ಬೆಂಗಳೂರು: ‘ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಡಿಯಲ್ಲಿರುವ ಎಲ್ಲ ಅಕಾಡೆಮಿಗಳು ಮತ್ತು ಪ್ರಾಧಿಕಾರಗಳು ಪ್ರಕಟಿಸುವ ಪುಸ್ತಕಗಳನ್ನು ವಿಶೇಷ ಸಂದರ್ಭಗಳಲ್ಲಿ ಶೇಕಡ 50ರ ರಿಯಾಯಿತಿಯಲ್ಲಿ ಓದುಗರಿಗೆ ಒದಗಿಸಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೋಮವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಕನಕದಾಸರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ, ಪ್ರಶಸ್ತಿಗಳನ್ನು ಪ್ರದಾನ ಮಾಡಿ ಅವರು ಮಾತನಾಡಿದರು.
‘ಕನಕದಾಸರ 500ನೇ ಜಯಂತ್ಯುತ್ಸವವನ್ನು ಆಚರಿಸುವ ಅವಕಾಶ ನನಗೆ ಸಿಕ್ಕಿತ್ತು. ಆ ಸಂದರ್ಭದಲ್ಲಿ ಕನಕದಾಸರ ಕೀರ್ತನೆಗಳನ್ನು ಸುಲಭವಾಗಿ ಜನರ ಕೈಗೆ ತಲುಪಿಸುವ ಕಾರ್ಯವನ್ನು ಮಾಡಲಾಗಿತ್ತು’ ಎಂದು ನೆನಪಿಸಿಕೊಂಡರು.
‘ಸಂವಿಧಾನ, ಪ್ರಜಾಪ್ರಭುತ್ವ, ಜಾತ್ಯತೀತ ತತ್ವಗಳ ಬಗ್ಗೆ ಬಹಳ ಮಂದಿಗೆ ಸ್ಪಷ್ಟತೆ ಇಲ್ಲ. ಇದರಿಂದಾಗಿ ಕೆಲವರು ಅವುಗಳನ್ನು ವಿರೋಧಿಸುತ್ತಿದ್ದಾರೆ. ಸಂವಿಧಾನ ವಿರೋಧಿಗಳು ಮನುಷ್ಯ ವಿರೋಧಿಗಳು’ ಎಂದು ಮುಖ್ಯಮಂತ್ರಿ ಹೇಳಿದರು.
‘ಇತ್ತೀಚಿನ ದಿನಗಳಲ್ಲಿ ವಿದ್ಯಾವಂತರೇ ಜಾತಿವಾದಿಗಳಾಗುತ್ತಿರುವ ಪ್ರವೃತ್ತಿ ಬೇಸರ ತಂದಿದೆ. ಪರಸ್ಪರ ಪ್ರೀತಿಸುವುದನ್ನು ಕಲಿಯಬೇಕು. ಮನುಷ್ಯರೆಲ್ಲ ಒಂದೇ ಎಂದು ನಡೆದರೆ ಅದುವೇ ಗಾಂಧೀಜಿ, ಬಸವ, ಬುದ್ದ ಮತ್ತು ಕನಕರಿಗೆ ನೀಡುವ ಗೌರವ ಎಂದು ಹೇಳಿದರು.
ಪ್ರಶಸ್ತಿ ಪ್ರದಾನ: ಕನಕದಾಸರ ಕುರಿತು ವಿಭಿನ್ನ ಒಳ ನೋಟಗಳು ಇರುವ ಕೃತಿಗಳನ್ನು ರಚಿಸಿರುವ ವ್ಯಾಸನಕೆರೆ ಪ್ರಭಂಜನಾಚಾರ್ಯ ಅವರಿಗೆ 2024ನೇ ಸಾಲಿನ ‘ಕನಕಶ್ರೀ ಪ್ರಶಸ್ತಿ’ಯನ್ನು ಪ್ರದಾನ ಮಾಡಲಾಯಿತು.
‘ಕನಕ ಗೌರವ ಪುರಸ್ಕಾರ’ವನ್ನು ಪುತ್ತೂರಿನ ತಾಳ್ತಜೆ ವಸಂತಕುಮಾರ್ (2021–22), ಹಾವೇರಿಯ ನೀಲಪ್ಪ ಮೈಲಾರಪ್ಪ ಅಂಬಲಿಯವರ (2022–23), ಬೆಂಗಳೂರಿನ ಎಚ್.ಎನ್. ಮುರಳೀಧರ (2023–24) ಹಾಗೂ ತುಮಕೂರಿನ ಜಿ.ವಿ. ಆನಂದಮೂರ್ತಿ (2024–25) ಅವರಿಗೆ ಪ್ರದಾನ ಮಾಡಲಾಯಿತು. ‘ಕನಕ ಯುವ ಪುರಸ್ಕಾರ’ವನ್ನು ಮೈಸೂರಿನ ಅನಿಲ್ ಕುಮಾರ್ (2021–22), ಚಿಕ್ಕಮಗಳೂರಿನ ಚಿಕ್ಕಮಗಳೂರು ಗಣೇಶ್ (2022–23) ಹಾಗೂ ವಿಜಯನಗರ ಜಿಲ್ಲೆಯ ಉಮೇಶ ಎಂ. (2023–24) ಅವರಿಗೆ ಪ್ರದಾನ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.