ಕೆ.ಆರ್.ಪುರ: ದಶಕಗಳ ಹಿಂದೆ ಕೊಳಚೆ ಗುಂಡಿಯಾಗಿದ್ದ ಕಲ್ಕೆರೆ ಕೆರೆ ಬಿಬಿಎಂಪಿ ಕಾಯಕಲ್ಪದಿಂದ ಶುದ್ಧ ನೀರಿನಿಂದ ತುಂಬಿ ತುಳುಕುತ್ತಿದೆ. ಕೊಳಚೆ ನೀರಿನ ಕೇಂದ್ರದಂತಿದ್ದ ಕೆರೆ ಈಗ ವಿದೇಶಿ ಪಕ್ಷಿಗಳ ತಾಣವಾಗಿದೆ.
180 ಎಕರೆ ವಿಸ್ತೀರ್ಣದಲ್ಲಿರುವ ಈ ಕೆರೆಯ ಪುನಶ್ಚೇತನಕ್ಕೆ ₹22 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳನ್ನು ಬಿಬಿಎಂಪಿ ಕೈಗೊಂಡಿದೆ. ಕಲ್ಕೆರೆ ಮತ್ತು ಬಿಳೆಶಿವಾಲೆ ಕಡೆ ಕೆರೆಗೆ ಎರಡು ಮುಖ್ಯದ್ವಾರಗಳನ್ನು ನಿರ್ಮಿಸಲಾಗುತ್ತಿದೆ. ಏರಿ ಮೇಲೆ ವಾಯು ವಿಹಾರ ಮಾಡಲು ನಡಿಗೆ ಪಥ ನಿರ್ಮಿಸಲಾಗುತ್ತಿದೆ. ಕೆರೆ ಸೇರುತ್ತಿದ್ದ ಕೊಳಚೆ ನೀರು ತಡೆದು, ಅದಕ್ಕೆ ಬೇರೆ ಮಾರ್ಗ ಮಾಡಲಾಗಿದೆ.
ಬೈರತಿ, ಬಿಳಿಶಿವಾಲೆ, ರಾಂಪೂರ, ಮಾರಗೊಂಡನಹಳ್ಳಿ ರೈತರು ಈ ಕೆರೆಯ ನೀರನ್ನು ಕೃಷಿಗೆ ಬಳಸುತ್ತಿದ್ದರು. ಆದರೆ,ಬೆಂಗಳೂರಿನ ಆರ್ ಟಿ.ನಗರ, ಹೆಬ್ಬಾಳ ಮುಂತಾದ ಕಡೆಯಿಂದ ಹರಿದು ಬರುತ್ತಿದ್ದ ಕೊಳಚೆ ನೀರಿನಿಂದ ಕೆರೆಯು ಸಂಪೂರ್ಣ ಕಲುಷಿತಗೊಂಡಿತ್ತು.
ಆಗಬೇಕಿದೆ ಸುಧಾರಣೆ:ಅಭಿವೃದ್ಧಿಯ ಜೊತೆಗೆ ಕೆರೆಗೆ ಭದ್ರತೆ ಒದಗಿಸುವ ಕಾರ್ಯವೂ ಆಗಬೇಕು ಎನ್ನುತ್ತಾರೆ ಸ್ಥಳೀಯರು.
‘ಅಭಿವೃದ್ಧಿಗೊಂಡಿರುವ ಕೆರೆಯನ್ನು ರಕ್ಷಿಸುವ ಕೆಲಸವಾಗಬೇಕು. ಹೀಗಾಗಿ, ಕೆರೆಯ ಸುತ್ತ ಬೇಲಿ ಹಾಕಿ, ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಬೇಕು’ ಎನ್ನುತ್ತಾರೆ ಸ್ಥಳೀಯರಾದಜಯರಾಂ ತಿಳಿಸಿದರು.
‘ಕೆರೆಯ ಸುತ್ತಲಿನ ಪ್ರದೇಶಗಳಲ್ಲಿ ಕಟ್ಟಡ ತ್ಯಾಜ್ಯ, ಪ್ಲಾಸ್ಟಿಕ್ ಸುರಿಯಲಾಗುತ್ತಿದೆ. ಅಲ್ಲದೆ, ರಾತ್ರಿ ವೇಳೆ ಹಲವರು ಇಲ್ಲಿ ಬಂದು ಮದ್ಯಪಾನ ಮಾಡುತ್ತಾರೆ. ರಾತ್ರಿಯ ವೇಳೆ ಒಬ್ಬ ಭದ್ರತಾ ಸಿಬ್ಬಂದಿ ಮಾತ್ರವಿದ್ದು, ಕೆರೆಯ ಎಲ್ಲ ಭಾಗವನ್ನು ನೋಡಿಕೊಳ್ಳಲು ಅವರಿಗೆ ಸಾಧ್ಯವಾಗುವುದಿಲ್ಲ’ ಎಂದು ನಿವಾಸಿ ರಮೇಶ್ ಹೇಳಿದರು.
ಟೆಕಿಯೊಬ್ಬರು ಇಲ್ಲಿ ರಾತ್ರಿ ಪಾರ್ಟಿ ಮಾಡಿ, ತೆಪ್ಪ ಚಲಾಯಿಸಿ ಕೆರೆಯಲ್ಲಿ ಸಾವನ್ನಪ್ಪಿದ್ದರು.
ಕೆರೆಯ ಆಕರ್ಷಣೆ
* ಮಧ್ಯಭಾಗದಲ್ಲಿ ಎರಡು ನಡುಗಡ್ಡೆ ನಿರ್ಮಿಸಲಾಗಿದೆ
* ಕೆರೆಯ ಆವರಣದಲ್ಲಿ ಹೂವು–ಔಷಧಿ ಸಸಿಗಳನ್ನು ನೆಟ್ಟು ಬೆಳೆಸಲಾಗುತ್ತಿದೆ
* ಹಸಿ ಮತ್ತು ಒಣ ಕಸ ಹಾಕಲು ಕಸದ ಬುಟ್ಟಿ ಅಳವಡಿಸಲಾಗಿದೆ
* ₹2 ಕೋಟಿ ವೆಚ್ಚದಲ್ಲಿ ತಲೆ ಎತ್ತಲಿದೆ ಎಸ್‌ಟಿಪಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.