ADVERTISEMENT

ಕೌಶಲ ಆಧಾರಿತ ಉದ್ಯೋಗ ಸೃಷ್ಟಿಗೆ ಒತ್ತು: ಬಜೆಟ್‌ನಲ್ಲಿ ₹3 ಲಕ್ಷ ಕೋಟಿ ಅನುದಾನ:HDK

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2024, 15:49 IST
Last Updated 29 ಅಕ್ಟೋಬರ್ 2024, 15:49 IST
<div class="paragraphs"><p>ಬೆಂಗಳೂರಿನಲ್ಲಿ ಮಂಗಳವಾರ ಅಂಚೆ ಇಲಾಖೆ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ ಆಯ್ಕೆಯಾದವ ಅಭ್ಯರ್ಥಿಗಳಿಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ನೇಮಕಾತಿ ಪತ್ರ&nbsp; ವಿತರಿಸಿದರು. ಪೋಸ್ಟ್ ಮಾಸ್ಟರ್ ಜನರಲ್ ಎಸ್‌. ರಾಜೇಂದ್ರ ಕುಮಾರ್, ಸಂಸದ ಡಾ.ಸಿ.ಎನ್. ಮಂಜುನಾಥ್ ಇದ್ದರು </p></div>

ಬೆಂಗಳೂರಿನಲ್ಲಿ ಮಂಗಳವಾರ ಅಂಚೆ ಇಲಾಖೆ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ ಆಯ್ಕೆಯಾದವ ಅಭ್ಯರ್ಥಿಗಳಿಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ನೇಮಕಾತಿ ಪತ್ರ  ವಿತರಿಸಿದರು. ಪೋಸ್ಟ್ ಮಾಸ್ಟರ್ ಜನರಲ್ ಎಸ್‌. ರಾಜೇಂದ್ರ ಕುಮಾರ್, ಸಂಸದ ಡಾ.ಸಿ.ಎನ್. ಮಂಜುನಾಥ್ ಇದ್ದರು

   

-ಪ್ರಜಾವಾಣಿ ಚಿತ್ರ

ಬೆಂಗಳೂರು: ಕೌಶಲ ಆಧಾರಿತ ಉದ್ಯೋಗ ಸೃಷ್ಟಿಗೆ ಕೇಂದ್ರ ಸರ್ಕಾರ ಒತ್ತು ನೀಡುತ್ತಿದ್ದು, ಬಜೆಟ್‌ನಲ್ಲಿ ₹ 3 ಲಕ್ಷ ಕೋಟಿ ಅನುದಾನ ಮೀಸಲಿಡಲಾಗಿದೆ ಎಂದು ಕೇಂದ್ರ ಬೃಹತ್ ಕೈಗಾರಿಕಾ ಸಚಿವ  ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ADVERTISEMENT

ನಗರದ ಸೆಂಟ್ರಲ್ ಕಾಲೇಜಿನಲ್ಲಿ ಅಂಚೆ ಇಲಾಖೆ ಮಂಗಳವಾರ ಆಯೋಜಿಸಿದ್ದ ಉದ್ಯೋಗ ಮೇಳ ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ 25 ಮಂದಿಗೆ ನೇಮಕಾತಿ ಪತ್ರ ವಿತರಿಸಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರದ 12 ಇಲಾಖೆಗಳಲ್ಲಿ ನೇಮಕಾತಿ ಮಾಡಿಕೊಳ್ಳಲಾಗಿದೆ. 2047ಕ್ಕೆ ವಿಕಸಿತ ಭಾರತ ಗುರಿ ತಲುಪಬೇಕೆಂಬ ಛಲದೊಂದಿಗೆ ಮೋದಿ ಅವರು ಕೌಶಲ ಆಧಾರಿತ ಉದ್ಯೋಗ ಸೃಷ್ಟಿಗೆ ಉತ್ತೇಜನ ಕೊಡುತ್ತಿದ್ದಾರೆ. ‘ಮೇಕ್ ಇನ್ ಇಂಡಿಯಾ’, ‘ಆತ್ಮನಿರ್ಭರ ಭಾರತ’ ಪರಿಕಲ್ಪನೆಗಳ ಅಡಿಯಲ್ಲಿ ಮೋದಿ ಅವರು, ಉದ್ಯೋಗ ಸೃಷ್ಟಿಗೆ ದೊಡ್ಡ ಪ್ರಮಾಣದಲ್ಲಿ ಉತ್ತೇಜನ ಕೊಡುತ್ತಿದ್ದಾರೆ. ಭಾರತವನ್ನು ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯನ್ನಾಗಿ ರೂಪಿಸಲು ಇದು ಸಹಕಾರಿ ಆಗುತ್ತದೆ ಎಂದು ಹೇಳಿದರು.

ಅಂಚೆ ಇಲಾಖೆ ಕಾರ್ಯವನ್ನು ಶ್ಲಾಘಿಸಿದ ಸಚಿವರು, ಮೊದಲ ಹಂತದ ಉದ್ಯೋಗ ಮೇಳದಲ್ಲಿ ಇಲಾಖೆಯು 30 ಸಾವಿರ ಯುವ ಜನರಿಗೆ ಉದ್ಯೋಗ ನೀಡಿದೆ. ಎರಡನೇ ಹಂತದಲ್ಲಿ 20 ಸಾವಿರ ಮಂದಿಗೆ ಉದ್ಯೋಗ ನೀಡಿದೆ ಎಂದರು.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಾ. ಸಿ.ಎನ್.ಮಂಜುನಾಥ್ ಮಾತನಾಡಿ, ‘ದೇಶದಲ್ಲಿ ನಿರುದ್ಯೋಗ ಸಮಸ್ಯೆ ಶೇಕಡ 8ರಿಂದ 7ಕ್ಕೆ ಇಳಿದಿದೆ. ಉದ್ಯೋಗಿಗಳು ಸಕಾರಾತ್ಮಕ ಮನೋಭಾವ ಬೆಳೆಸಿಕೊಂಡು, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಕೇವಲ ಸರ್ಕಾರಿ ಕೆಲಸ ನೆಚ್ಚಿಕೊಳ್ಳಬಾರದು, ಖಾಸಗಿ ಸಂಸ್ಥೆಗಳಲ್ಲೂ ಸಿಗುವ ಉದ್ಯೋಗಾವಕಾಶ ಬಳಸಿಕೊಳ್ಳಬೇಕು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಪದವಿ ಮುಖ್ಯವಲ್ಲ, ಕೌಶಲ ಇರಬೇಕು’ ಎಂದು ಹೇಳಿದರು.

ಅಂಚೆ ಇಲಾಖೆಯ ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ರಾಜೇಂದ್ರ ಕುಮಾರ್ ಹಾಜರಿದ್ದರು. ಉದ್ಯೋಗ ಮೇಳದಲ್ಲಿ 160 ಮಂದಿ ಆಯ್ಕೆಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.