ADVERTISEMENT

ಕಾರಂತ ಬಡಾವಣೆ: ‘ಸುಪ್ರೀಂ’ಗೆ ಮರು ಪರಿಶೀಲನೆ ಅರ್ಜಿ

ಕಾರಂತ ಬಡಾವಣೆ: 650 ಎಕರೆ ಭೂಸ್ವಾಧೀನ ಪ್ರಕ್ರಿಯೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2018, 19:36 IST
Last Updated 25 ಅಕ್ಟೋಬರ್ 2018, 19:36 IST

ನವದೆಹಲಿ: ಬೆಂಗಳೂರಿನ ಡಾ. ಕೆ.ಶಿವರಾಮ ಕಾರಂತ ಬಡಾವಣೆಯ ಭೂಸ್ವಾಧೀನ ಪ್ರಕ್ರಿಯೆಯಿಂದ 650 ಎಕರೆ ಭೂಮಿಯನ್ನು ಕೈಬಿಡದಂತೆ ಸೂಚಿಸಿ ನೀಡಲಾದ ಆದೇಶದ ಮರು ಪರಿಶೀಲನೆ ಕೋರಿ ಸುಪ್ರೀಂ ಕೋರ್ಟ್‌ಗೆ ಗುರುವಾರ ಮೇಲ್ಮನವಿ ಸಲ್ಲಿಸಲಾಗಿದೆ.

ಈಗಾಗಲೇ ಈ ಜಮೀನಿನಲ್ಲಿ ಖಾಸಗಿ ಬಡಾವಣೆ ನಿರ್ಮಾಣಕ್ಕೆ ಹಾಗೂ ಅಭಿವೃದ್ಧಿಗೆ ಭಾರಿ ಪ್ರಮಾಣದ ಹಣವನ್ನು ಹೂಡಿರುವುದಾಗಿ ವಕೀಲ ಸಂಜಯ್‌ ನುಲಿ ಮೂಲಕ ಸಲ್ಲಿಸಿರುವ ಮರು ಪರಿಶೀಲನಾ ಅರ್ಜಿಯಲ್ಲಿ ಅರ್ಜಿದಾರರು ತಿಳಿಸಿದ್ದಾರೆ.

ಕಾರಂತ ಬಡಾವಣೆ ನಿರ್ಮಾಣದ ಉದ್ದೇಶದಿಂದ ಸರ್ಕಾರವು 17 ಗ್ರಾಮಗಳ ಒಟ್ಟು 3,546 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು 2008ರಲ್ಲಿ ಅಧಿಸೂಚನೆ ಹೊರಡಿಸಿತ್ತು. ನಂತರ ವಿವಿಧ ಹಂತಗಳಲ್ಲಿ 650 ಎಕರೆ ಭೂಮಿಯನ್ನು ಅಧಿಸೂಚನೆಯಿಂದ ಕೈಬಿಡಲು ನಿರ್ಧರಿಸಿತ್ತು.

ADVERTISEMENT

‘ಬಡಾವಣೆ ನಿರ್ಮಾಣಕ್ಕಾಗಿ ಭೂಮಿ ಸ್ವಾಧೀನ ಪಡಿಸಿಕೊಳ್ಳುವ ನಿಟ್ಟಿನಲ್ಲಿ 2008ರ ಡಿಸೆಂಬರ್‌ 30ರಂದು ಹೊರಡಿಸಲಾದ ಪ್ರಾಥಮಿಕ
ಅಧಿಸೂಚನೆಯು ಇದುವರೆಗೂ ಕಾರ್ಯಗತಗೊಂಡಿಲ್ಲ. ಖಾಸಗಿ ಬಡಾವಣೆಗಳಿಗಾಗಿ ಬಿಡಿಎ ಈಗಾಗಲೇ ನಮ್ಮಿಂದ ಅಭಿವೃದ್ಧಿ ಶುಲ್ಕವನ್ನೂ ಸಂಗ್ರಹಿಸಿದ್ದು, ಬಡಾವಣೆ ರೂಪುರೇಷೆಗೂ ಅನುಮೋದನೆ ನೀಡಿದೆ’ ಎಂದೂ ಭೂ ಮಾಲೀಕರು, ಬಿಲ್ಡರ್‌ಗಳನ್ನು ಒಳಗೊಂಡಿರುವ ಅರ್ಜಿದಾರರು ತಿಳಿಸಿದ್ದಾರೆ.

ಪ್ರಕರಣದ ಕುರಿತು ಕಳೆದ ಆಗಸ್ಟ್‌ 3ರಂದು ಆದೇಶ ನೀಡಿದ್ದ ಸುಪ್ರೀಂ ಕೋರ್ಟ್‌, ಮೂರು ತಿಂಗಳೊಳಗೆ ಭೂಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ಬಿಡಿಎ ಮತ್ತು ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತಲ್ಲದೆ, ಬಡಾವಣೆಗಾಗಿನ ಭೂಸ್ವಾಧೀನ ಕುರಿತ ಅಕ್ರಮಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಕೆ.ಎನ್‌. ಕೇಶವನಾರಾಯಣ ಅವರನ್ನು ನೇಮಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.