ADVERTISEMENT

ಇ– ಖಾತಾ ಸಮಸ್ಯೆ ಪರಿಹಾರಕ್ಕೆ ಜಂಟಿ ಕಾರ್ಯಪಡೆ

ಮೂವರು ಸಚಿವರ ನೇತೃತ್ವದ ಸಭೆಯಲ್ಲಿ ನಿರ್ಣಯ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2024, 15:51 IST
Last Updated 13 ನವೆಂಬರ್ 2024, 15:51 IST
   

ಬೆಂಗಳೂರು: ನಗರ, ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಇ–ಆಸ್ತಿ, ಇ–ವಿನ್ಯಾಸ ಹಾಗೂ ಇ–ಸ್ವತ್ತು ವಿತರಣೆಯಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಅಭಿವೃದ್ಧಿ ಆಯುಕ್ತೆ ಉಮಾ ಮಹದೇವನ್‌ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ಜಂಟಿ ಕಾರ್ಯಪಡೆ ರಚಿಸಲು ತೀರ್ಮಾನಿಸಲಾಗಿದೆ.

ಆಸ್ತಿಗಳ ಖಾತೆ ಹಾಗೂ ನಕ್ಷೆಗಳ ಮಂಜೂರಾತಿಗೆ ಸಂಬಂಧಿಸಿದ ತೊಡಕುಗಳ ನಿವಾರಣೆಗೆ ಕದಾಯ ಸಚಿವ ಕೃಷ್ಣ ಬೈರೇಗೌಡ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಹಾಗೂ ಪೌರಾಡಳಿತ ಸಚಿವ ರಹೀಂ ಖಾನ್‌ ನೇತೃತ್ವದಲ್ಲಿ ಬುಧವಾರ ನಡೆದ ಮೂರೂ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಚಿಕ್ಕಮಗಳೂರು, ಹಾಸನ, ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಖಾತಾ ವಿತರಿಸುವಲ್ಲಿ ಎದುರಾಗಿರುವ ಸಮಸ್ಯೆಗಳಿಗೆ ಪರಿಹಾರ, ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮ ಠಾಣಾ ವ್ಯಾಪ್ತಿಯ ವಿಸ್ತರಣೆ ಕುರಿತೂ ಅಧ್ಯಯನ ನಡೆಸಿ ಶಿಫಾರಸು ಸಲ್ಲಿಸುವಂತೆ ಕಾರ್ಯಪಡೆಗೆ ನಿರ್ದೇಶನ ನೀಡಲು ತೀರ್ಮಾನಿಸಲಾಗಿದೆ.

ADVERTISEMENT

ಪುರಸಭೆ, ಪಟ್ಟಣ ಪಂಚಾಯಿತಿ ಮತ್ತು ನಗರಸಭೆಗಳ ವ್ಯಾಪ್ತಿಯಲ್ಲಿ  ಖಾತೆ ಹೊಂದಿರದ ವಸತಿ ಹಾಗೂ ವಾಣಿಜ್ಯ ಆಸ್ತಿಗಳಿಗೆ ಬಿಬಿಎಂಪಿ ಮಾದರಿಯಲ್ಲಿ ಖಾತಾ ನೀಡುವ ವ್ಯವಸ್ಥೆ ತರಲು ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಒಪ್ಪಿಕೊಂಡಿದ್ದಾರೆ. ಕರ್ನಾಟಕ ಗೃಹಮಂಡಳಿ ಮತ್ತು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗಳನ್ನೂ ಇ–ಆಸ್ತಿ ವ್ಯಾಪ್ತಿಗೆ ತರಲಾಗುವುದು ಎಂದು ಕೃಷ್ಣ ಬೈರೇಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎಲ್ಲ ನಗರಾಭಿವೃದ್ಧಿ ಪ್ರಾಧಿಕಾರಗಳನ್ನೂ ಇ–ಆಸ್ತಿ ವ್ಯಾಪ್ತಿಗೆ ತರಲು ನಿರ್ಧರಿಸಲಾಗಿದೆ. ಆಸ್ತಿಗಳ ವಿಸ್ತೀರ್ಣದ ಮಾಹಿತಿ ಇಲ್ಲದ ಪ್ರಕರಣಗಳಲ್ಲಿ ಅಳತೆ ನಮೂದಿಸಲು ಅವಕಾಶ ಕಲ್ಪಿಸಲು ಎನ್‌ಐಸಿ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹಕ್ಕು ಬಿಡುಗಡೆ ಪತ್ರ ಸಲ್ಲಿಸಿದ ಸಂದರ್ಭದಲ್ಲಿ ಡೆವಲಪರ್‌ಗಳ ಹೆಸರಿಗೆ ನಿವೇಶನಗಳ ಖಾತೆ ಮಾಡಿಕೊಡುವ ಸಂಬಂಧ ಸುತ್ತೋಲೆಯನ್ನೂ ಹೊರಡಿಸಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

‘ಅಭಿವೃದ್ಧಿ ಹಕ್ಕುಗಳ ವರ್ಗಾವಣೆಗೆ (ಟಿಡಿಆರ್‌) ಸಂಬಂಧಿಸಿದ ವಹಿವಾಟುಗಳಲ್ಲಿ ವ್ಯಾಪಕ ಅಕ್ರಮಗಳು ನಡೆಯುತ್ತಿರುವುದು ಗಮನಕ್ಕೆ ಬಂದಿದೆ. ಅದನ್ನು ತಡೆಯಲು ಟಿಡಿಆರ್‌ಗಳನ್ನೂ ಇ–ಆಸ್ತಿ/ ಇ–ಸ್ವತ್ತು ವ್ಯಾಪ್ತಿಗೆ ತಂದು, ಪ್ರತ್ಯೇಕ ಆಸ್ತಿ ಗುರುತಿನ ಸಂಖ್ಯೆ (ಪಿಐಡಿ) ನೀಡುವ ತೀರ್ಮಾನವನ್ನೂ ಸಭೆಯಲ್ಲಿ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

‘ಎಲ್ಲ ಆಸ್ತಿಗಳಿಗೂ ಇ–ಖಾತಾ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ. ಈಗ ಪ್ರಕ್ರಿಯೆಯಲ್ಲಿ ಇರುವ ಲೋಪಗಳನ್ನು ಸರಿಪಡಿಸಲಾಗುತ್ತಿದೆ. ಇ–ಖಾತಾ ಕಡ್ಡಾಯಗೊಳಿಸಿರುವುದರಿಂದ ನಕಲಿ ಖಾತೆಗಳನ್ನು ಸೃಷ್ಟಿಸಿ ಅಕ್ರಮ ಎಸಗುವುದು ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರಲಿದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.