ಬೆಂಗಳೂರು: ‘ಎಷ್ಟೇ ಉನ್ನತ ಸಾಧನೆ ಮಾಡಿದರೂ ಕಲಿಕೆಯಲ್ಲಿ ಸದಾ ವಿದ್ಯಾರ್ಥಿಗಳಾಗಿದ್ದಾಗ ಮಾತ್ರ ಜ್ಞಾನ ಹಾಗೂ ಬದುಕಿನ ನಿರಂತರತೆ ಸಾಧ್ಯ’ ಎಂದು ಸಾಹಿತಿ ಕಮಲಾ ಹಂಪನಾ ಪ್ರತಿಪಾದಿಸಿದರು.
ಶೇಷಾದ್ರಿಪುರ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾಲೇಜಿನ ಸುವರ್ಣ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಬದುಕಿನ ಕತ್ತಲು ಹೋಗಲಾ ಡಿಸುವ ಬೆಳಕು ವಿದ್ಯೆ. ಮನುಷ್ಯನನ್ನು ಉನ್ನತಮಟ್ಟಕ್ಕೆ ಒಯ್ಯುವ ಮಾರ್ಗ ಅದೊಂದೆ. ಉತ್ತಮ ಶಿಕ್ಷಕರೇ ಶಿಕ್ಷಣ ಸಂಸ್ಥೆಯ ಆಧಾರಸ್ತಂಭ. ಕರ್ಣ, ಏಕಲವ್ಯ ಸಹ ಸಮಾಜದ ಸ್ಥಿತ್ಯಂತರಗಳನ್ನು ದಾಟಿ ಗುರುವಿನ ಸಾಕ್ಷಾತ್ಕಾರಕ್ಕಾಗಿ ಹಂಬಲಿಸಿದರು. ತಮಗೂ ಕುವೆಂಪು ಸೇರಿ ಉತ್ತಮ ಗುರುಗಳು ಸಿಕ್ಕಿದ್ದರಿಂದ ನಿರೀಕ್ಷಿತ ಜ್ಞಾನ ಸಂಪಾದನೆ, ಸಮಾಜದ ಋಣ ತೀರಿಸುವ ಶಕ್ತಿ ಗಳಿಸಲು ಸಾಧ್ಯವಾಯಿತು’ ಎಂದರು.
ಸಾಹಿತಿ ಹಂಪ ನಾಗರಾಜಯ್ಯ, ‘ಸಮಯವನ್ನು ಗೌರವಿಸುವ ವ್ಯಕ್ತಿ ವಿಧ್ವತ್ ಸಂಪಾದಿಸುತ್ತಾನೆ. ಸಮಾಜಕ್ಕೆ ದೊಡ್ಡ ಕೊಡುಗೆ ನೀಡುತ್ತಾನೆ. ಗುರುಗಳನ್ನು ಗೌರವಿಸುವವನು ಅವರ ಮಾರ್ಗದಲ್ಲೇ ನಡೆದು ಗುರುವನ್ನು ಮೀರಿಸುವ ಸಾಧಕನಾಗುತ್ತಾನೆ‘ ಎಂದು ಹೇಳಿದರು.
ಪ್ರಾಸ್ತಾವಿಕ ಭಾಷಣದಲ್ಲಿ ಶೇಷಾದ್ರಿ ಪುರಂ ಶಿಕ್ಷಣ ದತ್ತಿಯ ಪ್ರಧಾನ ಕಾರ್ಯದರ್ಶಿ ವೂಡೇ ಪಿ.ಕೃಷ್ಣ, ‘ಕಾಲೇಜಿನಲ್ಲಿ ಪಠ್ಯದ ಜತೆಗೆಪೂರಕ ಪಠ್ಯ ಚಟುವಟಿಕೆಗಳಿಗೂ ಆದ್ಯತೆ ನೀಡಲಾಗಿದೆ. ಕೈಗೆಟಕುವ ಶುಲ್ಕದಲ್ಲಿ ಶಿಕ್ಷಣ ನೀಡಲಾಗುತ್ತಿದೆ’ ಎಂದರು.
ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಅಧ್ಯಕ್ಷ ಎನ್.ಆರ್.ಪಂಡಿತಾರಾಧ್ಯ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಟಿ.ಎಸ್.ಹೆಂಜಾರಪ್ಪ, ವಾಗ್ಮಿ ಇಂದೂಮತಿ ಸಾಲಿಮಠ, ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಎನ್.ಪಿ.ಕಾರ್ತೀಕ್, ಪ್ರಾಂಶುಪಾಲ ಆರ್.ವಿ.ಮಂಜುನಾಥ್, ಧರ್ಮದರ್ಶಿ ಕೃಷ್ಣಸ್ವಾಮಿ, ಅನಂತರಾಮು, ನಟರಾಜ್, ಚಂದ್ರಶೇಖರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.