ಬೆಂಗಳೂರು: ‘ವಿವಿಧ ಇಲಾಖೆಗಳಲ್ಲಿ ವಿಲೀನಗೊಂಡಿರುವ ವೃತ್ತಿ ಶಿಕ್ಷಕರು (ಕ್ರಾಫ್ಟ್ ಟೀಚರ್ಸ್) ಮತ್ತು ಜೆಒಸಿ ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್ ಹೇಳಿದರು.
ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘದ ಪದಾಧಿಕಾರಿಗಳು ಪದವೀಧರ, ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಸದಸ್ಯರ ಜೊತೆ ಶುಕ್ರವಾರ ಸಭೆ ನಡೆಸಿದ ಅವರು, ‘ವಿಲೀನಗೊಳಿಸದೇ ಬಾಕಿ ಉಳಿದಿರುವ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ 11 ಮಂದಿ ಭಾಷಾ ಉಪನ್ಯಾಸಕರು ಮತ್ತು 28 ಬೋಧಕೇತರ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಸೇವಾ ವಿಲೀನಗೊಳಿಸುವ ಬಗ್ಗೆ ಕೂಡಲೇ ಪ್ರಸ್ತಾವ ಸಲ್ಲಿಸಬೇಕು’ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರಿಗೆ ಸೂಚನೆ ನೀಡಿದರು.
‘ವಿಲೀನ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ವೃತ್ತಿಶಿಕ್ಷಣ ಇಲಾಖೆಯಿಂದ ನೀಡಬೇಕಾಗಿದ್ದ ಬಾಕಿ ವೇತನ ಮಂಜೂರು ಮಾಡುವುದಕ್ಕೆ ಅಗತ್ಯ ಪ್ರಸ್ತಾವದೊಂದಿಗೆ ಅನುಮೋದನೆಗೆ ಕಡತ ಮಂಡಿಸಬೇಕು’ ಎಂದೂ ಸೂಚಿಸಿದರು.
‘ಇಲಾಖೆಯಲ್ಲಿ ವಿಲೀನಗೊಂಡು ನಿವೃತ್ತಿ ಅಂಚಿನಲ್ಲಿರುವ 95 ಜೆಒಸಿ ಉಪನ್ಯಾಸಕರಿಗೆ ಒಂದು ಬಾರಿ ವಿಶೇಷ ಪ್ರಕರಣವಾಗಿ ಬಿ.ಇಡಿ ಪದವಿ ವಿನಾಯಿತಿ ನೀಡಲಾಗುತ್ತದೆ. ಈ ಅವಧಿಯನ್ನು ಪ್ರೊಬೇಷನರಿ ಅವಧಿ ಎಂದು ಘೋಷಿಸಲೂ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ’ ಎಂದೂ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.