ADVERTISEMENT

ಕಡಲೆಕಾಯಿ ಪರಿಷೆ: ಕಳೆಗಟ್ಟಿದ ಬಸವನಗುಡಿ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2024, 23:18 IST
Last Updated 23 ನವೆಂಬರ್ 2024, 23:18 IST
<div class="paragraphs"><p>ಬಸವನಗುಡಿಯ ಕಡಲೆಕಾಯಿ ಪರಿಷೆ ಸೋಮವಾರ ಆರಂಭವಾಗಲಿದ್ದು, ನಾಗರಿಕರು ಶನಿವಾರ ಸಂಜೆಯಿಂದಲೇ ಕಡಲೆಕಾಯಿ ಖರೀದಿಸುತ್ತಿದ್ದುದು ಕಂಡುಬಂತು&nbsp;</p></div>

ಬಸವನಗುಡಿಯ ಕಡಲೆಕಾಯಿ ಪರಿಷೆ ಸೋಮವಾರ ಆರಂಭವಾಗಲಿದ್ದು, ನಾಗರಿಕರು ಶನಿವಾರ ಸಂಜೆಯಿಂದಲೇ ಕಡಲೆಕಾಯಿ ಖರೀದಿಸುತ್ತಿದ್ದುದು ಕಂಡುಬಂತು 

   

–ಪ್ರಜಾವಾಣಿ ಚಿತ್ರ

ಬೆಂಗಳೂರು: ನಗರದ ಐತಿಹಾಸಿಕ ಕಡಲೆಕಾಯಿ ಪರಿಷೆಯ ಸೊಬಗು ಕಳೆಗಟ್ಟಿದೆ. ಪರಿಷೆಗೆ ಅಧಿಕೃತವಾಗಿ ಚಾಲನೆ ಸಿಗುವ ಎರಡು ದಿನದ ಮೊದಲೇ ಬಸವನಗುಡಿಯಲ್ಲಿ ಜಾತ್ರೆ ವಾತಾವರಣ ಸೃಷ್ಟಿಯಾಗಿದೆ.

ADVERTISEMENT

ಕಾರ್ತೀಕ ಮಾಸದ ಕೊನೆ ಸೋಮವಾರ ದೊಡ್ಡ ಬಸವಣ್ಣ
ದೇವಸ್ಥಾನದಲ್ಲಿ ಬಸವನಿಗೆ ಕಡಲೆಕಾಯಿ ಹಾಗೂ ಪುಷ್ಪಗಳಿಂದ ಅಲಂಕಾರ ಮಾಡಲಾಗುತ್ತದೆ. ನವೆಂಬರ್ 25ರಂದು ಬೆಳಿಗ್ಗೆ ಕಡಲೆಕಾಯಿ ಪರಿಷೆಗೆ ಅಧಿಕೃತವಾಗಿ ಚಾಲನೆ ಸಿಗಲಿದೆ.

ಬಸವನಗುಡಿ ರಸ್ತೆಯಲ್ಲಿ ನವೆಂಬರ್‌ 21ರಿಂದಲೇ ಕಡಲೆಕಾಯಿ ರಾಶಿ ಕಂಡು ಬಂತು. ಶುಕ್ರವಾರ ಅದರ ಪ್ರಮಾಣ ಹೆಚ್ಚಾಯಿತು. ಸರ್ಕಾರಿ ರಜೆಯಾಗಿದ್ದ ನಾಲ್ಕನೇ ಶನಿವಾರ ಮಧ್ಯಾಹ್ನದಿಂದಲೇ ಜನರೂ ಹೆಚ್ಚಾದರು. ಬಸವನಗುಡಿ ರಸ್ತೆಯಲ್ಲಿ ವಾಹನ ಸಂಚಾರದಟ್ಟಣೆ ಹೆಚ್ಚಾಯಿತು. ಸೋಮವಾರ ಮತ್ತು ಮಂಗಳವಾರ ಸಂಚಾರಕ್ಕೆ ಪರ್ಯಾಯ ಮಾರ್ಗ ಕಲ್ಪಿಸಿಕೊಡಬೇಕಾಗಿದ್ದ ಸಂಚಾರ ಪೊಲೀಸರು ಶನಿವಾರ
ಮಧ್ಯಾಹ್ನದಿಂದಲೇ ಮಾರ್ಗ ಬದಲಾವಣೆಗೆ ಅಣಿಯಾಗಿದ್ದರು.

ಕನಕಪುರ, ದೊಡ್ಡಬಳ್ಳಾಪುರ, ರಾಮನಗರ, ಮಾಗಡಿ, ಚಿಕ್ಕಬಳ್ಳಾಪುರ,
ಕೋಲಾರ ಸೇರಿದಂತೆ ಮೈಸೂರು, ಮಂಡ್ಯ, ತುಮಕೂರು ಕಡೆಗಳಿಂದ ಕಡಲೆಕಾಯಿಯನ್ನು ವ್ಯಾಪಾರಿಗಳು ಇಲ್ಲಿಗೆ ತಂದಿದ್ದಾರೆ.

ಸುಂಕೇನಹಳ್ಳಿಯಲ್ಲಿ ನಡೆಯುವ ಕಡಲೆಕಾಯಿ ಪರಿಷೆಯಲ್ಲಿ ಬಸವನಗುಡಿ ರಸ್ತೆಯ ಇಕ್ಕೆಲಗಳಲ್ಲಿ ವ್ಯಾಪಾರ ನಡೆಸಲು ಈ ಬಾರಿ ಯಾವುದೇ ಟೆಂಡರ್‌ ಅಥವಾ ಶುಲ್ಕ ಇಲ್ಲ. ಹೀಗಾಗಿ ವ್ಯಾಪಾರಿಗಳು ತಮ್ಮ ತಾಣಗಳನ್ನು ಗುರುವಾರದಿಂದಲೇ ಗುರುತಿಸಿಕೊಂಡು ಕುಳಿತಿದ್ದಾರೆ.

ಬಸನಗುಡಿ ರಸ್ತೆ ಕಡಲೆಕಾಯಿ ವ್ಯಾಪಾರಕ್ಕೆ ಸೀಮಿತವಾಗಿಲ್ಲ. ಮಕ್ಕಳ ಆಟಿಕೆಗಳು, ಆಲಂಕಾರಿಕ ವಸ್ತುಗಳು, ಹಲವು ರೀತಿಯ ತಿನಿಸುಗಳ ಮಾರಾಟವೂ ಹೆಚ್ಚಾಗಿದೆ.

ಪ್ಲಾಸ್ಟಿಕ್‌ ನಿಷೇಧ: ಕಡಲೆಕಾಯಿ ಪರಿಷೆಯಲ್ಲಿ ‘ಪರಿಷೆಗೆ ಬನ್ನಿ ಕೈಚೀಲ ತನ್ನಿ’
ಎಂಬ ಘೋಷಣೆ ಅಲ್ಲಲ್ಲಿ ಕಾಣುತ್ತಿದೆ. ಪ್ಲಾಸ್ಟಿಕ್‌ ಚೀಲಗಳ ಬದಲಿಗೆ ಬಟ್ಟೆ ಬ್ಯಾಗ್‌ಗಳನ್ನು ಬಳಸುವಂತೆ ಹೇಳಲಾಗುತ್ತಿದೆ. 

ಉದ್ಘಾಟನೆ: ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ನವೆಂಬರ್‌ 25ರಂದು ಬೆಳಿಗ್ಗೆ 10 ಗಂಟೆಗೆ ಕಡಲೆಕಾಯಿ ಪರಿಷೆಯನ್ನು ಉದ್ಘಾಟಿಸಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿದ್ದಾರೆ. ಬ್ಯೂಗಲ್‌ ರಾಕ್‌ ಉದ್ಯಾನ ಹಾಗೂ ನರಸಿಂಹಸ್ವಾಮಿ ಉದ್ಯಾನದಲ್ಲಿ ನ.25 ಮತ್ತು26ರಂದು ಸಂಜೆ 6ರಿಂದ ರಾತ್ರಿ 9.30ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕೆಂಪಾಂಬುಧಿ ಕೆರೆಯಲ್ಲಿ ನ.25ರಂದು ಸಂಜೆ 6 ಗಂಟೆಗೆ ತೆಪ್ಪೋತ್ಸವ ನಡೆಯಲಿದೆ.


ವಾಹನ ಸಂಚಾರ: ಮಾರ್ಗ ಬದಲಾವಣೆ

ಬಸವನಗುಡಿಯಲ್ಲಿ ಕಡಲೆಕಾಯಿ ಪರಿಷೆ ನಡೆಯುವುದರಿಂದ ವಾಹನ ಸಂಚಾರ ವ್ಯವಸ್ಥೆಯಲ್ಲಿ ಹಲವು ಬದಲಾವಣೆ ಮಾಡಲಾಗಿದೆ. ವಾಹನ ಸವಾರರು ಸಾಧ್ಯವಾದಷ್ಟು ಪರ್ಯಾಯ ಮಾರ್ಗಗಳಲ್ಲಿ ಸಂಚರಿಸಬೇಕು
ಎಂದು ಸಂಚಾರ ವಿಭಾಗದ ಪೊಲೀಸರು ತಿಳಿಸಿದ್ದಾರೆ.

ಲಾಲ್‌ಬಾಗ್‌ ವೆಸ್ಟ್‌ ಗೇಟ್‌, ಚಾಮರಾಜಪೇಟೆ, ಬುಲ್‌ ಟೆಂಪಲ್‌
ಮೂಲಕ ಹನುಮಂತನಗರದ ಕಡೆಗೆ ಸಂಚರಿಸುವ ವಾಹನಗಳು ರಾಮಕೃಷ್ಣ ಆಶ್ರಮ ವೃತ್ತದಲ್ಲಿ ಬಲ ತಿರುವು ಪಡೆದು ಸೀತಾರಾಮಯ್ಯ (ಹಯವದನರಾವ್‌) ರಸ್ತೆಯಲ್ಲಿ ಸಾಗಿ, ಗವಿಪುರ 3ನೇ ಅಡ್ಡರಸ್ತೆ, ಮೌಂಟ್‌ ಜಾಯ್‌ ರಸ್ತೆ ಮಾರ್ಗವಾಗಿ ಸಾಗಬೇಕು.

ಆರ್‌.ವಿ. ಟೀಚರ್ಸ್‌ ಕಾಲೇಜು ಜಂಕ್ಷನ್‌, ಟ್ರಿನಿಟಿ ಆಸ್ಪತ್ರೆ ರಸ್ತೆ, ಕೆ.ಆರ್‌. ರಸ್ತೆ, ಬ್ಯೂಗಲ್‌ ರಾಕ್‌ ರಸ್ತೆಯಿಂದ ಹನುಮಂತನಗರ ಕಡೆಗೆ ಹೋಗುವ ವಾಹನಗಳು ಠಾಗೋರ್‌ ಸರ್ಕಲ್‌ನಲ್ಲಿ ಬಲ ತಿರುವು ಪಡೆದು ಗಾಂಧಿ ಬಜಾರ್‌ ಮುಖ್ಯ ರಸ್ತೆ ಮೂಲಕ ರಾಮಕೃಷ್ಣ ಆಶ್ರಮ ಜಂಕ್ಷನ್‌, ಸೀತಾರಾಮಯ್ಯ ರಸ್ತೆ, ಗವಿಪುರ ಬಡಾವಣೆ 3ನೇ ಅಡ್ಡ ರಸ್ತೆ, ಮೌಂಟ್‌ ಜಾಯ್‌ ರಸ್ತೆ ಮಾರ್ಗವಾಗಿ ಸಂಚರಿಸಬೇಕು.

ತ್ಯಾಗರಾಜನಗರ, ಬನಶಂಕರಿ, ಎನ್‌.ಆರ್‌. ಕಾಲೊನಿ, ಬುಲ್‌ ಟೆಂಪಲ್‌ ರಸ್ತೆ ಕಡೆಯಿಂದ ಚಾಮರಾಜಪೇಟೆ ಕಡೆಗೆ ಹೋಗುವ ವಾಹನಗಳು ಕಾಮತ್‌ ಯಾತ್ರಿ ನಿವಾಸ ಜಂಕ್ಷನ್‌ನಲ್ಲಿ ಎಡಕ್ಕೆ ತಿರುಗಿ ಆಶೋಕನಗರ 2ನೇ ಕ್ರಾಸ್‌ (ಬಿಎಂಎಸ್‌ ಕಾಲೇಜು ಹಾಸ್ಟೆಲ್‌ ರಸ್ತೆ) ರಸ್ತೆಯಲ್ಲಿ ಸಾಗಿ ಕತ್ರಿಗುಪ್ಪೆ ರಸ್ತೆ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು 3ನೇ ಮುಖ್ಯರಸ್ತೆ, ನಾರಾಯಣಸ್ವಾಮಿ ಸರ್ಕಲ್‌, ಕೆ.ಜಿ. ನಗರ ಮುಖ್ಯರಸ್ತೆ ಅಥವಾ ಸೀತಾರಾಮಯ್ಯ ರಸ್ತೆ, ರಾಮಕೃಷ್ಣ ಆಶ್ರಮ ಜಂಕ್ಷನ್‌ ಮಾರ್ಗವಾಗಿ ಸಾಗಬೇಕು ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.