ಬೆಂಗಳೂರು: ಕಾಡು ಮಲ್ಲೇಶ್ವರ ಬಳಗದಿಂದ ಡಿ. 2ರಿಂದ 4ರವರೆಗೆ ಮಲ್ಲೇಶ್ವರದ ಕಾಡುಮಲ್ಲೇಶ್ವರ ದೇವಸ್ಥಾನದ ಆವರಣದಲ್ಲಿ 7ನೇ ವರ್ಷದ ಕಡಲೆಕಾಯಿ ಪರಿಷೆ ಆಯೋಜಿಸಲಾಗಿದೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಳಗದ ಅಧ್ಯಕ್ಷ ಬಿ.ಕೆ.ಶಿವರಾಂ, ‘ನಗರದ ಜನರಿಗೆ ಗ್ರಾಮೀಣ ಸಂಸ್ಕೃತಿ, ಜೀವನ ಪದ್ಧತಿಯನ್ನು ಪರಿಚಯಿಸಲು ಕಾರ್ತಿಕ ಮಾಸದಲ್ಲಿ ಮೂರು ದಿನ ಕಡಲೆಕಾಯಿ ಪರಿಷೆ ಹಮ್ಮಿಕೊಳ್ಳಲಾಗುತ್ತಿದೆ’ ಎಂದರು.
‘ಗಂಗಮ್ಮ ದೇವಿ ದೇವಸ್ಥಾನದ ಮುಂಭಾಗದಲ್ಲಿ 20 ಅಡಿ ಅಗಲ, 22 ಅಡಿ ಎತ್ತರದ ನಂದಿ ಪ್ರತಿಕೃತಿಯನ್ನು ಪ್ರತಿಷ್ಠಾಪಿಸಲಾಗುತ್ತಿದ್ದು, 800 ಕೆ.ಜಿ. ಕಡಲೆಕಾಯಿಗಳಿಂದ ಅಲಂಕಾರ ಮಾಡಲಾಗುತ್ತಿದೆ. ಪ್ಲಾಸ್ಟಿಕ್ ಮುಕ್ತ ಪರಿಷೆಯಾಗಬೇಕೆಂಬ ಉದ್ದೇಶದಿಂದ ‘ಮನೆಯಿಂದ ಕೈಚೀಲ ತನ್ನಿ’ ಎಂಬ ಅಭಿಯಾನವನ್ನೂ ಹಮ್ಮಿಕೊಳ್ಳಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.
‘ಈ ಬಾರಿ ಪರಿಷೆಯಿಂದ ಬೆಂಗಳೂರು ನಗರ ಮತ್ತು ಗ್ರಾಮಾಂತರ, ಕೋಲಾರ, ತುಮಕೂರು, ಕನಕಪುರ ಜಿಲ್ಲೆಯ ರೈತರು ಸೇರಿ ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ರೈತರು ಪಾಲ್ಗೊಳ್ಳಲಿದ್ದಾರೆ. ರೈತರು ಬೆಳೆದ ಕಡಲೆಕಾಯಿ ಮತ್ತು ತರಕಾರಿ ಕರಕುಶಲ ವಸ್ತುಗಳ ಮಾರಾಟಕ್ಕಾಗಿ 300 ಮಳಿಗೆಗಳನ್ನು ಉಚಿತವಾಗಿ ತೆರೆಯಲು ಅವಕಾಶ ಕಲ್ಪಿಸಲಾಗಿದೆ’ ಎಂದರು.
ಡಿ. 2ರಂದು ಬೆಳಿಗ್ಗೆ 11ಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಕಡಲೆಕಾಯಿ ಪರಿಷೆಗೆ ಚಾಲನೆ ನೀಡಿಲಿದ್ದಾರೆ. ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್, ಶಾಸಕರಾದ ಮುನಿರತ್ನ, ಡಾ.ಸಿ.ಎನ್. ಅಶ್ವತ್ಥನಾರಾಯಣ ಭಾಗವಹಿಸಲಿದ್ದಾರೆ. ಜಿತ್ಪಾವನ ಮಹಿಳಾ ಯಕ್ಷಗಾನ ಮಂಡಳಿಯಿಂದ ‘ಕೃಷ್ಣಲೀಲೆ’ ‘ಕಂಸ ವಧೆ’ ಯಕ್ಷಗಾನ ಪ್ರದರ್ಶನ ಇರಲಿದೆ. ಡಿ. 3ರಂದು ಸಂಗೀತ ಕಾರ್ಯಕ್ರಮ ನಡೆಯಲಿದೆ. ಡಿ. 4 ರಂದು ಕಾಡುಮಲ್ಲಿಕಾರ್ಜುನ ಸ್ವಾಮಿಗೆ 1 ಸಾವಿರ ಕೆ.ಜಿ. ಕಡಲೆಕಾಯಿಯಿಂದ ಅಭಿಷೇಕ ಮಾಡಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.