧರಿಸಿಯೇ ದರ ನಿಗದಿ ಮಾಡಲಾಗಿದೆ. ಅದರಂತೆ ಈಗ ಶುದ್ಧ ಕ್ರಯಪತ್ರ ಮಾಡಿಕೊಡಬೇಕಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.