ADVERTISEMENT

ಬೆಂಗಳೂರು ಕೇಂದ್ರ: ಕಣದಲ್ಲಿ ‘ಜಸ್ಟ್‌ ಆಸ್ಕಿಂಗ್‌’ ಸದ್ದು!

ಮಂಜುನಾಥ್ ಹೆಬ್ಬಾರ್‌
Published 18 ಮೇ 2019, 13:10 IST
Last Updated 18 ಮೇ 2019, 13:10 IST
   

ಬೆಂಗಳೂರು:ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ನ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಪಕ್ಷೇತರರಾಗಿ ಕಣದಲ್ಲಿರುವ ಬಹುಭಾಷಾ ನಟ ಪ್ರಕಾಶ್‌ರಾಜ್‌ ‘ಜಸ್ಟ್ ಆಸ್ಕಿಂಗ್‌’ ಮೂಲಕ ಸದ್ದು ಮಾಡುತ್ತಿದ್ದಾರೆ.

ಕ್ಷೇತ್ರ ಪುನರ್‌ವಿಂಗಡಣೆ ಬಳಿಕ 2009ರಲ್ಲಿ ಅಸ್ತಿತ್ವಕ್ಕೆ ಬಂದ ಈ ಕ್ಷೇತ್ರದಲ್ಲಿ ಬಿಜೆಪಿಯ ಪಿ.ಸಿ.ಮೋಹನ್‌ ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. 2014ರಲ್ಲಿ 1.37 ಲಕ್ಷ ಮತಗಳ ಅಂತರದಲ್ಲಿ ಸೋತಿರುವ ಕಾಂಗ್ರೆಸ್‌ನ ರಿಜ್ವಾನ್ ಅರ್ಷದ್‌ ಮತ್ತೆ ತೊಡೆ ತಟ್ಟಿದ್ದಾರೆ. 10 ವರ್ಷಗಳಲ್ಲಿ ಮೋಹನ್‌ ಅವರ ಸಾಧನೆ ಏನು ಎಂದು ರಿಜ್ವಾನ್‌ ಹಾಗೂ ಪ್ರಕಾಶ್‌ರಾಜ್‌ ಪದೇ ಪದೇ ಪ್ರಶ್ನೆ ಮಾಡುತ್ತಿದ್ದಾರೆ.

ಈ ಕ್ಷೇತ್ರದ ವ್ಯಾಪ್ತಿಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಶಾಸಕರಿದ್ದರೆ, ಮೂರರಲ್ಲಿ ಬಿಜೆಪಿ ಶಾಸಕರಿದ್ದಾರೆ. ಕೆ.ಜೆ. ಜಾರ್ಜ್‌ ಹಾಗೂ ಜಮೀರ್ ಅಹಮದ್‌ ಖಾನ್‌ ಮೈತ್ರಿ ಸರ್ಕಾರದಲ್ಲಿ ಸಚಿವರಾಗಿದ್ದಾರೆ. ಶಾಸಕರ ಹಾಗೂ ಸಚಿವರ ‘ಕೈ’ ಬಲ ಗೆಲುವಿನ ದಡವನ್ನು ಮುಟ್ಟಿಸಬಹುದು ಎಂಬ ಆಶಾಭಾವದಲ್ಲಿ ರಿಜ್ವಾನ್‌ ಇದ್ದಾರೆ. ಕ್ಷೇತ್ರದ ಜನರ ಜತೆಗಿನ ಒಡನಾಟ ಹಾಗೂ ಕಳೆದ ಸಾಲಿನ ಸೋಲಿನ ಅನುಕಂಪದ ಅಲೆ ಕೈ ಹಿಡಿದರೆ ಎದುರಾಳಿಯನ್ನು ಚಿತ್‌ ಮಾಡಬಹುದು ಎಂಬುದು ಅವರ ಆಲೋಚನೆ.

ADVERTISEMENT

‘ಬೆಂಗಳೂರಿನ ರೈಲ್ವೆ ಜಾಲದ ಬಗ್ಗೆ ಸಂಸತ್‌ನ ಒಳಗೆ ಹಾಗೂ ಹೊರಗೆ ಗಟ್ಟಿ ಧ್ವನಿ ಎತ್ತಿದವರು ಪಿ.ಸಿ.ಮೋಹನ್. ಉಪನಗರ ರೈಲು ಯೋಜನೆಗೆ ಆಡಳಿತಾತ್ಮಕ ಮಂಜೂರಾತಿ ಸಿಗುವಲ್ಲಿ ಅವರ ಪಾತ್ರ ಮಹತ್ವದ್ದು. ಸಂಸದರು ಜನರ ಕೈಗೆ ಸುಲಭದಲ್ಲಿ ಸಿಗುತ್ತಾರೆ. ಈ ಎಲ್ಲ ಅಂಶಗಳು ಅನುಕೂಲವಾಗಲಿವೆ’ ಎಂಬುದು ಸಂಸದರ ಬೆಂಬಲಿಗರ ಮಾತು.

ಪ್ರಕಾಶ್‌ರಾಜ್‌ ಅವರಿಗೆ ಆಮ್‌ ಆದ್ಮಿ ಪಕ್ಷ ಬೆಂಬಲ ನೀಡಿದೆ. ಅವರು ನಾಲ್ಕು ತಿಂಗಳಿಂದ ಕ್ಷೇತ್ರದಲ್ಲಿ ಪ್ರಚಾರದಲ್ಲಿ ತೊಡಗಿದ್ದಾರೆ. ಸ್ಥಳೀಯ ಹಾಗೂ ಬೆಂಗಳೂರಿನ ಸಮಸ್ಯೆಗಳನ್ನು ಪ್ರಸ್ತಾಪಿಸಿ ಮತ ಕೇಳುತ್ತಿದ್ದಾರೆ. ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ಬಿರುಸಿನ ಸ್ಪರ್ಧೆ ಏರ್ಪಟ್ಟರೆ, ಪ್ರಕಾಶ್‌ರಾಜ್‌ ಪಡೆಯುವ ಮತಗಳು ನಿರ್ಣಾಯಕವಾಗಬಹುದು.

2009ರಲ್ಲಿ ಕಾಂಗ್ರೆಸ್‌ ಹುರಿಯಾಳು ಆಗಿದ್ದ ಎಚ್‌.ಟಿ. ಸಾಂಗ್ಲಿಯಾನ ಮುನಿಸಿಕೊಂಡು ಕೈ ಪಾಳಯವನ್ನು ತೊರೆದಿದ್ದಾರೆ. ‘ಕ್ರೈಸ್ತ ಸಮುದಾಯವನ್ನು ಕಾಂಗ್ರೆಸ್‌ ನಿರ್ಲಕ್ಷ್ಯ ಮಾಡಿದೆ’ ಎಂದೂ ಅವರು ದೂಷಿಸಿದ್ದಾರೆ. ಶಿವಾಜಿನಗರದ ಶಾಸಕ ಆರ್. ರೋಷನ್ ಬೇಗ್‌ ಈ ಬಾರಿ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗದ ಬಳಿಕ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಸಿದ್ಧತೆ ಮಾಡಿಕೊಂಡಿದ್ದರು. ಟಿಕೆಟ್‌ ಕೈತಪ್ಪಿದ್ದರಿಂದ ಅಸಮಾಧಾನಗೊಂಡಿರುವ ಅವರು, ಕಾಂಗ್ರೆಸ್ ನಾಯಕರ ವಿರುದ್ಧ ಬಹಿರಂಗವಾಗಿಯೇ ಹರಿಹಾಯ್ದಿದ್ದಾರೆ. ಪಕ್ಷದ ನಾಯಕರೇ ಒಳ ಏಟು ನೀಡುವ ಭೀತಿಯೂ ಕಾಂಗ್ರೆಸ್‌ ನಾಯಕರನ್ನು ಕಾಡುತ್ತಿದೆ.

ಬೆಂಗಳೂರಿನ ಬಿಜೆಪಿ ನಾಯಕರ ವಿರುದ್ಧ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮುನಿಸಿಕೊಂಡಿದ್ದರು. ‘ಬೆಂಗಳೂರಿನಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸುವುದಿಲ್ಲ’ ಎಂದೂ ಅವರು ಈ ಹಿಂದೆ ಹೇಳಿದ್ದರು. ರಾಜ್ಯ ನಾಯಕರ ಮಧ್ಯಪ್ರವೇಶದಿಂದ ಅವರ ಕೋಪ ತಣ್ಣಗಾಗಿದ್ದು, ಮೋಹನ್‌ ಪರ ಪ್ರಚಾರದಲ್ಲಿ ತೊಡಗಿದ್ದಾರೆ.

ರಾಜಧಾನಿಯ ಹೃದಯಭಾಗದ ಜೊತೆಗೆ ಹೊರವಲಯದ ಕೆಲವು ಪ್ರದೇಶಗಳೂಈ ಕ್ಷೇತ್ರಕ್ಕೆ ಸೇರಿವೆ. ಶಕ್ತಿ ಕೇಂದ್ರ ವಿಧಾನಸೌಧ, ವಿಕಾಸಸೌಧ ಅಷ್ಟೇ ಅಲ್ಲದೆ ಶಾಸಕರ ಭವನ, ಹೈಕೋರ್ಟ್, ಕೇಂದ್ರ ಬಸ್‌ ನಿಲ್ದಾಣ, ರೈಲು ನಿಲ್ದಾಣ ಸೇರಿದಂತೆ ಪ್ರಮುಖ ಪ್ರದೇಶಗಳು ಇದರ ವ್ಯಾಪ್ತಿಯಲ್ಲಿ ಸೇರಿವೆ.

ನಗರದಲ್ಲಿ ಅತಿ ಹೆಚ್ಚು ತೆರಿಗೆ ಆದಾಯ ತರುವ ಪ್ರದೇಶಗಳನ್ನು ಹೊಂದಿರುವ ಹಿರಿಮೆಗೆ ಪಾತ್ರವಾಗಿರುವ ಕ್ಷೇತ್ರವಿದು. ಆದರೆ, ಹೊರವಲಯದ ಕೆಲವು ಪ್ರದೇಶಗಳು ಈಗಲೂ ಮೂಲಸೌಕರ್ಯ ಕೊರತೆ ಎದುರಿಸುತ್ತಿವೆ. ಬೆಳ್ಳಂದೂರು ಕೆರೆಯಲ್ಲಿ ಕಾಣಿಸಿಕೊಂಡ ಬೆಂಕಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಬೆಳ್ಳಂದೂರು ಹಾಗೂ ವರ್ತೂರು ಕೆರೆಯಲ್ಲಿ ಪದೇ ಪದೇ ನೊರೆ ಕಾಣಿಸಿಕೊಳ್ಳುತ್ತಿದೆ. ಈ ಸಮಸ್ಯೆ ಪರಿಹಾರಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗಂಭೀರ ಕ್ರಮ ಕೈಗೊಂಡಿಲ್ಲ ಎಂಬ ಅಸಮಾಧಾನ ಜನರಲ್ಲಿ ಮಡುಗಟ್ಟಿದೆ. ಸಂಚಾರ ದಟ್ಟಣೆ ಸಮಸ್ಯೆ ಈ ಕ್ಷೇತ್ರದ ಜನರನ್ನು ಹೈರಾಣಾಗಿಸಿದೆ.

2014ರ ಚುನಾವಣೆಯಲ್ಲಿ ಸೋತ ನಂತರವೂ ಕ್ಷೇತ್ರದ ಜನರ ಜತೆಗೆ ಒಡನಾಟ ಇಟ್ಟುಕೊಂಡು ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ. ಕ್ಷೇತ್ರದ ಜನರಿಗೆ ಸಂಸದ ಪಿ.ಸಿ.ಮೋಹನ್‌ ಅವರಿಗಿಂತ ನಾನೇ ಹೆಚ್ಚು ಪರಿಚಿತ.
ರಿಜ್ವಾನ್‌ ಅರ್ಷದ್‌, ಕಾಂಗ್ರೆಸ್‌ ಅಭ್ಯರ್ಥಿ

ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆ ಹಾಗೂ 10 ವರ್ಷಗಳ ನನ್ನ ಸಾಧನೆ ಗೆಲುವಿಗೆ ಶ್ರೀರಕ್ಷೆಯಾಗಲಿದೆ. ಅಭಿವೃದ್ಧಿ ವಿಚಾರದಲ್ಲಿ ತಾರತಮ್ಯ ಮಾಡಿಲ್ಲ.
ಪಿ.ಸಿ.ಮೋಹನ್‌, ಬಿಜೆಪಿ ಅಭ್ಯರ್ಥಿ

ಜನರಿಗೆ ಜಿಡಿಪಿ–ಪಿಡಿಪಿ ಏನೂ ಗೊತ್ತಾಗುವುದಿಲ್ಲ. ಇವತ್ತು ನೀರು ಬರುತ್ತದೆ ಇಲ್ಲವೇ ಎಂಬುದಷ್ಟೇ ಅವರಿಗೆ ಮುಖ್ಯ. ಸ್ವಾತಂತ್ರ್ಯ ಸಿಕ್ಕಿ 70 ವರ್ಷಗಳ ಬಳಿಕವೂ ಬೆಂಗಳೂರಿನಂತಹ ಮಹಾನಗರದಲ್ಲಿ ಬಾಟಲಿಯಲ್ಲಿ ಕುಡಿಯುವ ನೀರು ಹಿಡಿದಿಡುತ್ತಾರೆ ಎಂದರೆ ಇದುವರೆಗೆ ಅಧಿಕಾರಕ್ಕೆ ಬಂದ ರಾಷ್ಟ್ರೀಯ ಪಕ್ಷಗಳು ಏನು ಮಾಡಿವೆ.
ಪ್ರಕಾಶ್‌ರಾಜ್‌, ಪಕ್ಷೇತರ ಅಭ್ಯರ್ಥಿ

ಈ ಚುನಾವಣೆಯಲ್ಲಿ ಸ್ಥಳೀಯ ಸಮಸ್ಯೆಗಳಿಗಿಂತ ದೇಶದ ಭದ್ರತೆ, ರಾಷ್ಟ್ರೀಯತೆ,ಭ್ರಷ್ಟಾಚಾರರಹಿತ ಆಡಳಿತ ವಿಚಾರಗಳೇ ಪ್ರಮುಖವಾಗಿವೆ.
ಮಂಜುನಾಥ ಭಟ್‌, ಖಾಸಗಿ ಕಂಪನಿ ಉದ್ಯೋಗಿ

ಇತ್ತೀಚಿನ ವರ್ಷದಲ್ಲಿ ದೇಶದಲ್ಲಿ ಉದ್ಯೋಗ ಸೃಷ್ಟಿ ಪ್ರಮಾಣ ಕಡಿಮೆ ಆಗಿದೆ. ಯುವಜನರು ಉದ್ಯೋಗ ಇಲ್ಲದೆ ಸಮಸ್ಯೆಗೆ ಸಿಲುಕಿದ್ದಾರೆ. ಈ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಜನರು ಮತ ಚಲಾಯಿಸಬೇಕು.
ರೇಖಾ ರಾವ್‌, ಖಾಸಗಿ ಕಂಪನಿ ಉದ್ಯೋಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.