ಬೆಂಗಳೂರು: ಭೋವಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಕ್ಕೆ ಸಂಬಂಧಿಸಿದ ಪ್ರಕರಣದ ಆರೋಪಿ, ಮಹಿಳೆ ಎಸ್.ಜೀವಾ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವರ್ಗಾವಣೆಗೊಳಿಸಿ ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ ಆದೇಶಿಸಿದ್ದಾರೆ.
ಭೋವಿ ನಿಗಮದಲ್ಲಿ ನಡೆದಿದ್ದ ಹಗರಣದ ತನಿಖೆಯನ್ನು ಸಿ.ಐ.ಡಿ ನಡೆಸುತ್ತಿದ್ದು, ಜೀವಾ ಅವರೂ ವಿಚಾರಣೆ ಎದುರಿಸಿದ್ದರು. ವಿಚಾರಣೆ ವೇಳೆ ತನಿಖಾಧಿಕಾರಿಗಳು ಕಿರುಕುಳ ನೀಡಿದ್ದರು ಎಂದು ಆರೋಪಿಸಿ, ಮರಣಪತ್ರ ಬರೆದಿಟ್ಟು ಜೀವಾ ಆತ್ಮಹತ್ಯೆ ಮಾಡಿಕೊಂಡಿದ್ದರು. ಜೀವಾ ಆತ್ಮಹತ್ಯೆಯ ಕುರಿತು ಅವರ ಸಹೋದರಿ ಸಂಗೀತಾ ನೀಡಿದ್ದ ದೂರಿನ ಅನ್ವಯ ಸಿಐಡಿ ಡಿವೈಎಸ್‌ಪಿ ಕನಕಲಕ್ಷ್ಮಿ ವಿರುದ್ಧ ಬನಶಂಕರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಪ್ರಕರಣದ ಮುಂದಿನ ತನಿಖೆಯನ್ನು ಸಿಸಿಬಿಗೆ ವಹಿಸಲಾಗಿದೆ.
ಸಿಸಿಬಿಯ ಎಸಿಪಿ ದರ್ಜೆಯ ಅಧಿಕಾರಿ ನೇತೃತ್ವದಲ್ಲಿ ತನಿಖೆಗೆ ಆದೇಶಿಸಲಾಗಿದ್ದು, ಪ್ರಕರಣದ ಪ್ರಾಥಮಿಕ ತನಿಖೆಯ ದಾಖಲೆಗಳನ್ನು ಹಸ್ತಾಂತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಬನಶಂಕರಿ ಠಾಣಾ ವ್ಯಾಪ್ತಿಯ ರಾಘವೇಂದ್ರ ಲೇಔಟ್‌ನ ಮನೆಯಲ್ಲಿ ಮರಣಪತ್ರ ಬರೆದಿಟ್ಟು, ನ.22ರಂದು ಜೀವಾ ಆತ್ಮಹತ್ಯೆ ಮಾಡಿಕೊಂಡಿದ್ದರು.
‘ವಿಚಾರಣೆಗೆ ಹಾಜರಾಗಿದ್ದ ಜೀವಾಗೆ ಸಿಐಡಿಯ ಡಿವೈಎಸ್‌ಪಿ ಮಾನಸಿಕ ಕಿರುಕುಳ ನೀಡಿದ್ದಾರೆ. ₹25 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ’ ಎಂದು ಮೃತಳ ಸಹೋದರಿ ಸಂಗೀತಾ ಆರೋಪಿಸಿ, ದೂರು ನೀಡಿದ್ದರು.
‘ಜೀವಾ ಬರೆದಿದ್ದಾರೆ ಎನ್ನಲಾದ 11 ಪುಟಗಳ ಮರಣಪತ್ರವನ್ನೂ ವಶಕ್ಕೆ ಪಡೆದು ಪರಿಶೀಲಿಸಲಾಗುವುದು. ಜೀವಾ ಅವರ ಕೈಬರಹದ ಮಾದರಿಯನ್ನೂ ಸಂಗ್ರಹಿಸಿ ತನಿಖೆ ನಡೆಸಲಾಗುವುದು. ಮರಣಪತ್ರದ ನೈಜತೆ ತಿಳಿದುಕೊಳ್ಳಲು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ(ಎಫ್.ಎಸ್.ಎಲ್) ಬನಶಂಕರಿ ಠಾಣೆ ಪೊಲೀಸರು ಕಳುಹಿಸಿದ್ದಾರೆ. ಅದರ ವರದಿ ನಿರೀಕ್ಷೆಯಲ್ಲಿ ಇದ್ದೇವೆ’ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
ಜೀವಾ ಅವರು ಉದ್ಯಮಿ ಆಗಿದ್ದರು. ಅಲ್ಲದೇ ವಕೀಲ ವೃತ್ತಿಯನ್ನೂ ಮಾಡುತ್ತಿದ್ದರು. ಜೀವಾ ಆತ್ಮಹತ್ಯೆಯ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ವಕೀಲರ ಸಂಘ ಆಗ್ರಹಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.