ADVERTISEMENT

ಸಮ್ಮೇಳನಾಧ್ಯಕ್ಷತೆಗೆ ಉದ್ಯಮಿ ಹೆಸರು: ಎಚ್‌.ಎಲ್‌.ಪುಷ್ಪಾ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2024, 17:58 IST
Last Updated 28 ಅಕ್ಟೋಬರ್ 2024, 17:58 IST
<div class="paragraphs"><p>ಕಾರ್ಯಕ್ರಮದಲ್ಲಿ ಕಮಲಾ ಹಂಪನಾ ದತ್ತಿ ಪ್ರಶಸ್ತಿಯನ್ನು ಕವಯತ್ರಿ ಚಾಂದಿನಿ ಮತ್ತು ಸಂಶೋಧಕ ಬಾಳಾಸಾಹೇಬ ಲೋಕಾಪುರ ಅವರಿಗೆ ಪ್ರಧಾನ ಮಾಡಲಾಯಿತು. ಹಂಪನಾ ದಂಪತಿಯ ಪುತ್ರಿಯರಾದ ಆರತಿ&nbsp; ಎಚ್‌.ಎನ್‌. (ಎಡದಿಂದ), ರಾಜಶ್ರೀ ಎಚ್‌.ಎನ್‌., ಸಂಶೋಧಕ ಹಂ.ಪ.ನಾಗರಾಜಯ್ಯ,&nbsp;</p></div>

ಕಾರ್ಯಕ್ರಮದಲ್ಲಿ ಕಮಲಾ ಹಂಪನಾ ದತ್ತಿ ಪ್ರಶಸ್ತಿಯನ್ನು ಕವಯತ್ರಿ ಚಾಂದಿನಿ ಮತ್ತು ಸಂಶೋಧಕ ಬಾಳಾಸಾಹೇಬ ಲೋಕಾಪುರ ಅವರಿಗೆ ಪ್ರಧಾನ ಮಾಡಲಾಯಿತು. ಹಂಪನಾ ದಂಪತಿಯ ಪುತ್ರಿಯರಾದ ಆರತಿ  ಎಚ್‌.ಎನ್‌. (ಎಡದಿಂದ), ರಾಜಶ್ರೀ ಎಚ್‌.ಎನ್‌., ಸಂಶೋಧಕ ಹಂ.ಪ.ನಾಗರಾಜಯ್ಯ, 

   

ಬೆಂಗಳೂರು: ‘ದೊಡ್ಡ ಉದ್ಯಮಿಯೊಬ್ಬರ ಪತ್ನಿಯನ್ನು ಮಂಡ್ಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಲಾಗುತ್ತದೆ ಎಂಬ ಸುದ್ದಿ ಇದೆ. ಉದ್ಯಮಿಗಳು ಎಂಬ ಮಾತ್ರಕ್ಕೆ ಈ ಸ್ಥಾನಕ್ಕೆ ಆಯ್ಕೆ ಮಾಡುವುದು ಎಷ್ಟು ಸರಿ’ ಎಂದು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಎಚ್‌.ಎಲ್‌.ಪುಷ್ಪಾ ಪ್ರಶ್ನಿಸಿದರು.

ಕರ್ನಾಟಕ ಲೇಖಕಿಯರ ಸಂಘ, ಕನ್ನಡ ಜನಶಕ್ತಿ ಕೇಂದ್ರ, ನಾಡೋಜ ಕಮಲಾ ಹಂಪನಾ ಸಾಹಿತ್ಯ ವೇದಿಕೆ ನಗರದಲ್ಲಿ ಸೋಮವಾರ ಜಂಟಿಯಾಗಿ ಆಯೋಜಿಸಿದ್ದ ದತ್ತಿ ಉಪನ್ಯಾಸ ಮತ್ತು ಕಮಲಾ ಹಂಪನಾ ದತ್ತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ADVERTISEMENT

‘ಕನ್ನಡ ಸಾಹಿತ್ಯ–ಸಂಸ್ಕೃತಿಗಾಗಿ ಕೆಲಸ ಮಾಡಿದ ವೀಣಾ ಶಾಂತೇಶ್ವರ, ಶಾಂತಿ ನಾಯಕರಂತಹ ಅನೇಕ ಮಹಿಳೆಯರು ಇದ್ದರೂ, ಉದ್ಯಮಿಗಳನ್ನು ಆಯ್ಕೆ ಮಾಡಲಾಗುತ್ತಿದೆ. ಸಮ್ಮೇಳನದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡುವ ಮಾನದಂಡಗಳೇ ಬದಲಾಗಿವೆ’ ಎಂದು ಬೇಸರಿಸಿದರು.

‘ಈಗ ಕೆಲವು ಲೇಖಕಿಯರು ಬರೆಯುತ್ತಾರೆ ಮತ್ತು ಪ್ರಶಸ್ತಿ ಪಡೆದುಕೊಳ್ಳುತ್ತಾರೆ. ಆದರೆ ಜನಸಾಮಾನ್ಯರೊಂದಿಗೆ ಬೆರೆಯದೇ, ಸಮಕಾಲೀನ ವಿಯಷಗಳಿಗೆ ಸ್ಪಂದಿಸದೇ, ಪ್ರಗತಿಪರ ಚಿಂತನೆ ಇಲ್ಲದೆ ಬರೆಯುವ ಅವರು ಟೀಕೆಗಳಿಗೆ ಗುರಿಯಾಗುತ್ತಾರೆ’ ಎಂದರು.

ಕವಿ ಎಲ್‌.ಹನುಮಂತಯ್ಯ ಮಾತನಾಡಿ, ‘ಈಗ ದಲಿತ ಕಾವ್ಯ ಮತ್ತು ಸಾಹಿತ್ಯದ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ. ಸಮಕಾಲೀನ ಸಂಗತಿಗಳಿಗೆ ಎದುರಾಗುವುದು ಕಾವ್ಯದ ಬಹಳ ದೊಡ್ಡ ಗುಣ. ಕವಿಯೊಬ್ಬ ಸಮಕಾಲೀನ ಸಂಘರ್ಷಗಳನ್ನು ಪ್ರಶ್ನೆ ಮಾಡಬೇಕು. ಮಾನವೀಯ ಮೌಲ್ಯಗಳನ್ನು ಮರುವೀಕ್ಷಣೆ ಮಾಡಬೇಕು. ಈಗಿನ ಕವಿಗಳಲ್ಲಿ ನಾನಿವನ್ನು ನಿರೀಕ್ಷೆ ಮಾಡುತ್ತೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.