ಬೆಂಗಳೂರು: ‘ಮಹಾಭಾರತ ಯುದ್ಧದ ವೇಳೆ ಕುರುಕ್ಷೇತ್ರದಲ್ಲಿ ಶ್ರೀಕೃಷ್ಣನಿಂದ ಉವಾಚವಾದ ಭಗವದ್ಗೀತೆಯ ಸಾರವನ್ನು ದುಃಖ ಮತ್ತು ವ್ಯರ್ಥ ಎಂಬ ಎರಡೇ ಪದಗಳಲ್ಲಿ ಹೇಳಿದ ಮಹಾಜ್ಞಾನಿ ಡಿವಿಜಿ’ ಎಂದು ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಬಣ್ಣಿಸಿದರು.
ಸೌಂದರ್ಯ ಕಾನೂನು ಕಾಲೇಜು ಮತ್ತು ವಕೀಲರ ವಾಹಿನಿ ಜಂಟಿಯಾಗಿ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 69ನೇ ಕರ್ನಾಟಕ ರಾಜ್ಯೋತ್ಸವ ಮತ್ತು ಡಿವಿಜಿ (ಡಿ.ವಿ.ಗುಂಡಪ್ಪ) ಉಪನ್ಯಾಸ ಮಾಲಿಕೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
‘ಮಂಕುತಿಮ್ಮನ ಕಗ್ಗ’, ‘ಮರುಳ ಮುನಿಯನ ಕಗ್ಗ’ಗಳ ಅತ್ಯಂತ ಜಟಿಲ ವಿಷಯಗಳನ್ನೂ ಸರಳವಾಗಿ ಜನರಿಗೆ ಅರ್ಥ ಮಾಡಿಸಿದರು. ನಮ್ಮ ನಾಡು, ನುಡಿ ಹಾಗೂ ಜಲಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ಕಾರಣಕ್ಕೇ ಬರೋಡಾದ ದಿವಾನ ಹುದ್ದೆಯನ್ನೂ ತಿರಸ್ಕರಿಸಿದ್ದರು. ಬಡತನವನ್ನೂ ಆಸ್ವಾದಿಸಿ, ಆನಂದಿಸಿದ್ದರು’ ಎಂದು ಹೇಳಿದರು.
ವಕೀಲ ಡಿ.ಎಂ. ಹೆಗಡೆ, ‘ನಾವು ನಮ್ಮ ಮಾತೃಭಾಷೆಯನ್ನು ಎಷ್ಟು ಪ್ರೀತಿಸಬೇಕಿತ್ತೋ, ಅಷ್ಟು ಪ್ರೀತಿಸುತ್ತಿಲ್ಲ. ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳುವಲ್ಲಿ ವಿಫಲರಾಗುತ್ತಾ, ವಿದೇಶಿ ಸಂಸ್ಕೃತಿಗೆ ಮಾರುಹೋಗುತ್ತಿದ್ದೇವೆ. ಡಿವಿಜಿ ಅವರು ನಮ್ಮ ನಾಡು, ನುಡಿ ಹಾಗೂ ಸಂಸ್ಕೃತಿಗಾಗಿ ಜೀವ ತೇಯ್ದರು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.