ADVERTISEMENT

‘ಗೌರವ ನುಡಿ’ಯಲ್ಲಿ ಕಮಲಾ ನೆನಪಿನ ರಂಗವಲ್ಲಿ

​ಪ್ರಜಾವಾಣಿ ವಾರ್ತೆ
Published 3 ಜುಲೈ 2024, 16:12 IST
Last Updated 3 ಜುಲೈ 2024, 16:12 IST
<div class="paragraphs"><p>ಬೆಂಗಳೂರಿನಲ್ಲಿ ಬುಧವಾರ ನಡೆದ ‘ಕಮಲಾ ಹಂಪನಾ ಗೌರವ ನುಡಿ ನಮನ’ ಕಾರ್ಯಕ್ರಮದಲ್ಲಿ ಕಮಲಾ ಹಂಪನಾ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು </p></div>

ಬೆಂಗಳೂರಿನಲ್ಲಿ ಬುಧವಾರ ನಡೆದ ‘ಕಮಲಾ ಹಂಪನಾ ಗೌರವ ನುಡಿ ನಮನ’ ಕಾರ್ಯಕ್ರಮದಲ್ಲಿ ಕಮಲಾ ಹಂಪನಾ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು

   

– ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಕಮಲಾ ಹಂಪನಾ, ಸಾಹಿತ್ಯಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕವಾಗಿ ಬಹುದೊಡ್ಡ ಕೊಡುಗೆ ನೀಡಿದ ಲೇಖಕಿ‘ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.

ಬಂಡಾಯ ಸಾಹಿತ್ಯ ಸಂಘಟನೆಯು ವಿವಿಧ ಸಂಘ–ಸಂಸ್ಥೆಗಳ ಸಹಯೋಗದಲ್ಲಿ ನಗರದಲ್ಲಿ ಬುಧವಾರ ಆಯೋಜಿಸಿದ್ದ ‘ಕಮಲಾ ಹಂಪನಾ ನುಡಿ ಗೌರವ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಅವರು ಮಾತನಾಡಿದರು.

‘ಕಮಲಾ ಅವರು ಮಹಿಳೆಯರು, ತಳ ಸಮುದಾಯದವರಿಗೆ ಅನ್ಯಾಯವಾದಾಗ, ಅವರ ಪರ ದನಿ ಎತ್ತುತ್ತಿದ್ದರು. ಅವರ ಒತ್ತಾಯದಿಂದಲೇ ಸರ್ಕಾರ ದಾನಚಿಂತಾಮಣಿ ಅತ್ತಿಮಬ್ಬೆ ಹೆಸರಲ್ಲಿ ಲೇಖಕಿಯರಿಗಾಗಿ ಪ್ರಶಸ್ತಿ ಸ್ಥಾಪಿಸಿತು. ನಮ್ಮ ಕಾಲದಲ್ಲಿಯೂ ಪ್ರಸ್ತುತವಾಗುವಂತಹ ಆದರ್ಶವನ್ನು ಕಮಲಾ ಹಂಪನಾ ಕಟ್ಟಿಕೊಟ್ಟಿದ್ದರು.‌ ಈ ದಂಪತಿ ಧರ್ಮ, ಜಾತಿಯ ಸಂಕೋಲೆಗಳನ್ನು ದಾಟಿ ಅನ್ಯೋನ್ಯವಾಗಿ ಬದುಕಿ ತೋರಿಸಿದರು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಹಕಾರ ಸಚಿವ ಕೆ.ಎನ್.ರಾಜಣ್ಣ ಮಾತನಾಡಿ, ‘ಕಮಲಮ್ಮ ನಮ್ಮೂರಿನ ಮೊದಲ ಪದವೀಧರೆ. ಕಮಲಾ– ಹಂಪನಾ ಅವರದ್ದು ಆದರ್ಶದ ದಾಂಪತ್ಯ. ಅವರ ಸಂಸಾರದಲ್ಲಿ ಸಾಮರಸ್ಯ ಇತ್ತು’ ಎಂದು ನೆನಪಿಸಿಕೊಂಡರು.

ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೂಡೇ ಪಿ. ಕೃಷ್ಣ ಮಾತನಾಡಿ, ‘ಕಮಲಾ ಹಂಪನಾ ಅವರು, ಅಧ್ಯಾಪನ, ಅಧ್ಯಯನ ಮತ್ತು ಬರವಣಿಗೆಗಳ ತ್ರಿವೇಣಿ ಸಂಗಮವಾಗಿದ್ದರು. ಕನ್ನಡ ಮೇಷ್ಟ್ರುಗಳಿಗೆ ಸ್ಫೂರ್ತಿಯಾಗಿದ್ದ ಅವರು, ಬಹುದೊಡ್ಡ ಶಿಷ್ಯ ಬಳಗವನ್ನೇ ಹೊಂದಿದ್ದರು’ ಎಂದು ಸ್ಮರಿಸಿದರು.

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಎಚ್‌.ಎಲ್‌. ಪುಷ್ಪ ಮಾತನಾಡಿ, ‘ಅಧ್ಯಾಪನ, ಲೇಖನ, ಸಂಶೋಧನೆ ಸೇರಿ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡ ಕಮಲಾ ಅವರು, ಸೌಲಭ್ಯಗಳಿಲ್ಲದ ಕಾಲದಲ್ಲಿ ಶಾಸನ, ಇತಿಹಾಸ ಕುರಿತು ಗ್ರಂಥ ಸಂಪಾದನೆ ಮಾಡಿದ್ದರು’ ಎಂದು ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.