ಬೆಂಗಳೂರು: ನಗರದ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಮಾರಗೊಂಡನಹಳ್ಳಿ ಕೆರೆಗೆ ಜೆಎಸ್‌ಡಬ್ಲ್ಯು ಸಮೂಹ ಕಾಯಕಲ್ಪ ನೀಡಿದೆ.
ಜೆಎಸ್‌ಡಬ್ಲ್ಯು ಸ್ಟೀಲ್ ವಿಜಯನಗರ ಮತ್ತು ಸೇಲಂ ವರ್ಕ್ಸ್‌ನ ಅಧ್ಯಕ್ಷ ಪಿ.ಕೆ. ಮುರುಗನ್ ಮತ್ತು ಜೆಎಸ್‌ಡಬ್ಲ್ಯು ಫೌಂಡೇಷನ್‌ನ ಸಿಇಒ ಅಶ್ವಿನಿ ಸಕ್ಸೇನಾ ಅವರು ಪುನರುಜ್ಜೀವನಗೊಳಿಸಿದ ಕೆರೆಯನ್ನು ಸೋಮವಾರ ಸಾರ್ವಜನಿಕರ ಬಳಕೆಗೆ ಹಸ್ತಾಂತರಿಸಿದರು.
ಈ ಯೋಜನೆಗೆ ಜೆಎಸ್‌ಡಬ್ಲ್ಯು ಸಮೂಹ ತನ್ನ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಅನ್ವಯ ನೆರವು ನೀಡಿತ್ತು. ಕೆರೆ ಪುನಶ್ಚೇತನ ಯೋಜನೆಯ ಅನುಷ್ಠಾನದ ಕಾರ್ಯವನ್ನು 2021ರಲ್ಲಿ ಮಲ್ಲಿಗವಾಡ ಫೌಂಡೇಷನ್‌ನ ಆನಂದ್ ಮಲ್ಲಿಗವಾಡ್ ಕೈಗೊಂಡಿದ್ದರು. ಜೆಎಸ್‌ಡಬ್ಲ್ಯು ಫೌಂಡೇಷನ್ ಮುಂದಿನ ಎರಡು ವರ್ಷಗಳವರೆಗೆ ಕೆರೆಯ ನಿರ್ವಹಣೆಯ ಜವಾಬ್ದಾರಿಯನ್ನು ಸಹ ವಹಿಸಿಕೊಂಡಿದೆ.
ಈ ಕೆರೆಯ ಪುನಶ್ಚೇತನ ಕಾರ್ಯ ಕೈಗೊಂಡಿರುವುದರಿಂದ 1 ಲಕ್ಷ ಘನ ಮೀಟರ್‌ಗಳಷ್ಟು ಹೆಚ್ಚುವರಿ ನೀರಿನ ಸಂಗ್ರಹ ಸಾಮರ್ಥ್ಯವನ್ನು ಇದು ಹೊಂದಲಿದೆ. ಕೆರೆಯ ಸುತ್ತ 16 ಸಾವಿರ ಸಸಿಗಳನ್ನು ನೆಡಲಾಗಿದೆ. ಸ್ಥಳೀಯ ನಿವಾಸಿಗಳು ಕೆರೆಯ ಸುತ್ತಲೂ 4,500 ಕ್ಕೂ ಹೆಚ್ಚು ಸಸಿಗಳನ್ನು ನೆಡುವ ಮೂಲಕ ಪುನಶ್ಚೇತನ ಯೋಜನೆಗೆ ಸಹಕರಿಸಿದ್ದಾರೆ.
ಜೆಎಸ್‌ಡಬ್ಲ್ಯು ಫೌಂಡೇಷನ್‌ನ ಸಿಇಒ ಅಶ್ವಿನಿ ಸಕ್ಸೇನಾ, ‘ಕೊಳಚೆ ಮತ್ತು ಕೆಸರು ತುಂಬಿದ್ದ ಮಾರಗೊಂಡನಹಳ್ಳಿ ಕೆರೆಯು ದುಃಸ್ಥಿತಿಯಲ್ಲಿತ್ತು. ಕೆರೆಯಲ್ಲಿ ತ್ಯಾಜ್ಯ ಎಸೆಯಲಾಗುತ್ತಿತ್ತು. ಇಂತಹ ಕೆರೆ ಪ್ರದೇಶವನ್ನು ಪುನರುಜ್ಜೀವನಗೊಳಿಸಲಾಗಿದೆ. ಕೆರೆಯಿಂದ ಹೂಳೆತ್ತಲಾದ ಮಣ್ಣನ್ನು ಗಡಿ ಗೋಡೆಗೆ ಬಳಸಲಾಗಿದೆ’ ಎಂದು ವಿವರಿಸಿದರು.
ಮಲ್ಲಿಗವಾಡ ಫೌಂಡೇಶನ್‌ನ ಆನಂದ್ ಮಲ್ಲಿಗವಾಡ ಮಾತನಾಡಿ, ‘ಕೆರೆ ಪುನಶ್ಚೇತನಕ್ಕೆ ಜೆಎಸ್‌ಡಬ್ಲ್ಯು ಫೌಂಡೇಷನ್ ಅಪಾರ ನೆರವು ನೀಡಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.