‘ನಮ್ಮಲ್ಲಿ ಅಗತ್ಯಕ್ಕಿಂತ ಹೆಚ್ಚು ಹಣವಿದ್ದರೆ, ಬಡವರು ಹಾಗೂ ದಮನಿತರಿಗೆ ಕೈಲಾದಷ್ಟು ನೆರವಾಗಬೇಕು. ಇಲ್ಲದಿದ್ದರೇ ಸಮಾಜದಲ್ಲಿ ನಾವೂ ಬದುಕಿದ್ದು ಸತ್ತಂತೆ’ ಎನ್ನುವುದು ವಿಶ್ರಾಂತ ನ್ಯಾಯಮೂರ್ತಿ ಶಿವರಾಜ್ ವಿ. ಪಾಟೀಲ್ ಅವರ ನಿಲುವು.
‘ನ್ಯಾಯಮೂರ್ತಿ ಶಿವರಾಜ ವಿ.ಪಾಟೀಲ್ ಪ್ರತಿಷ್ಠಾನ ಟ್ರಸ್ಟ್’ ನಗರದಲ್ಲಿ ಹಮ್ಮಿಕೊಂಡಿದ್ದ ಸಂಸ್ಥೆಯ ಚಟುವಟಿಕೆಗಳ ಕುರಿತ ಕಾರ್ಯಕ್ರಮದಲ್ಲಿ ಅವರು ಈ ಬಗ್ಗೆ ಮಾತನಾಡಿ ತಮ್ಮ ಬದ್ಧತೆಯನ್ನು ಮೆರೆದರು.
ಜೀವನದಲ್ಲಿ ಇತರರಿಗೆ ನೆರವಾಗುವ ಧನ್ಯತಾ ಭಾವವನ್ನು ವಿವರಿಸಲು ಸಾಧ್ಯವಿಲ್ಲ. ಅನುಭವಿಸಿಯೇ ತಿಳಿಯಬೇಕು. ಶ್ರೀಮಂತನಾಗಬೇಕಾದರೆ ಹಣ ಮಾಡಬೇಕಿಲ್ಲ. ಜನರ ಪ್ರೀತಿ ಮತ್ತು ವಿಶ್ವಾಸಗಳಿಸಿದರೆ ಅದೇ ಜೀವನದ ದೊಡ್ಡ ಆಸ್ತಿ. ಆಡುವ ಮಾತಿನಲ್ಲಿ ಬದ್ಧತೆ ಹಾಗೂ ಸತ್ಯಾಂಶವಿರಬೇಕು ಎನ್ನುವುದು ಅವರ ಸ್ಪಷ್ಟ ಅಭಿಪ್ರಾಯ.
ಈ ದೇಶದಲ್ಲಿ ಭಾಷಣ, ಘೋಷಣೆಗಳ ಕೊರತೆ ಇಲ್ಲ. ಅದರ ಅನುಷ್ಠಾನದ ಕೊರತೆ ಇದೆ. ಕಾಯಕ ದಾಸೋಹ, ಶರಣರ ವಚನ, ಸ್ವಾಮಿ ವಿವೇಕಾನಂದರಿಂದ ಪ್ರಭಾವಿತನಾದವನು ಎನ್ನುತ್ತಾರವರು. ಮುಂದಿನ ದಿನಗಳಲ್ಲಿ ಸಂಸ್ಥೆಯಿಂದ ಪ್ರತಿ ಜಿಲ್ಲೆ ಹಾಗೂ ಹತ್ತಿರದ ಹೋಬಳಿಯಲ್ಲಿ ಉಚಿತ ವೈದ್ಯಕೀಯ ಶಿಬಿರ ಹಮ್ಮಿಕೊಳ್ಳುವ ಯೋಜನೆಯನ್ನೂ ಕೈಗೆತ್ತಿಕೊಳ್ಳಲಿದ್ದಾರೆ.
ಇದೇ ಸಂದರ್ಭದಲ್ಲಿ ನಾಲ್ಕು ಕೃತಿಗಳು ಬಿಡುಗಡೆ ಮಾಡಲಾಯಿತು. ಸಂಸ್ಥೆಯ ಅಧ್ಯಕ್ಷ ಶೇಖರ್ ಗೌಡ ಪಾಟೀಲ್, ಎಸ್.ಜಿ.ಪಲ್ಲೆದ್, ಅಡ್ವೊಕೇಟ್ ಜನರಲ್ ಉದಯ ಹೊಳ್ಳ, ನ್ಯಾಯವಾದಿ ಬಸವರಾಜ್ ಹುಡೇದ್, ವಿಶ್ರಾಂತ ನ್ಯಾಯಮೂರ್ತಿಗಳಾದ ಸುಭಾಷ್ ಅಡಿ, ಬಿ.ಎಸ್.ಪಾಟೀಲ್, ಐಎಎಸ್ ಯಶ್ವಂತ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.