ADVERTISEMENT

ನಿರುದ್ಯೋಗ ತಗ್ಗಿಸಲು ರಾಜ್ಯದಾದ್ಯಂತ ಬೃಹತ್ ಉದ್ಯೋಗ ಮೇಳ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2024, 15:46 IST
Last Updated 26 ಫೆಬ್ರುವರಿ 2024, 15:46 IST
‘ಯುವ ಸಮೃದ್ಧಿ ಸಮ್ಮೇಳನ ಮತ್ತು ಬೃಹತ್ ಉದ್ಯೋಗ ಮೇಳ’ ಉದ್ಘಾಟನೆಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮ್ಯ ಮತ್ತು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಚಿವ ಶರಣಪ್ರಕಾಶ ಪಾಟೀಲ ಅವರಿಗೆ ಮೇಳಕ್ಕೆ ಬಂದಿದ್ದ ಉದ್ಯೋಗಾಂಕ್ಷಿಗಳು ಹಸ್ತಲಾಘವಕ್ಕೆ ಮುಂದಾದರು.
ಪ್ರಜಾವಾಣಿ ಚಿತ್ರ
‘ಯುವ ಸಮೃದ್ಧಿ ಸಮ್ಮೇಳನ ಮತ್ತು ಬೃಹತ್ ಉದ್ಯೋಗ ಮೇಳ’ ಉದ್ಘಾಟನೆಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮ್ಯ ಮತ್ತು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಚಿವ ಶರಣಪ್ರಕಾಶ ಪಾಟೀಲ ಅವರಿಗೆ ಮೇಳಕ್ಕೆ ಬಂದಿದ್ದ ಉದ್ಯೋಗಾಂಕ್ಷಿಗಳು ಹಸ್ತಲಾಘವಕ್ಕೆ ಮುಂದಾದರು. ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ನಿರುದ್ಯೋಗ ತಗ್ಗಿಸಲು, ರಾಜ್ಯದಾದ್ಯಂತ ಪ್ರಾದೇಶಿಕವಾರು ಬೃಹತ್ ಉದ್ಯೋಗ ಮೇಳಗಳನ್ನು ಆಯೋಜಿಸಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.

ನಗರದ ಅರಮನೆ ಮೈದಾನದಲ್ಲಿ ಸೋಮವಾರ ಕೌಶಲ್ಯಾಭಿವೃದ್ದಿ ಇಲಾಖೆ ಆಯೋಜಿಸಿದ್ದ ‘ಯುವ ಸಮೃದ್ಧಿ ಸಮ್ಮೇಳನ ಮತ್ತು ಬೃಹತ್ ಉದ್ಯೋಗ ಮೇಳ'ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಹೊಸ ಉದ್ಯೋಗ ಸೃಷ್ಟಿ ಮತ್ತು ತರಬೇತಿಗಾಗಿ ಈಗಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರಗಳನ್ನು (ಜಿಟಿಟಿಸಿ) ಬಲವರ್ಧನೆಗೊಳಿಸುವ ಜೊತೆಗೆ, ಹೊಸದಾಗಿ ಇನ್ನಷ್ಟು ಕೇಂದ್ರಗಳನ್ನು ಆರಂಭಿಸಲಾಗುವುದು’ ಎಂದು ಅವರು ಭರವಸೆ ನೀಡಿದರು.

ADVERTISEMENT

ಉದ್ಯೋಗ ಮೇಳಗಳ ಮೂಲಕ ಯುವ ಸಮೂಹಕ್ಕೆ ಉದ್ಯೋಗ ನೀಡಲಾಗುತ್ತದೆ. ಸರ್ಕಾರ ಹೊಸ ಉದ್ಯೋಗಗಳನ್ನು ಸೃಷ್ಟಿಸಲಿದ್ದು, ಉದ್ಯೋಗ ಮಾಡಲು ಅಗತ್ಯವಾದ ಕೌಶಲ ತರಬೇತಿಗಳನ್ನು ನೀಡಲಿದೆ ಎಂದರು.

ಕೌಶಲ್ಯಾಭಿವೃದ್ಧಿ ಸಚಿವ ಶರಣಪ್ರಕಾಶ್ ಪಾಟೀಲ್ ಮಾತನಾಡಿ, ‘ದೇಶದಲ್ಲಿ ಇದೇ ಮೊದಲ ಬಾರಿಗೆ ಬೃಹತ್ ಪ್ರಮಾಣದಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದೆ. ಎಸ್‌ಎಸ್‌ಎಲ್‌ಸಿಯಿಂದ ಸ್ನಾತಕೋತ್ತರ ಪದವಿವರೆಗೆ ವಿವಿಧ ವಿದ್ಯಾರ್ಹತೆಗಳನ್ನು ಹೊಂದಿರುವ 75 ಸಾವಿರ ಮಂದಿ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಸುಮಾರು ಒಂದು ಲಕ್ಷ ಉದ್ಯೋಗಗಳನ್ನು ನೀಡಲು ಸುಮಾರು 600 ಕಂಪನಿಗಳು ಮುಂದಾಗಿವೆ’ ಎಂದು ಹೇಳಿದರು.

ಉದ್ಯೋಗ ಮೇಳದಲ್ಲಿ ನೋಂದಾಯಿಸಿಕೊಂಡು, ಉದ್ಯೋಗ ಸಿಗದಿರುವವರನ್ನು ಗುರುತಿಸಿ, ನಮ್ಮ ಇಲಾಖೆಯು ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅವರಿಗೆ ಅಗತ್ಯವಾದ ಕೌಶಲಾಭಿವೃದ್ಧಿ ತರಬೇತಿ ನೀಡಲಾಗುತ್ತದೆ. ಇದಕ್ಕಾಗಿ ಇಲಾಖೆಯ ‘ಸ್ಕಿಲ್‌ ಕನೆಕ್ಟ್‌ ಪೋರ್ಟಲ್‌’ನ ದತ್ತಾಂಶವನ್ನು ಬಳಸಿಕೊಳ್ಳುತ್ತೇವೆ‘ ಎಂದು ತಿಳಿಸಿದರು   

ಕಾರ್ಯಕ್ರಮದಲ್ಲಿ ‘ಯುವ ಸಮೃದ್ಧಿ’ ಲಾಂಛನವನ್ನು ಅನಾವರಣಗೊಳಿಸಲಾಯಿತು.

ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಕೌಶಲ್ಯಾಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಎಂ. ಕನಗವಲ್ಲಿ ಹಾಜರಿದ್ದರು.

ಬೃಹತ್ಉ ದ್ಯೋಗ ಮೇಳಕ್ಕೆ ಆಗಮಿಸಿದ್ದ ಅಭ್ಯರ್ಥಿಯೊಬ್ಬರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮ್ಯ ಮತ್ತು ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಚಿವ ಶರಣಪ್ರಕಾಶ ಪಾಟೀಲ ಪ್ರಜಾವಾಣಿ ಚಿತ್ರ

‘ಉದ್ಯೋಗ: ಭರವಸೆ ಈಡೇರಿಸದ ಮೋದಿ’

‘ಪ್ರಧಾನಿ ನರೇಂದ್ರ ಮೋದಿಯವರು ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆ ಎಂದು 2014ರಲ್ಲಿ ಭರವಸೆ ನೀಡಿದ್ದರು. ಆ ಪ್ರಕಾರ 10 ವರ್ಷಗಳಲ್ಲಿ 20 ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿತ್ತು. ಆದರೆ ಅವರು ಇರುವ ಉದ್ಯೋಗಗಳನ್ನೂ ಕಸಿದುಕೊಂಡಿದ್ದಾರೆ’ ಎಂದು ದೂರಿದ ಸಿದ್ದರಾಮಯ್ಯ ‘ಇದರಿಂದ ಪ್ರತೀ ವರ್ಷ ನಿರುದ್ಯೋಗ ಪ್ರಮಾಣ ಬೃಹತ್ತಾಗಿ ಬೆಳೆಯುತ್ತಾ ಶೇ 8.40ಕ್ಕೆ ಏರಿದೆ’ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.