ಬೆಂಗಳೂರು: ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಗುರುವಾರ ಬೆಳಿಗ್ಗೆ ಹೂವು ಮತ್ತು ಹಣ್ಣಿನ ಖರೀದಿಗಾಗಿ ಕೆ.ಆರ್. ಮಾರುಕಟ್ಟೆಗೆ ಜನಸಾಗರವೇ ಹರಿದು ಬಂದಿತ್ತು.
ಕೆ.ಆರ್.ಮಾರುಕಟ್ಟೆಗೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳಲ್ಲಿ ವಾಹನ ದಟ್ಟಣೆಯಾಗಿತ್ತು. ಮಾರುಕಟ್ಟೆಯಲ್ಲಿ ಎತ್ತ ನೋಡಿದರತ್ತ ಜನವೂ ಜನ. ಹಬ್ಬಕ್ಕೆ ಬೇಕಾದ ಪೂಜಾ ಸಾಮಾಗ್ರಿಗಳು ಸೇರಿ ಅಗತ್ಯ ವಸ್ತುಗಳ ಖರೀದಿಗೆ ಬೆಳಿಗ್ಗೆ 3 ಗಂಟೆಯಿಂದಲೇ ಖರೀದಿ ಪ್ರಾರಂಭಿಸಿದ್ದರು. ಗ್ರಾಹಕರಿಂದ ಕಿಕ್ಕಿರಿದು ತುಂಬಿದ್ದ ಮಾರುಕಟ್ಟೆಯಲ್ಲಿ ಚಳಿಯನ್ನು ಲೆಕ್ಕಿಸದೆ ವ್ಯಾಪಾರಿಗಳು ಮಾರಾಟ ಮಾಡುತ್ತಿದ್ದರು. ಮಾರುಕಟ್ಟೆ ಪ್ರದೇಶದ ರಸ್ತೆ ಇಕ್ಕೆಲಗಳಲ್ಲಿ ನಡೆದಾಡಲು ಕಷ್ಟವಾಗುವಷ್ಟು ಗ್ರಾಹಕರು ಜಮಾಯಿಸಿದ್ದರು. ಇದರಿಂದ, ಸಂಚಾರ ದಟ್ಟಣೆಯುಂಟಾಗಿ ವಾಹನ ಸವಾರರು ಪರದಾಡಬೇಕಾಯಿತು.
ಲಕ್ಷ್ಮಿ ಪೂಜೆಗೆ ಬಾಳೆ, ಸೀಬೆ, ಸೇಬು, ಸೀತಾಫಲ, ಅನಾನಸ್, ದ್ರಾಕ್ಷಿ ಹಣ್ಣುಗಳನ್ನು ಖರೀದಿಸುತ್ತಿದ್ದರು. ಬಾಳೆಕಂಬ ಮಾವಿನ ತೋರಣ, ಗಾಜಿನ ಬಳೆ ಸೇರಿದಂತೆ ವಿವಿಧ ಸಾಮಗ್ರಿಗಳ ವ್ಯಾಪಾರ ಜೋರಾಗಿತ್ತು. ಲಕ್ಷ್ಮಿ ಮೂರ್ತಿಗಳ ಅಲಂಕಾರಕ್ಕಾಗಿ ಬಣ್ಣದ ಕಾಗದಗಳು, ಬಲೂನು, ಕೃತಕ ಹಾರ, ಹೂವುಗಳಿಗೆ ಹೆಚ್ಚಿನ ಬೇಡಿಕೆ ಇತ್ತು.
ಮಾರುಕಟ್ಟೆಯಲ್ಲಿ ಹಲವರು ಮೊಬೈಲ್ ಮತ್ತು ಪರ್ಸ್‌ಗಳನ್ನು ಕಳೆದುಕೊಂಡು ಪರದಾಡಿದರು.
ನಗರದ ಪ್ರಮುಖ ಬಡಾವಣೆಗಳಲ್ಲಿಯೂ ಹಬ್ಬದ ಪ್ರಯುಕ್ತ ಮಳಿಗೆಗಳನ್ನು ತೆರೆಯಲಾಗಿದ್ದು, ಗ್ರಾಹಕರು ಹಬ್ಬಕ್ಕೆ ಬೇಕಾದ ಹೂವು, ಹಣ್ಣು, ತರಕಾರಿ ಹಾಗೂ ಪೂಜಾ ಸಾಮಗ್ರಿಗಳನ್ನು ಖರೀದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.