ಬೆಂಗಳೂರು: ಬಸವನಗುಡಿ ದೊಡ್ಡ ಗಣಪತಿ ದೇವಸ್ಥಾನದ ಆವರಣದಲ್ಲಿ ಈ ಬಾರಿ ಕಡಲೆಕಾಯಿ ಪರಿಷೆ ಕಳೆಗಟ್ಟಲಿದ್ದು, ಪರಿಷೆಗೆ ಬಿಬಿಎಂಪಿ ಮತ್ತು ಮುಜರಾಯಿ ಇಲಾಖೆ ಸಮ್ಮತಿ ಸೂಚಿಸಿವೆ.
ಕಾರ್ತಿಕ ಮಾಸದ ಕೊನೆಯ ಸೋಮವಾರದಿಂದ(ನ.29) ಮೂರು ದಿನಗಳ ಕಾಲ ಈ ಪರಿಷೆ ನಡೆಸಲು ಆಡಳಿತ ಮಂಡಳಿ ತಯಾರಿ ನಡೆಸುತ್ತಿದೆ.
ಆರೋಗ್ಯ ಇಲಾಖೆ, ಪೊಲೀಸ್, ಬೆಸ್ಕಾಂ ಸೇರಿ ಹಲವು ಇಲಾಖೆಗಳ ಸಹಕಾರ ಪಡೆಯಬೇಕಾಗಿದೆ. ಇನ್ನು ಎರಡು– ಮೂರು ದಿನಗಳಲ್ಲಿ ಎಲ್ಲಾ ಇಲಾಖೆಗಳ ಜತೆ ಚರ್ಚೆ ನಡೆಸಿ ಅಂತಿಮ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ಶಾಸಕ ಎಲ್.ಎ.ರವಿ ಸುಬ್ರಹ್ಮಣ್ಯ ‘ಪ್ರಜಾವಾಣಿ’ಗೆ ತಿಳಿಸಿದರು.
ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆ ಆಗಿರುವುದರಿಂದ ಬಿಬಿಎಂಪಿ ಅನುಮತಿ ನೀಡಿದೆ. ಉಳಿದೆಲ್ಲಾ ಸಿದ್ಧತೆ ಬಗ್ಗೆ ಪ್ರಾಥಮಿಕವಾಗಿ ಒಂದು ಸುತ್ತಿನ ಸಭೆ ನಡೆಸಲಾಗಿದೆ ಎಂದು ವಿವರಿಸಿದರು.
ಮೂರು ಶಿಫ್ಟ್‌ನಲ್ಲಿ ಕಾರ್ಯನಿರ್ವಹಿಸಲು ಪೊಲೀಸ್ ಮತ್ತು ಹೋಮ್‌ಗಾರ್ಡ್ ಸಿಬ್ಬಂದಿ ಅಗತ್ಯವಿದೆ. ಆಂಬುಲೆನ್ಸ್, ಅಗ್ನಿಶಾಮಕ ದಳ, ವಿದ್ಯುತ್ ದೀಪಗಳ ಅಲಂಕಾರ ಆಗಬೇಕಿದೆ, ಸಂಬಂಧಪಟ್ಟ ಇಲಾಖೆಗಳ ಜತೆ ಮಾತುಕತೆ ಈಗ ನಡೆಯುತ್ತಿದೆ ಎಂದೂ ತಿಳಿಸಿದರು.
‘ಕೋವಿಡ್ ಕಾರಣದಿಂದ ಎಲ್ಲಾ ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ಚಟುವಟಿಕೆಗಳನ್ನು ನಿಲ್ಲಿಸಿದ್ದೆವು. ಸದ್ಯದ ಪರಿಸ್ಥಿತಿಯಲ್ಲಿ ಕೋವಿಡ್ ಪ್ರಕರಣ ಕಡಿಮೆ ಆಗಿರುವುದರಿಂದ ಈ ರೀತಿಯ ಆಚರಣೆಗಳಿಗೆ ಪ್ರತಿಬಂಧ ವಿಧಿಸುವುದಿಲ್ಲ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗಪ್ತ ಸ್ಪಷ್ಟಪಡಿಸಿದರು.
‘ಕೋವಿಡ್ ನಿಯಮಾವಳಿಗೆ ಒಳಪಟ್ಟು ಆಚರಣೆ ಮಾಡಬಹುದಾಗಿದೆ. ಆಚರಣೆ ಹೇಗಿರಬೇಕು ಎಂಬುದರ ಕುರಿತು ಆ ವಲಯದ ಜಂಟಿ ಆಯುಕ್ತರು ಸಂಘಟಕರ ಜತೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ’ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.