ಬೆಂಗಳೂರು: ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ ಹಾಗೂ ಲಯನ್ಸ್ ಕ್ಲಬ್ (ಡಿಸ್ಟ್ರಿಕ್ಟ್ 317ಎಫ್) ವತಿಯಿಂದ ವಿ.ವಿ. ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಇಗ್ನೈಟಿಂಗ್ ಮೈಂಡ್ಸ್–ಉದ್ಯೋಗ ಮೇಳ' ಅವ್ಯವಸ್ಥೆಯ ಆಗರವಾಗಿತ್ತು.
ಉದ್ಯೋಗ ಬಯಸಿ ಆನ್‌ಲೈನ್ ಮೂಲಕ 1,201 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದರು. ಮೇಳದ ಸ್ಥಳದಲ್ಲಿಯೇ 200ಕ್ಕೂ ಹೆಚ್ಚು ಅಭ್ಯರ್ಥಿಗಳು ಹೆಸರು ಬರೆಸಿದ್ದರು. ಅವರಿಗೆ ಬೆಳಿಗ್ಗೆ 8.30ರಿಂದ 9.30ರ ವರೆಗೆ ಬಹುಆಯ್ಕೆ ಮಾದರಿಯ ಪ್ರಶ್ನೆಗಳ ಆನ್‌ಲೈನ್ ಕಿರುಪರೀಕ್ಷೆ (ಮೊಬೈಲ್ ಮೂಲಕ) ನಡೆಸಲು ಯೋಜಿಸಲಾಗಿತ್ತು. ವಿಶ್ವವಿದ್ಯಾಲಯದ ಜ್ಞಾನಜ್ಯೋತಿ ಸಭಾಂಗಣದಲ್ಲಿ ನೆಟ್‌ವರ್ಕ್ ಸಿಗದ ಕಾರಣ ಕಿರುಪರೀಕ್ಷೆ ನಡೆಯಲಿಲ್ಲ.
ಬಳಿಕ ಉದ್ಯೋಗ ಮೇಳದ ಉದ್ಘಾಟನಾ ಕಾರ್ಯಕ್ರಮ ಜರುಗಿತು. ಸಭಿಕರ ಸಂಖ್ಯೆ ಕಡಿಮೆ ಕಾಣಬಾರದೆಂದು ವಿಶ್ವವಿದ್ಯಾ
ಲಯದ ವಿದ್ಯಾರ್ಥಿಗಳನ್ನು ಕರಿಸಿ, ಸಭಾಂಗಣದಲ್ಲಿ ಕೂರಿಸಲಾಗಿತ್ತು. ಸೂಕ್ತ ಮಾಹಿತಿ ಇಲ್ಲದೆ, ನೋಂದಣಿ ಡೆಸ್ಕ್‌ನಲ್ಲೂ ಕೆಲಕಾಲ ಗೊಂದಲ ಉಂಟಾಯಿತು.
ಮೇಳದಲ್ಲಿ 41 ಕಂಪನಿಗಳು ಭಾಗವಹಿಸಲಿವೆ ಎಂದು ಆಯೋಜಕರು ಈ ಮೊದಲು ಘೋಷಿಸಿದ್ದರು. ಆದರೆ, ವಿಮೆ, ಮಾರಾಟ, ಮಾರ್ಕೆಟಿಂಗ್ ಮತ್ತು ಟೂರ್ಸ್ ಆ್ಯಂಡ್ ಟ್ರಾವೆಲ್ಸ್‌ನ ಬೆರಳೆಣಿಕೆಯಷ್ಟು ಕಂಪನಿಗಳು ಮಾತ್ರ ಇದ್ದವು. ಈ ಕಂಪನಿಗಳ ಪ್ರತಿನಿಧಿಗಳಿಗೆ ವಿ.ವಿ.ಯ ಬೇರೆ–ಬೇರೆ ವಿಭಾಗಗಳಲ್ಲಿ ಸ್ಥಳ ಗುರುತಿಸಲಾಗಿತ್ತು. ಆದರೆ, ಅದಕ್ಕೆ ಸರಿಯಾದ ಮಾರ್ಗಸೂಚಿಯ ಫಲಕಗಳನ್ನು ಅಳವಡಿಸಿರಲಿಲ್ಲ. ಹಾಗಾಗಿ ಅಭ್ಯರ್ಥಿಗಳು ಕಂಪನಿಗಳ ಪ್ರತಿನಿಧಿಗಳು ಇರುವ ಕೊಠಡಿಗಳನ್ನು ಪತ್ತೆ ಹಚ್ಚುವ ಪ್ರಮೇಯ ಒದಗಿ ಬಂದಿತ್ತು.
ಕಂಪನಿ ಪ್ರತಿನಿಧಿಗಳು ಅಭ್ಯರ್ಥಿಗಳಿಂದ ಪರಿಚಯ ಪತ್ರ (ರೆಸ್ಯೂಮೆ) ಪಡೆದು, ಐದಾರು ನಿಮಿಷ ಸಂದರ್ಶನ ಮಾಡಿ, ಕರೆ ಮಾಡಿ ತಿಳಿಸುತ್ತೇವೆ ಎಂಬ ಉತ್ತರ ನೀಡಿ ಕಳುಹಿಸುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು. ‘ಅರ್ಹರನ್ನು ಕಂಪನಿಗೆ ಕರೆಸಿ, ಮತ್ತೊಮ್ಮೆ ಸಂದರ್ಶನ ನಡೆಸಿ, ಉದ್ಯೋಗ ನೀಡಲು ಕಂಪನಿಗಳು ನಿರ್ಧರಿಸಿವೆ’ ಎಂದು ಆಯೋಜಕರು ತಿಳಿಸಿದರು. ಕೆಲವರಿಗೆ ಸಂದರ್ಶನದ ಬಳಿಕ ಉದ್ಯೋಗ ಪತ್ರ(ಆಫರ್ ಲೇಟರ್) ವಿತರಿಸಲಾಯಿತು.
ಎಂ.ಕಾಂ., ಎಂ.ಬಿ.ಎ, ಎಂ.ಸಿ.ಎ. ಮತ್ತು ಎಂ.ಎಫ್.ಎ. ಪದವೀಧರರು ಹೆಚ್ಚಿನ ಸಂಖ್ಯೆಯಲ್ಲಿ ಮೇಳದಲ್ಲಿ ಭಾಗವಹಿಸಿದ್ದರು.
ಉದ್ಯೋಗ ಮೇಳ ಉದ್ಘಾಟಿಸಿದ ರಾಜ್ಯಪಾಲ ವಜುಭಾಯಿ ವಾಲಾ, ‘ಆತ್ಮವಿಶ್ವಾಸವಿದ್ದರೆ ಮಾತ್ರ ಗೆಲುವು ನಮ್ಮದಾಗುತ್ತದೆ. ಇಂದಿನ ಉದ್ಯಮ ಮತ್ತು ಕೈಗಾರಿಕಾ ವಲಯಕ್ಕೆ ಬೇಕಾದ ಕೌಶಲಗಳನ್ನು ರೂಢಿಸಿಕೊಳ್ಳಿ’ ಎಂದರು.ಲಯನ್ಸ್ ಕ್ಲಬ್‌ನ ಸಾಮಾಜಿಕ ಸೇವೆಗಳನ್ನು ಶ್ಲಾಘಿಸಿದರು.
* ಮೊದಲ ಬಾರಿಗೆ ಉದ್ಯೋಗ ಮೇಳ ಆಯೋಜಿಸಿರುವ ಕಾರಣ ಕೆಲವೊಂದು ಗೊಂದಲಗಳು ಆಗಿವೆ. ಅವುಗಳನ್ನು ಸರಿಪಡಿಸಿಕೊಳ್ಳುತ್ತೇವೆ
–ಪ್ರೊ.ಎಸ್.ಜಾಫೆಟ್,ಕುಲಪತಿ, ಬೆಂಗಳೂರು ಕೇಂದ್ರ ವಿ.ವಿ.
* ಪ್ರತಿಷ್ಠಿತ ಕಂಪನಿಗಳ ಮಳಿಗೆಗಳು ಮೇಳದಲ್ಲಿ ಇರುತ್ತವೆ ಎಂದು ಹೇಳಿದ್ದರು. ಇಲ್ಲಿ ಕಡಿಮೆ ಸಂಬಳ, ಫೀಲ್ಡ್ ವರ್ಕ್ ನೀಡುವ ಇನ್ಸೂರೆನ್ಸ್ ಕಂಪನಿಗಳು ಮಾತ್ರ ಇವೆ
–ಅಂಜಲಿ,ಹಲಸೂರು
* ಅಕೌಂಟ್ಸ್ ಮತ್ತು ಫೈನಾಸ್ಸಿಂಗ್ ಕಂಪನಿಗಳು ಇಲ್ಲ. ಕೇವಲ ಸೇಲ್ಸ್, ಮಾರ್ಕೆಂಟಿಂಗ್ ಕೆಲಸಗಳಿಗೆ ಕರೆಯುತ್ತಿದ್ದಾರೆ. ಈ ಮೇಳದಿಂದ ಹೆಚ್ಚೇನೂ ಪ್ರಯೋಜನವಾಗಿಲ್ಲ
–ಸಾಗರ್,ಸುಂಕದಕಟ್ಟೆ
ಅಂಕಿ–ಅಂಶ
* 1,582 ನೋಂದಾಯಿಸಿಕೊಂಡಿದ್ದ ಅಭ್ಯರ್ಥಿಗಳು
* 1,200 ಸಂದರ್ಶನ ಎದುರಿಸಿದವರು
* 250 ಉದ್ಯೋಗ ಪಡೆದವರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.