ಬೆಂಗಳೂರು: ‘ಕನ್ನಡ ನೆಲ ಹಾಗೂ ಕನ್ನಡ ಭಾಷೆಯ ಬಗ್ಗೆ ವಿದೇಶಿಯರೂ ಈಗ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ’ ಎಂದು ಸಂಶೋಧಕ ಡಾ.ಹಂ.ಪ.ನಾಗರಾಜಯ್ಯ ಹೇಳಿದರು.
ನಗರದಲ್ಲಿ ಶನಿವಾರ ಬಿ.ಎಂ.ಶ್ರೀ. ಪ್ರತಿಷ್ಠಾನವು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಂಬತ್ತಳ್ಳಿ ಜೀವಣ್ಣ ಪದ್ಮಾವತಮ್ಮ ದತ್ತಿ ಪ್ರಶಸ್ತಿಯನ್ನು ಸ್ವೀಕರಿಸಿ ಅವರು ಮಾತನಾಡಿದರು.
‘ಜಗತ್ತಿನ 28 ವಿಶ್ವವಿದ್ಯಾಲಯಗಳಲ್ಲಿ ಕನ್ನಡದ ಕುರಿತು ನಾನು ವಿಚಾರ ಮಂಡಿಸಿದ್ದೇನೆ. ಅಲ್ಲಿ ಕನ್ನಡಕ್ಕೆ ಸಿಗುತ್ತಿರುವ ಆದ್ಯತೆ ತಿಳಿಯಿತು. ಮುಂದಿನ ದಿನಗಳಲ್ಲಿ ಕನ್ನಡವು ಇನ್ನೂ 10 ಪಟ್ಟು ವಿಜೃಂಭಿಸುವ ಕಾಲ ಬರಲಿದೆ’ ಎಂದು ಹೇಳಿದರು.
‘ತಾವು ನೆಲೆಸಿದ್ದ ಸ್ಥಳದಲ್ಲಿನ ಭಾಷೆ ಹಾಗೂ ನೆಲದ ಬಗ್ಗೆಯೇ ಸಾಹಿತ್ಯ ರಚಿಸುವುದು ಮುಖ್ಯ. ಹಳೆಗನ್ನಡದ ಸಾಹಿತಿಗಳೂ ಬೇರೆ ಬೇರೆ ಭಾಷೆಯ ಹಿನ್ನೆಲೆಯಿಂದ ಬಂದರೂ ಕನ್ನಡಕ್ಕೇ ಆದ್ಯತೆ ಕೊಟ್ಟು ಸಾಹಿತ್ಯ ಕೃಷಿ ಮಾಡಿದ್ದರು’ ಎಂದರು.
ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಮನು ಬಳಿಗಾರ್ ಮಾತನಾಡಿ, ‘ಹಂಪನಾ ಅವರು ಸಾಹಿತ್ಯ ಕ್ಷೇತ್ರದಲ್ಲಿ ಮಾದರಿ ಸೇವೆ ಸಲ್ಲಿಸಿದ್ದಾರೆ. ನಾಗರಾಜಯ್ಯ ಅವರು ಜ್ಞಾನ ಭಂಡಾರವಿದ್ದಂತೆ. ಹಳೆಗನ್ನಡದಲ್ಲಿ ಸೊಗಸಾಗಿ ಭಾಷಣ ಮಾಡುವಷ್ಟು ಸಾಮರ್ಥ್ಯ ಅವರಿಗಿದೆ. ಪಂಪ, ರನ್ನ ಅವರು ರಚಿಸಿದ ಸಾಹಿತ್ಯವನ್ನು ಆಳವಾಗಿ ಅಧ್ಯಯನ ನಡೆಸಿದ್ದಾರೆ. ‘ಹಂಪನಾ’ ಅವರು ಕುವೆಂಪು ಅಧ್ಯಯನ ಸಂಸ್ಥೆಗೆ ಅಧ್ಯಕ್ಷರಾದ ಮೇಲೆ ಆ ಸಂಸ್ಥೆಗೆ ಮರುಜನ್ಮ ಸಿಕ್ಕಿತು’ ಎಂದು ಹೇಳಿದರು.
ಪತ್ರಕರ್ತ ಪದ್ಮರಾಜ ದಂಡಾವತಿ ಮಾತನಾಡಿ, ‘ತಾಯಿ ಹಾಗೂ ಗುರು ಋಣವನ್ನು ತೀರಿಸಬೇಕಾದ್ದು ಎಲ್ಲರ ಕರ್ತವ್ಯ. ಆದರೆ ಈಗ ಮದುವೆಯಾದ ತಕ್ಷಣವೇ ಪೋಷಕರನ್ನು ಹೊರಗೆ ಕಳುಹಿಸುವ ಕೆಟ್ಟ ಪ್ರವೃತ್ತಿ ಹೆಚ್ಚುತ್ತಿದೆ. ಕಂಬತ್ತಳ್ಳಿ ಸಹೋದರರು ತಮ್ಮ ತಂದೆ–ತಾಯಿ ಹೆಸರಿನಲ್ಲಿ ದತ್ತಿ ಪ್ರಶಸ್ತಿ ಸ್ಥಾಪಿಸಿ, ಪೋಷಕರ ಹೆಸರು ಸದಾ ನೆನಪಿನಲ್ಲಿರುವಂತೆ ಮಾಡಿದ್ದಾರೆ. ಇದು ಶ್ಲಾಘನೀಯ ಕೆಲಸ’ ಎಂದು ಹೇಳಿದರು.
‘ಸಾಹಿತ್ಯ, ಸಂಶೋಧನಾ ಕ್ಷೇತ್ರದಲ್ಲಿ ಹಂಪನಾ ಅವರು ಸೇವೆ ಸ್ಮರಣೀಯ. ಹಂಪನಾ ದಂಪತಿ 65 ವರ್ಷಗಳಿಂದ ಸಾಹಿತ್ಯ ಸೇವೆ ಮಾಡಿದ್ದಾರೆ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಕಾಂದಬರಿಕಾರರು, ವಿಮರ್ಶಕರು ಹಾಗೂ ಕವಿಗಳಿಗೆ ಸಿಕ್ಕಷ್ಟು ಮನ್ನಣೆ ಸಂಶೋಧಕರಿಗೆ ಸಿಗುತ್ತಿಲ್ಲ. ಅವರಿಗೆ ತಡವಾಗಿ ಮನ್ನಣೆಗಳು ಲಭಿಸುತ್ತಿವೆ’ ಎಂದು ಹೇಳಿದರು.
ಡಾ.ಬೈರಮಂಗಲ ರಾಮೇಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.