ADVERTISEMENT

ಕಮಲಾನಗರದಲ್ಲಿ ಕಟ್ಟಡ ಕುಸಿತ ಪ್ರಕರಣ: ಉಳಿಯಿತು ಜೀವ, ಕುಸಿಯಿತು ಜೀವನ

ನೆಲಕಚ್ಚಿದ ಕಟ್ಟಡಗಳ ಅವಶೇಷಗಳಡಿ ಸರಕು–ಸರಂಜಾಮು, ಆಭರಣ– ಹಣ ಹುಡುಕಾಟ

ವಿಜಯಕುಮಾರ್ ಎಸ್.ಕೆ.
Published 16 ಅಕ್ಟೋಬರ್ 2021, 19:31 IST
Last Updated 16 ಅಕ್ಟೋಬರ್ 2021, 19:31 IST
ಕಮಲಾನಗರದಲ್ಲಿ ನೆಲಸಮಗೊಳಿಸಿದ ಕಟ್ಟಡಗಳ ಅವಶೇಷಗಳ ಅಡಿ ಸಿಲುಕಿರುವ ವಸ್ತುಗಳನ್ನು ಹುಡುಕುತ್ತಿರುವ ಮನೆ ಕಳೆದುಕೊಂಡ ನಿವಾಸಿಗಳು –ಪ್ರಜಾವಾಣಿ ಚಿತ್ರಗಳು/ಎಂ.ಎಸ್‌.ಮಂಜುನಾಥ್‌
ಕಮಲಾನಗರದಲ್ಲಿ ನೆಲಸಮಗೊಳಿಸಿದ ಕಟ್ಟಡಗಳ ಅವಶೇಷಗಳ ಅಡಿ ಸಿಲುಕಿರುವ ವಸ್ತುಗಳನ್ನು ಹುಡುಕುತ್ತಿರುವ ಮನೆ ಕಳೆದುಕೊಂಡ ನಿವಾಸಿಗಳು –ಪ್ರಜಾವಾಣಿ ಚಿತ್ರಗಳು/ಎಂ.ಎಸ್‌.ಮಂಜುನಾಥ್‌   

ಬೆಂಗಳೂರು: ‘ಮಹಾಮಳೆಯ ಅಬ್ಬರಕ್ಕೆ ಓಲಾಡಿದ ಕಟ್ಟಡದಿಂದ ಓಡೋಡಿ ಬಂದಿದ್ದರಿಂದ ಜೀವವೇನೋ ಉಳಿಯಿತು. ಆದರೆ, ಜೀವನ ಕುಸಿದು ಮೂರಾಬಟ್ಟೆಯಾಗಿದೆ...’

ಕಮಲಾನಗರದಲ್ಲಿ ಕುಸಿದ ಕಟ್ಟಡದ ಅವೇಶೇಷಗಳ ಅಡಿಯಲ್ಲಿ ಸಿಲುಕಿರುವ ತಮ್ಮ ಸರಕು–ಸರಂಜಾಮು, ಬಟ್ಟೆ–ಬರೆ, ಹಣ– ಆಭರಣ, ದವಸ–ಧಾನ್ಯಗಳನ್ನು ಹುಡುಕುತ್ತಿರುವ ಮನೆ ಕಳೆದುಕೊಂಡ ನಿವಾಸಿಗಳ ಒಡಲ ಅಳಲು ಇದು.

‘ಅಂದು ರಾತ್ರಿ 10 ಗಂಟೆ ಸುಮಾರಿಗೆ ಕಟ್ಟಡ ಅಲುಗಾಡಿದ ಕ್ಷಣದಲ್ಲಿ ನಮ್ಮ ಬದುಕಿನ ಬುಡವೂ ಅಲುಗಾಡುತ್ತಿದೆ ಎಂಬುದು ಹೊಳೆಯಲಿಲ್ಲ. ಮಕ್ಕಳನ್ನು ಎಳೆದುಕೊಂಡು ಓಡೋಡಿ ರಸ್ತೆಗೆ ಬಂದು ನಿಂತ ಗಳಿಗೆಯಲ್ಲೇ ನಮ್ಮ ಬದುಕೂ ಬೀದಿಗೆ ಬಿದ್ದಿದೆ ಎಂಬುದು ತಿಳಿಯಲಿಲ್ಲ. ಕಣ್ಮುಚ್ಚಿ ಬಿಡುವಷ್ಟರಲ್ಲಿ ಎಲ್ಲವೂ ಮುಗಿದು ಹೋಗಿದೆ. ಬದುಕು ಕಟ್ಟಿಕೊಳ್ಳಲು ಇಷ್ಟು ವರ್ಷ ಸವೆಸಿದ ಶ್ರಮ ಒಮ್ಮೆಲೆ ಅಳಿಸಿಹೋಗಿದೆ’ ಎಂದು ನಿವಾಸಿಗಳು ಹೇಳುವಾಗ ನಾಲ್ಕು ದಿನಗಳಿಂದ ಅಳುವಿನ ಕೋಡಿ ಹರಿಸಿ ಬರಿದಾಗಿರುವ ಕಣ್ಣುಗಳಲ್ಲಿ ದುಃಖವಿನ್ನೂ ಮಡುಗಟ್ಟಿತ್ತು.

ADVERTISEMENT

‘ಹೊಟ್ಟೆ–ಬಟ್ಟೆ ಕಟ್ಟಿ ಉಳಿತಾಯ ಮಾಡಿ, ಒಂದೊಂದೇ ವಸ್ತುಗಳನ್ನು ಮನೆಗೆ ತಂದು ಸಂಸಾರದ ಗೂಡು ಕಟ್ಟಿಕೊಂಡಿದ್ದೆವು. ಎಲ್ಲವೂ ನಮ್ಮ ಕಣ್ಣೆದುರಿಗೇ ಮಣ್ಣುಪಾಲಾಯಿತು. ಕಣ್ಮುಚ್ಚಿದರೆ ಸಾಕು ಆ ಚಿತ್ರಣವೇ ಸ್ಮೃತಿಪಟಲದಲ್ಲಿ ಮೂಡುತ್ತಿದೆ. ಅವಶೇಷಗಳ ಅಡಿಯಲ್ಲಿ ಅಳಿದು–ಉಳಿದಿರುವ ವಸ್ತುಗಳು ಸಿಗುತ್ತವೇನೋ ಎಂದು ಹುಡುಕುತ್ತಿದ್ದೇವೆ’ ಎಂದು ಹೇಳಿದರು.

‘ಮಕ್ಕಳ ಸಹಿತ ಜೀವ ಉಳಿಸಿಕೊಂಡ ಸಮಾಧಾನವೇನೋ ಇದೆ. ನುಜ್ಜುಗುಜ್ಜಾದ ಪಾತ್ರೆ, ಕಪಾಟು, ಪೀಠೋಪಕರಣ, ಟಿ.ವಿ, ಫ್ರಿಡ್ಜು, ವಾಷಿಂಗ್ ಮೆಷಿನ್‌ಗಳನ್ನು ನೋಡಿ ಸಂಕಟವಾಗುತ್ತಿದೆ’ ಎಂದು ಧನಲಕ್ಷ್ಮಿ ಹೇಳಿದರು.

ಅವಶೇಷಗಳ ಅಡಿಯಲ್ಲಿ ಸಿಲುಕಿರುವ ವಸ್ತುಗಳನ್ನು ಎತ್ತಿಕೊಡಲು ಬಿಬಿಎಂಪಿಯಿಂದ ಹಿಟಾಚಿ ವ್ಯವಸ್ಥೆ ಮಾಡಲಾಗಿದೆ. ಬೇರೆ ಯಾರೂ ಆ ವಸ್ತುಗಳನ್ನು ಎತ್ತಿಕೊಳ್ಳದಂತೆ ಪೊಲೀಸರು ಹಗಲು–ರಾತ್ರಿ ಕಾವಲಿದ್ದಾರೆ. ನಿವಾಸಿಗಳು ಕೂಡ ಅಲ್ಲಿಂದ ಕದಲಿಲ್ಲ. ಸಿಕ್ಕ ವಸ್ತುಗಳನ್ನು ಪೊಲೀಸರು ಪಟ್ಟಿ ಮಾಡಿಕೊಂಡು ಜೋಪಾನವಾಗಿ ವಾರಸುದಾರರಿಗೆ ಹಿಂದಿರುಗಿಸುತ್ತಿದ್ದಾರೆ.

ನಿವಾಸಿಗಳ ತಾತ್ಕಾಲಿಕ ಆಶ್ರಯಕ್ಕೆ ಸರ್ಕಾರಿ ಶಾಲೆಯಲ್ಲಿ ವ್ಯವಸ್ಥೆ ಮಾಡಿದ್ದರೂ, ಸಂಬಂಧಿಕರ ಮನೆಗಳಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.‌

₹7 ಲಕ್ಷ ಮೌಲ್ಯದ ಆಭರಣ ಸುರಕ್ಷಿತ

ಲೋಕೇಶ್ –ಧನಲಕ್ಷ್ಮಿ ದಂಪತಿ ತಮ್ಮ ಮಗಳ ಮದುವೆಗೆಂದು ಮಾಡಿಸಿದ್ದ ಒಡವೆ ಸೇರಿ ಅಂದಾಜು ₹7 ಲಕ್ಷ ಮೌಲ್ಯದ ಚಿನ್ನದ ಆಭರಣಗಳು ಅವಶೇಷಗಳ ಅಡಿ ಸುರಕ್ಷಿತವಾಗಿ ಶನಿವಾರ ದೊರೆತವು.

ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಿ ಅಡುಗೆ ಮನೆಯಲ್ಲಿ ಪಾತ್ರೆಯೊಂದರಲ್ಲಿ ಇರಿಸಿದ್ದರು. ಆ ಆಭರಣಗಳು ಕಟ್ಟಡ ಕುಸಿದರೂ ಚೆಲ್ಲಾಪಿಲ್ಲಿಯಾಗದೆ ಪಾತ್ರೆಯಲ್ಲೇ ಸುರಕ್ಷಿತವಾಗಿದ್ದವು. ಕಟ್ಟಡ ಬಿದ್ದ ಕ್ಷಣದಿಂದ ಆಭರಣ ಸಿಕ್ಕರೆ ಸಾಕು ಎಂದು ಜೀವ ಬಿಗಿ ಹಿಡಿದು ಹಗಲು–ರಾತ್ರಿ ಅಲ್ಲೇ ಕುಳಿತಿದ್ದ ಇಡೀ ಕುಟುಂಬ ಆಭರಣದ ಚೀಲ ಸಿಕ್ಕ ಕೂಡಲೇ ಸಂಭ್ರಮದಲ್ಲಿ ತೇಲಾಡಿತು.

‘ದೀಪಾವಳಿ ವೇಳೆಗೆ ಮಗಳ ಮದುವೆ ನಡೆಯಲಿದೆ. ಅದಕ್ಕಾಗಿಯೇ ಬೇರೆ ಮನೆ ಮಾಡಿ ಬುಧವಾರ ಹೊಸ ಮನೆಗೆ ಹೋಗಲು ಸಿದ್ಧತೆ ನಡೆಸಿದ್ದೆವು. ಮಂಗಳವಾರ ರಾತ್ರಿ ಈ ರೀತಿ ಆಯಿತು. ಒಡವೆ ಸಿಕ್ಕಿದ ಖುಷಿ ಇದೆ. ₹1 ಲಕ್ಷಕ್ಕೂ ಅಧಿಕ ನಗದು, ಬೆಳ್ಳಿ ಆಭರಣ ಸಿಗಬೇಕಿದೆ’ ಎಂದು ಲೋಕೇಶ್ ಹೇಳಿದರು.

ಇನ್ನುಳಿದ ಕುಟುಂಬದವರೂ ತಮ್ಮ ವಸ್ತು, ಒಡವೆಗಳು ಸುರಕ್ಷಿತವಾಗಿ ಸಿಗಲಿವೆ ಎಂಬ ಭರವಸೆಯಲ್ಲಿ ಕಾದು ಕುಳಿತಿದ್ದಾರೆ.

ತಲಾ ₹1 ಲಕ್ಷ ನೆರವು

ಮನೆ ಕಳೆದುಕೊಂಡ ಬಾಡಿಗೆದಾರ 6 ಕುಟುಂಬಗಳಿಗೆ ಸಚಿವ ಕೆ. ಗೋಪಾಲಯ್ಯ ಅವರು ತಲಾ ₹1 ಲಕ್ಷ ನೆರವು ನೀಡಿದ್ದಾರೆ ಎಂದು ನಿವಾಸಿಗಳು ಹೇಳಿದರು.

ಅಕ್ಕಪಕ್ಕದಲ್ಲಿ ಇದ್ದ ಶೆಡ್ ರೀತಿಯ ನಾಲ್ಕು ಮನೆಗಳೂ ಜಖಂಗೊಂಡಿದ್ದು, ಅವರಿಗೆ ತಲಾ ₹15 ಸಾವಿರ ನೀಡಿದ್ದಾರೆ ಎಂದು ತಿಳಿಸಿದರು.

‘ಉಟ್ಟ ಬಟ್ಟೆಯಲ್ಲೇ ಬೀದಿಗೆ ಬಂದ ಕುಟುಂಬಗಳಿಗೆ ವೈಯಕ್ತಿಕವಾಗಿ ನೆರವಾಗಿದ್ದೇನೆ. ಸರ್ಕಾರದಿಂದ ಎಷ್ಟು ಪರಿಹಾರ ಕೊಡಿಸಲು ಸಾಧ್ಯ ಎಂಬುದನ್ನು ಪರಿಶೀಲಿಸಲಾಗುತ್ತಿದೆ’ ಎಂದು ಕೆ. ಗೋಪಾಲಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.