ADVERTISEMENT

ಮೂರ್ತಿ ವಿಸರ್ಜನೆಗೆ ಕಲ್ಯಾಣಿಗಳು ಸಜ್ಜು

ಬಿಬಿಎಂಪಿ ವತಿಯಿಂದ ಮೊಬೈಲ್‌ ಟ್ಯಾಂಕರ್‌ ವ್ಯವಸ್ಥೆ; ಪಿಒಪಿ ಮೂರ್ತಿ ವಿಸರ್ಜನೆಗೆ ಅವಕಾಶವಿಲ್ಲ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2024, 16:12 IST
Last Updated 6 ಸೆಪ್ಟೆಂಬರ್ 2024, 16:12 IST
ಯಡಿಯೂರು ಕೆರೆಯಲ್ಲಿರುವ ಕಲ್ಯಾಣಿಗೆ ಶುಕ್ರವಾರ ನೀರು ತುಂಬಿಸಲಾಯಿತು.
ಯಡಿಯೂರು ಕೆರೆಯಲ್ಲಿರುವ ಕಲ್ಯಾಣಿಗೆ ಶುಕ್ರವಾರ ನೀರು ತುಂಬಿಸಲಾಯಿತು.   

ಬೆಂಗಳೂರು: ನಗರ ವ್ಯಾಪ್ತಿಯಲ್ಲಿ ಗಣೇಶ ಮೂರ್ತಿಗಳನ್ನು ವಿಸರ್ಜಿಸಲು ಕಲ್ಯಾಣಿಗಳನ್ನು ಬಿಬಿಎಂಪಿ ಸಜ್ಜುಗೊಳಿಸಿದ್ದು, ಮೊಬೈಲ್‌ ಟ್ಯಾಕರ್‌ಗಳೂ ವಾರ್ಡ್‌ಗಳಲ್ಲಿ ಸಂಚರಿಸಲಿವೆ.

ಮಹದೇಪುರ ವಲಯದಲ್ಲಿ 14 ಕಲ್ಯಾಣಿಗಳು, ಯಲಹಂಕದಲ್ಲಿ 10, ಆರ್.ಆರ್. ನಗರದಲ್ಲಿ ಏಳು, ಬೊಮ್ಮನಹಳ್ಳಿಯಲ್ಲಿ ಐದು, ದಕ್ಷಿಣದಲ್ಲಿ ಎರಡು, ಪೂರ್ವ, ಪಶ್ಚಿಮ ಹಾಗೂ ದಾಸರಹಳ್ಳಿ ವಲಯದಲ್ಲಿ ತಲಾ ಒಂದು ಕಲ್ಯಾಣಿಗಳನ್ನು ಮೂರ್ತಿ ವಿಸರ್ಜನೆಗೆ ಸಜ್ಜುಗೊಳಿಸಲಾಗಿದೆ.

ಎಂಟು ವಲಯಗಳಲ್ಲಿ 462 ಮೊಬೈಲ್‌ ಟ್ಯಾಂಕ್‌ಗಳನ್ನು ಸಿದ್ಧಮಾಡಲಾಗಿದ್ದು, ಪೂರ್ವದಲ್ಲಿ ಅತಿ ಹೆಚ್ಚು 138 ಮೊಬೈಲ್‌ ಟ್ಯಾಂಕರ್‌ಗಳು ಸಂಚರಿಸಲಿವೆ.

ADVERTISEMENT

ದಕ್ಷಿಣ ವಲಯದ ಪದ್ಮನಾಭನಗರ ವ್ಯಾಪ್ತಿಯಲ್ಲಿರುವ ಯಡಿಯೂರು ಕೆರೆಯಲ್ಲಿರುವ ಕಲ್ಯಾಣಿಗೆ ಶುಕ್ರವಾರ ನೀರು ತುಂಬಿಸಲಾಯಿತು. ಶನಿವಾರದಿಂದ (ಸೆಪ್ಟೆಂಬರ್‌ 7) ಸೆ. 17ರವರೆಗೆ ಮೂರ್ತಿ ವಿಸರ್ಜಿಸಲು ಅವಕಾಶ ಕಲ್ಪಿಸಲಾಗಿದೆ.

ಮೊದಲ ಮೂರು ದಿನ ಹೆಚ್ಚು ಮೂರ್ತಿಗಳು ವಿಸರ್ಜನೆಯಾಗುವುದರಿಂದ, ಕಲ್ಯಾಣಿ ಬಹುತೇಕ ಭರ್ತಿಯಾಗಲಿದೆ. ಆದ್ದರಿಂದ ಸೆ.10ರಂದು ಶುಚಿಗೊಳಿಸುವ ಕೆಲಸ ಮಾಡಲಾಗುತ್ತದೆ. ಅಂದು ವಿಸರ್ಜನೆಗೆ ಅವಕಾಶ ಇರುವುದಿಲ್ಲ. ಸೆ.18ರಿಂದ ಯಡಿಯೂರು ಕೆರೆಯಲ್ಲಿ ವಿಸರ್ಜನೆಗೆ ಅವಕಾಶ ಇರುವುದಿಲ್ಲ. 2023ರಲ್ಲಿ 11 ದಿನಗಳಲ್ಲಿ 1.75 ಲಕ್ಷ ಮೂರ್ತಿಗಳನ್ನು ಈ ಕಲ್ಯಾಣಿಯಲ್ಲಿ ವಿಸರ್ಜನೆ ಮಾಡಲಾಗಿತ್ತು ಎಂದು ಪದ್ಮನಾಭನಗರ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ತಿಳಿಸಿದ್ದಾರೆ.

ಪಿಒಪಿ ಮೂರ್ತಿಗೆ ಅವಕಾಶವಿಲ್ಲ: ಯಡಿಯೂರು ಕೆರೆ, ಕಲ್ಯಾಣಿಯಲ್ಲಿ ಮಣ್ಣಿನ ಮೂರ್ತಿಗಳ ವಿಸರ್ಜನೆಗೆ ಮಾತ್ರ ಅವಕಾಶವಿದೆ. ಪಿಒಪಿ ಮೂರ್ತಿಗಳಿಗೆ ಅವಕಾಶ ನೀಡುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಗಣೇಶ ಮೂರ್ತಿಗಳ ವಿಸರ್ಜನೆಗೆ ಪಾಲಿಕೆ ಸಿದ್ಧಗೊಳಿಸಿರುವ ಕಲ್ಯಾಣಿಗಳು ಹಾಗೂ ಮೊಬೈಲ್‌ ಟ್ಯಾಂಕರ್‌ಗಳ ಮಾಹಿತಿಯನ್ನು ವೆಬ್‌ಸೈಟ್ https://apps.bbmpgov.in/ganesh2024/ ನಲ್ಲಿ ಪಡೆದುಕೊಳ್ಳಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.