ADVERTISEMENT

ಬೆಂಗಳೂರು: ನೌಕರಿ ಅರಸಿ ಉದ್ಯೋಗ ಮೇಳದತ್ತ ಉದ್ಯೋಗಾಕಾಂಕ್ಷಿಗಳು ದೌಡು

ಸಾವಿರಾರು ಸಂಖ್ಯೆಯಲ್ಲಿ ಬಂದ ಉದ್ಯೋಗಾಕಾಂಕ್ಷಿಗಳು

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2024, 0:12 IST
Last Updated 27 ಫೆಬ್ರುವರಿ 2024, 0:12 IST
ಬೆಂಗಳೂರಿನ ಅರಮನೆ ಮೈದಾನದಲ್ಲಿ ಸೋಮವಾರ ನಡೆದ ಬೃಹತ್ ಉದ್ಯೋಗ ಮೇಳದಲ್ಲಿ ಉದ್ಯೋಗಾಕಾಂಕ್ಷಿಗಳ ದಂಡು. ಪ್ರಜಾವಾಣಿ ಚಿತ್ರ/ಕಿಶೋರ್ ಕುಮಾರ್ ಬೋಳಾರ್
ಬೆಂಗಳೂರಿನ ಅರಮನೆ ಮೈದಾನದಲ್ಲಿ ಸೋಮವಾರ ನಡೆದ ಬೃಹತ್ ಉದ್ಯೋಗ ಮೇಳದಲ್ಲಿ ಉದ್ಯೋಗಾಕಾಂಕ್ಷಿಗಳ ದಂಡು. ಪ್ರಜಾವಾಣಿ ಚಿತ್ರ/ಕಿಶೋರ್ ಕುಮಾರ್ ಬೋಳಾರ್    

ಬೆಂಗಳೂರು: ಅರಮನೆ ಮೈದಾನದಲ್ಲಿ ರಾಜ್ಯ ಸರ್ಕಾರ ಇದೇ ಮೊದಲ ಬಾರಿಗೆ ಆಯೋಜಿಸಿದ್ದ ‘ಬೃಹತ್‌ ಉದ್ಯೋಗ ಮೇಳ’ಕ್ಕೆ ನಿರೀಕ್ಷೆಗೂ ಮೀರಿ ಉದ್ಯೋಗಾಕಾಂಕ್ಷಿಗಳು ಧಾವಿಸಿದ್ದು, ನಿರುದ್ಯೋಗ ಸಮಸ್ಯೆಯು ಎಷ್ಟು ಗಂಭೀರವಾಗಿದೆ ಎಂಬುದನ್ನು ಸೋಮವಾರ ತೆರೆದಿಟ್ಟಿತು.‌

ಹಲವು ಜಿಲ್ಲೆಗಳಿಂದ ಅಲ್ಲದೇ ರಾಜ್ಯದಲ್ಲಿ ಓದಿದ ಹೊರರಾಜ್ಯದ ಯುವಕ–ಯುವತಿಯರೂ ಸ್ವವಿವರದ ಪತ್ರ ಹಿಡಿದು ಉದ್ಯೋಗ ಮೇಳದತ್ತ ದೌಡಾಯಿಸಿದ್ದರು. ಅವರೆಲ್ಲರೂ ಉದ್ಯೋಗ ದೊರೆಯುವ ಆಸೆಯಿಂದ ಕಂಪನಿಗಳು ತೆರೆದಿದ್ದ ಮಳಿಗೆಗಳತ್ತ ಎಡತಾಕಿ, ಸ್ವವಿವರ ದಾಖಲೆಗಳನ್ನು ಸಲ್ಲಿಸಿದರು.

ಕೌಶಲ್ಯಾಭಿವೃದ್ಧಿ ಇಲಾಖೆ ‘ಯುವ ಸಮೃದ್ಧಿ ಸಮ್ಮೇಳನ ಮತ್ತು ಬೃಹತ್ ಉದ್ಯೋಗ ಮೇಳ’ವನ್ನು ಆಯೋಜಿಸಿತ್ತು. 

ADVERTISEMENT

ಸೋಮವಾರ ಬೆಳಿಗ್ಗೆಯಿಂದಲೇ ಅರಮನೆ ಮೈದಾನದ ‘ಕೃಷ್ಣ ವಿಹಾರ’ದ ಗೇಟ್‌ನತ್ತ ಉದ್ಯೋಗಾಕಾಂಕ್ಷಿಗಳು ಬರಲು ಆರಂಭಿಸಿದ್ದರು. ಉದ್ಘಾಟನೆ ವೇಳೆಗೆ ಇಡೀ ಮೈದಾನ ಭರ್ತಿಯಾಗಿತ್ತು. ಹೊತ್ತು ಕಳೆದಂತೆ ಎರಡು ಬೃಹತ್‌ ಪೆಂಡಾಲ್‌ನಲ್ಲಿ ಕಾಲಿಡಲು ಸ್ಥಳಾವಕಾಶ ಇರಲಿಲ್ಲ. ದೂರದ ಪ್ರದೇಶದಿಂದ ಬಂದವರು ಮಧ್ಯಾಹ್ನದ ವೇಳೆಗೆ ಮೇಳ ನಡೆಯುತ್ತಿದ್ದ ಸ್ಥಳವನ್ನು ತಲುಪಿದರು.

ಉದ್ಯೋಗದ ಕನಸಿನೊಂದಿಗೆ..

ಕಳೆದ ವರ್ಷ ಪದವಿ ಪೂರ್ಣಗೊಳಿಸಿದ್ದವರು ಹಾಗೂ ವಯಸ್ಸು ಮೀರಿದ್ದವರೂ ಉದ್ಯೋಗ ಅರಸಿ ಬಂದಿದ್ದರು. ಪೋಷಕರು ಹಾಗೂ ಸ್ನೇಹಿತರೊಂದಿಗೆ ಬಂದಿದ್ದವರಲ್ಲಿ ಉದ್ಯೋಗ ಪಡೆಯುವ ಧಾವಂತ ಕಾಣಿಸಿತು. ಉದ್ಯೋಗದಲ್ಲಿದ್ದ ಕೆಲವರು ಉತ್ತಮ ಕಂಪನಿಯ ಹುಡುಕಾಟದಲ್ಲಿದ್ದರು. ‌

ಆನ್‌ಲೈನ್‌ನಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಭಾನುವಾರದವರೆಗೆ ನೋಂದಣಿಗೆ ಅವಕಾಶವಿತ್ತು. ಬೆಂಗಳೂರು ಸೇರಿದಂತೆ ಪ್ರತಿ ಜಿಲ್ಲೆಯಿಂದ ಸಾವಿರಾರು ಸಂಖ್ಯೆಯಲ್ಲಿ ನೋಂದಣಿ ನಡೆದಿತ್ತು. ಅಂದಾಜು 600ಕ್ಕೂ ಹೆಚ್ಚು ಕಂಪನಿಗಳು, ಕೌಶಲವುಳ್ಳ ಅಭ್ಯರ್ಥಿಗಳ ಆಯ್ಕೆಗೆ ಮೊದಲ ಹಂತದ ಪ್ರಕ್ರಿಯೆ ನಡೆಸಿದವು. 1 ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗ ಸಿಗುವ ಸಾಧ್ಯತೆ ಇದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಅಭ್ಯರ್ಥಿಗಳಿಗೆ ಮೊದಲ ದಿನ ಆನ್‌ಲೈನ್‌ನಲ್ಲಿ ಐದು ಕಂಪನಿಗಳಿಗಷ್ಟೇ ನೋಂದಣಿಗೆ ಅವಕಾಶವಿತ್ತು. ಸ್ಥಳದಲ್ಲಿ ಹಲವು ಕಂಪನಿಗಳ ಆಯ್ಕೆಗೆ ಅವಕಾಶವಿತ್ತು. ಆದರೆ, ನೆಟ್‌ವರ್ಕ್ ಸಮಸ್ಯೆಯಿಂದ ನೋಂದಣಿಗೆ ತೊಡಕಾಗಿತ್ತು.

ವಿವಿಧ ವಿದ್ಯಾರ್ಹತೆಗಳು..

ಎಸ್‌ಎಸ್‌ಎಲ್‌ಸಿಯಿಂದ ಸ್ನಾತಕೋತ್ತರ ಪದವಿವರೆಗೆ ವಿದ್ಯಾಭ್ಯಾಸ ಪೂರೈಸಿದವರಿಗೆ ಒಂದೇ ಸೂರಿನಡಿ ಉದ್ಯೋಗದ ಅವಕಾಶಗಳಿದ್ದವು. ಎಸ್‌ಎಸ್‌ಎಲ್‌ಸಿಗಿಂತ ಕಡಿಮೆ ಓದಿದವರಿಗೂ ಉದ್ಯೋಗಾವಕಾಶವಿತ್ತು. ಮೇಳಕ್ಕೆ ಹೆಸರು ನೋಂದಾಯಿಸಿಕೊಳ್ಳಲು ಪ್ರತಿ ಜಿಲ್ಲೆಯಲ್ಲೂ ಪ್ರಚಾರ ನಡೆಸಲಾಗಿತ್ತು. ಡಿಪ್ಲೊಮಾ, ಐಟಿಐ, ಬಿಇ, ಎಂಬಿಎ, ಬಿಕಾಂ, ಬಿಎ, ಬಿಎಸ್‌ಸಿ, ಎಂಎಸ್‌ಸಿ, ಎಂಎ ಸೇರಿದಂತೆ ವಿವಿಧ ವಿದ್ಯಾರ್ಹತೆಯುಳ್ಳವರು ಆನ್‌ಲೈನ್‌ನಲ್ಲಿ ಆಯ್ಕೆ ಮಾಡಿಕೊಂಡಿದ್ದ ಕಂಪನಿಗಳ ಮಳಿಗೆಗಳಲ್ಲಿ ಸ್ವವಿವರ ಸಲ್ಲಿಸಿದರು.

ಆಕಾಂಕ್ಷಿಗಳು ಪ್ರತಿ ಮಳಿಗೆಯಲ್ಲಿದ್ದ ಕ್ಯೂ ಆರ್‌ ಕೋಡ್‌ ಸ್ಕ್ಯಾನ್‌ ಮಾಡಿ ಕಂಪನಿಯ ಮಾಹಿತಿ ಕಲೆಹಾಕುತ್ತಿದ್ದರು. ಈ ವೇಳೆ ಪದೇ ಪದೇ ನೆಟ್‌ವರ್ಕ್‌ ಸಮಸ್ಯೆ ಕಾಡುತ್ತಿತ್ತು. ಅಲ್ಲದೆ ಇಂಗ್ಲಿಷ್‌ ವರ್ಣಮಾಲೆ ಪ್ರಕಾರ ಕಂಪನಿಗಳಿಗೆ ಮಳಿಗೆ ನೀಡಲಾಗಿತ್ತು. ಇದರಿಂದ ನಿಗದಿತ ಮಳಿಗೆ ಹುಡುಕಲು ಸಮಸ್ಯೆ ಎದುರಾಯಿತು ಎಂದು ಮಂಡ್ಯದ ಸವಿತಾ ದೂರಿದರು.

ಸಾಫ್ಟ್‌ವೇರ್ ಕಂಪನಿಗಳಿಗೆ ಸಂಬಂಧಿಸಿದ ಮಳಿಗೆಗಳ ಸಂಖ್ಯೆ ಕಡಿಮೆಯಿವೆ. ಕನ್ಸಲ್ಟೆನ್ಸಿ ಸರ್ವಿಸ್‌, ಬ್ಯಾಂಕಿಂಗ್‌, ಎಚ್‌ಆರ್‌ಗೆ ಸಂಬಂಧಿಸಿದ ಹೆಚ್ಚಿನ ಮಳಿಗೆಗಳಿವೆ ಎಂದು ಪಾಂಡವಪುರದ ಚೇತನ್‌ ಹೇಳಿದರು.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಸೋಮವಾರ ನಡೆದ ಬೃಹತ್ ಉದ್ಯೋಗ ಮೇಳದಲ್ಲಿ ಉದ್ಯೋಗಾಕಾಂಕ್ಷಿಗಳ ದಂಡು. ಪ್ರಜಾವಾಣಿ ಚಿತ್ರ/ಕಿಶೋರ್ ಕುಮಾರ್ ಬೋಳಾರ್
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಬೃಹತ್ ಉದ್ಯೋಗ ಮೇಳದಲ್ಲಿ ಕಂಪನಿ ಪ್ರತಿನಿಧಿಯೊಬ್ಬರು ಉದ್ಯೋಗಾಕಾಂಕ್ಷಿಗಳ ಕಿರು ಸಂದರ್ಶನ ನಡೆಸಿದರು. –ಪ್ರಜಾವಾಣಿ ಚಿತ್ರ/ಕಿಶೋರ್ ಕುಮಾರ್ ಬೋಳಾರ್

ದೊರೆಯದ ನೇಮಕಾತಿ ಪತ್ರ

ಕಂಪನಿಗಳು ‘ಸ್ವವಿವರಗಳನ್ನು ಮಾತ್ರ ತೆಗೆದುಕೊಂಡಿದ್ದೇವೆ. ಒಂದು ವಾರದ ನಂತರ ಕರೆ ಮಾಡಿ ನೇಮಕಾತಿಯ ಬಗ್ಗೆ ಮಾಹಿತಿ ನೀಡುತ್ತೇವೆ’ ಎಂದು ಹೇಳಿದ್ದು ಉದ್ಯೋಗಾಕಾಂಕ್ಷಿಗಳಲ್ಲಿ ನಿರಾಸೆ ಮೂಡಿಸಿತು. ಸ್ಥಳದಲ್ಲೇ ನೇಮಕಾತಿ ಪತ್ರ ದೊರೆಯುವ ನಿರೀಕ್ಷೆಯಲ್ಲಿದ್ದೆವು. ಆದರೆ ಸ್ವವಿವರ ಮಾತ್ರ ಪಡೆದುಕೊಳ್ಳಲಾಗಿದೆ ಎಂದು ಹಲವರು ದೂರಿದರು. ಕೆಲವು ಕಂಪನಿಗಳು ಸ್ಥಳದಲ್ಲೇ ಕಿರು ಸಂದರ್ಶನ ನಡೆಸಿದವು. ‘ಕಂಪನಿಗೆ ಕರೆಸಿಕೊಂಡು ಮತ್ತೊಮ್ಮೆ ಸಂದರ್ಶನ ನಡೆಸುತ್ತೇವೆ. ವೇತನದ ಬಗ್ಗೆ ನಿರ್ಧಾರ ಕೈಗೊಂಡು ನೇಮಕಾತಿ ಪತ್ರ ನೀಡುತ್ತೇವೆ’ ಎಂದು ಅಭ್ಯರ್ಥಿಗಳಿಗೆ ಹಲವು ಕಂಪನಿಗಳು ಭರವಸೆ ನೀಡಿವೆ.  ‘ಬಿಡದಿಯ ಟೊಯೊಟ ಕಿರ್ಲೋಸ್ಕರ್‌ ಕಂಪನಿಯಲ್ಲಿ ಡಿಪ್ಲೊಮಾ ಪದವೀಧರರಿಗೆ ಉದ್ಯೋಗದ ಅವಕಾಶವಿದ್ದು ನೋಂದಣಿ ಮಾಡಿಕೊಂಡವರಿಗೆ ಕಿರು ಸಂದರ್ಶನ ನಡೆಸಲಾಗಿದೆ. ಬೇರೆ ಬೇರೆ ಪದವೀಧರರ ವಿವರ ಪಡೆದುಕೊಳ್ಳಲಾಗಿದೆ. ಅವರಿಗೆ ಕರೆ ಮಾಡಿ ಮಾಹಿತಿ ನೀಡುತ್ತೇವೆ. ಮೇಳ ಆಯೋಜನೆಯಿಂದ ಕಂಪನಿಗೂ ಪ್ರತಿಭಾನ್ವಿತರು ಸಿಗುತ್ತಾರೆ’ ಎಂದು ಕಂಪನಿ ಪ್ರತಿನಿಧಿಯೊಬ್ಬರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.