ಬೆಂಗಳೂರು: ಅಗ್ನಿ ಅವಘಡದಿಂದ ಹಾನಿಗೊಳಗಾಗಿದ್ದ ಮಲ್ಲತ್ತಹಳ್ಳಿಯ ಕಲಾಗ್ರಾಮದ ಸಾಂಸ್ಕೃತಿಕ ಸಮುಚ್ಚಯ ಎಂಟು ತಿಂಗಳಾದರೂ ಪುನರಾರಂಭವಾಗಿಲ್ಲ.
ಇದರಿಂದಾಗಿ ಕಲಾಗ್ರಾಮದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ಸಂಪೂರ್ಣ ಸ್ತಬ್ಧವಾಗಿವೆ.
ನಗರದಲ್ಲಿನ ಸಾಂಸ್ಕೃತಿಕ ಸಂಘ–ಸಂಸ್ಥೆಗಳಿಗೆ ಸಾಂಸ್ಕೃತಿಕ ಸಮುಚ್ಚಯ ಸುಲಭವಾಗಿ ದೊರೆಯುತ್ತಿತ್ತು. ಇದರಿಂದ ತಿಂಗಳ ಬಹುತೇಕ ದಿನ ಒಂದಲ್ಲ ಒಂದು ಕಲಾ ಚಟುವಟಿಕೆ ನಡೆಯುತ್ತಿದ್ದವು. ಆದರೆ, ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಶಾರ್ಟ್ ಸರ್ಕಿಟ್‌ನಿಂದ ಬೆಂಕಿ ಹೊತ್ತಿಕೊಂಡ ಪರಿಣಾಮ ಧ್ವನಿ–ಬೆಳಕಿನ
ವ್ಯವಸ್ಥೆ ಸಂಪೂರ್ಣ ಸುಟ್ಟು ಕರಕಲಾಗಿತ್ತು. ಮೂರು ತಿಂಗಳಲ್ಲಿ ಸಿದ್ಧಗೊಳಿಸುವುದಾಗಿ ಇಲಾಖೆ ಭರವಸೆ ನೀಡಿತ್ತಾದರೂ ಈವರೆಗೂ ಸಾಕಾರವಾಗಿಲ್ಲ.
ರಾಷ್ಟ್ರೀಯ ನಾಟಕ ಶಾಲೆ (ಎನ್‌ಎಸ್‌ಡಿ) ವಿದ್ಯಾರ್ಥಿಗಳಿಗೆ ಕೂಡಾ ಸಾಂಸ್ಕೃತಿಕ ಸಮುಚ್ಚಯ ನಾಟಕ ಪ್ರದರ್ಶನಕ್ಕೆ ಸಹಾಯವಾಗಿತ್ತು. ಕಲಾಗ್ರಾಮದಲ್ಲಿ ರಂಗ ಪ್ರದರ್ಶನಕ್ಕೆ ಬೇರೆ ಸಭಾಂಗಣ ಇಲ್ಲದ ಪರಿಣಾಮ ಎನ್‌ಎಸ್‌ಡಿ ವಿದ್ಯಾರ್ಥಿಗಳಿಗೆ ಇದೀಗ ಪ್ರತಿಭಾ ಪ್ರದರ್ಶನಕ್ಕೆವೇದಿಕೆ ಇಲ್ಲದಂತಾಗಿದೆ. ಸಾಂಸ್ಕೃತಿಕ ಚಟುವಟಿಕೆಯ ಕೇಂದ್ರವಾಗಬೇಕೆಂಬ ದೂರದೃಷ್ಟಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ವಹಿಸುತ್ತಿರುವ ಕಲಾಗ್ರಾಮ ಇದೀಗ ಕಲಾವಿದರ ಕೆಂಗಣ್ಣಿಗೆ ಗುರಿಯಾಗಿದೆ.
ಸಮುಚ್ಚಯದ ನವೀಕರಣ ಕಾಮಗಾರಿಯನ್ನುಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ವಹಿಸಿಕೊಂಡಿದ್ದು, ನವೆಂಬರ್ ಅಂತ್ಯಕ್ಕೆ ಪ್ರದರ್ಶನಕ್ಕೆ ಸಿದ್ಧವಾಗಲಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ಪ್ರತಿಭಟನೆಗೂ ಎಚ್ಚೆತ್ತುಕೊಂಡಿಲ್ಲ: ಸಾಂಸ್ಕೃತಿಕ ಸಮುಚ್ಚಯವನ್ನು ಪುನರಾರಂಭ ಮಾಡುವಂತೆ ಕಲಾವಿದರು ಹಾಗೂ ರಂಗಕರ್ಮಿಗಳು ರವೀಂದ್ರ ಕಲಾಕ್ಷೇತ್ರದ ಮುಂಭಾಗ ಮೇ ತಿಂಗಳಲ್ಲಿ ಪ್ರತಿಭಟನೆ ಮಾಡಿದ್ದರು. ಹದಿನೈದು ದಿನದಲ್ಲಿ ಧ್ವನಿ–ಬೆಳಕಿನ ವ್ಯವಸ್ಥೆಯನ್ನು ಬಾಡಿಗೆಗೆ ಪಡೆದು ಆರಂಭಿಸುವುದಾಗಿ ಇಲಾಖೆ ಈ ವೇಳೆ ಭರವಸೆ ನೀಡಿತ್ತು. ಆದರೆ, ಇಲಾಖೆ ಈ ಭರವಸೆಯನ್ನು ಕೂಡ ಮರೆತಿರುವುದು ಕಲಾವಿದರ ಅಸಮಾಧಾನಕ್ಕೆ ಕಾರಣವಾಗಿದೆ.
‘ಸರ್ಕಾರದ ಯಾವ ಕಾರ್ಯಕ್ರಮವೂ ಸಮರ್ಪಕವಾಗಿ ನಡೆಯುತ್ತಿಲ್ಲ. ಮಂತ್ರಿಗಳಿಲ್ಲದ ಪರಿಣಾಮ ಅಧಿಕಾರಿಗಳು ಸಹ ಕಾಮಗಾರಿಗಳಿಗೆ ಚುರುಕು ಮುಟ್ಟಿಸುತ್ತಿಲ್ಲ. ಅಧಿಕಾರಿಗಳನ್ನು ಪ್ರಶ್ನಿಸಿದರೆ ಸರ್ಕಾರಿ ಭಾಷೆಯಲ್ಲಿಯೇ ಮಾತನಾಡುತ್ತಾರೆ. ಸಾಂಸ್ಕೃತಿಕ ಸಮುಚ್ಚಯ ಇಷ್ಟು ದಿನವಾದರೂ ಪುನರಾರಂಭವಾಗದಿರುವುದು ಬೇಸರವನ್ನುಂಟು ಮಾಡಿದೆ’ ಎಂದು ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ ತಿಳಿಸಿದರು.
‘ಈ ವಿಚಾರವಾಗಿ ಪ್ರತಿಭಟನೆಯನ್ನೂ ನಡೆಸಿದೆವು. 15 ದಿನದಲ್ಲಿ ಪುನರಾರಂಭ ಮಾಡುವುದಾಗಿ ಇಲಾಖೆ ನಿರ್ದೇಶಕರು ಭರವಸೆ ನೀಡಿದ್ದರು. ಆದಷ್ಟು ಶೀಘ್ರ ಆರಂಭಿಸಬೇಕು ಎಂದು ಮತ್ತೊಮ್ಮೆ ನಿರ್ದೇಶಕರಿಗೆ ಆಗ್ರಹಿಸಲಾಗುವುದು’ ಎಂದು ಕರ್ನಾಟಕ ನಾಟಕ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷ ಜೆ. ಲೋಕೇಶ್ ಹೇಳಿದರು.
ಬೆಂಕಿ ಅವಘಡದಿಂದ ಎಲೆಕ್ಟ್ರಿಕ್ ಪ್ಯಾನಲ್, ಲೈಟಿಂಗ್ ಮಿಕ್ಸರ್, ಸೌಂಡ್ ಮಿಕ್ಸರ್, ಡಿಮ್ಮರ್ ಪ್ಯಾಕ್, ಮೈಕ್ ಸೇರಿದಂತೆ ವಿವಿಧ ಉಪಕರಣಗಳಿಗೆ ಹಾನಿಯಾಗಿತ್ತು.
ಅಂಕಿ–ಅಂಶಗಳು
13 ಎಕರೆ ಮಲ್ಲತ್ತಹಳ್ಳಿಯ ಕಲಾಗ್ರಾಮವಿರುವ ಒಟ್ಟು ಪ್ರದೇಶ
290 ಸಾಂಸ್ಕೃತಿಕ ಸಮುಚ್ಚಯ ಹೊಂದಿರುವ ಆಸನದ ಸಂಖ್ಯೆ
₹6,720 ಒಂದು ದಿನಕ್ಕೆ ನಿಗದಿಪಡಿಸಿದ ಬಾಡಿಗೆ ದರ
***
"ಶೀಘ್ರ ಕಾಮಗಾರಿ ಮುಗಿಸುವಂತೆ ಸೂಚಿಸಲಾಗಿದೆ. ಒಂದೂವರೆ ತಿಂಗಳಲ್ಲಿ ಸಿದ್ಧವಾಗಲಿದ್ದು, ₹78 ಲಕ್ಷದಲ್ಲಿ ಕಾಮಗಾರಿ ನಡೆಯುತ್ತಿದೆ"
–ಬನಶಂಕರಿ ಅಂಗಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ
***
"ನಮ್ಮ ವಿದ್ಯಾರ್ಥಿಗಳು ಸ್ಟುಡಿಯೊ ಥಿಯೇಟರ್‌ನಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರನ್ನು ಭೇಟಿ ಮಾಡುವೆ"
–ಸಿ. ಬಸವಲಿಂಗಯ್ಯ, ಎನ್‌ಎಸ್‌ಡಿ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.