ADVERTISEMENT

ಸಾಂಸ್ಕೃತಿಕ ಅಕಾಡೆಮಿಗಳಿಗೆ ಕೊನೆಗೂ ನೇಮಕ

ಕನ್ನಡ ಅಭಿವೃದ್ಧಿ ಪ್ರಾಧಿಕಾರ‌ಕ್ಕೆ ಬಿಳಿಮಲೆ, ಭಾಷಾ ಭಾರತಿಗೆ ಚನ್ನಪ್ಪಕಟ್ಟಿ, ಪುಸ್ತಕ ಪ್ರಾಧಿಕಾರಕ್ಕೆ ಮಾನಸ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2024, 16:21 IST
Last Updated 16 ಮಾರ್ಚ್ 2024, 16:21 IST
ಪುರುಷೋತ್ತಮ ಬಿಳಿಮಲೆ
ಪುರುಷೋತ್ತಮ ಬಿಳಿಮಲೆ   

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯ ವಿವಿಧ ಅಕಾಡೆಮಿ ಹಾಗೂ ಪ್ರಾಧಿಕಾರಗಳಿಗೆ ಅಧ್ಯಕ್ಷ, ಸದಸ್ಯರನ್ನು ನೇಮಿಸಿ ಕಡೆಗೂ ಆದೇಶ ಹೊರಡಿಸಲಾಗಿದೆ.

ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆಯಾಗಿ ಹತ್ತು ತಿಂಗಳಾದ ಬಳಿಕ ಈ ನೇಮಕಾತಿ ನಡೆದಿದೆ. ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿ ಕಾರಣ ಶುಕ್ರವಾರವೇ ಪಟ್ಟಿಯನ್ನು ಅಂತಿಮಗೊಳಿಸಿ, ಆದೇಶಿಸಲಾಗಿದೆ. ಈ ಪಟ್ಟಿಯನ್ನು ಇಲಾಖೆ ಶನಿವಾರ ಬಿಡುಗಡೆ ಮಾಡಿದೆ. 2022ರ ಅ.15ರಂದೇ ಕಳೆದ ಕಾರ್ಯಕಾರಿ ಸಮಿತಿಯ ಅವಧಿ ಮುಕ್ತಾಯಗೊಂಡಿತ್ತು. ಇದರಿಂದಾಗಿ ಅಕಾಡೆಮಿ, ಪ್ರಾಧಿಕಾರಗಳಿಗೆ ಇಲಾಖೆಯ ಜಂಟಿ ನಿರ್ದೇಶಕರನ್ನು ಆಡಳಿತಾಧಿಕಾರಿಗಳನ್ನಾಗಿ ನೇಮಕ ಮಾಡಿ, ಆದೇಶಿಸಲಾಗಿತ್ತು. ನೂತನ ಸರ್ಕಾರ ರಚನೆಯಾದ ಬಳಿಕ ಅಕಾಡೆಮಿ–ಪ್ರಾಧಿಕಾರಗಳ ಅಧ್ಯಕ್ಷ ಸ್ಥಾನಕ್ಕೆ ಲಾಬಿ ಹೆಚ್ಚಿದ್ದ ಕಾರಣ ಸಾಹಿತಿಗಳನ್ನೊಳಗೊಂಡ ಶೋಧನಾ ಸಮಿತಿಯನ್ನು ಸರ್ಕಾರ ರಚಿಸಿತ್ತು. ಆ ಸಮಿತಿಯ ಶಿಫಾರಸಿನ ಆಧಾರದಲ್ಲಿ ನೇಮಕ ಮಾಡಲಾಗಿದೆ. 

14 ಅಕಾಡೆಮಿಗಳು, 4 ಪ್ರಾಧಿಕಾರಗಳಿಗೆ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಕ ಮಾಡಲಾಗಿದೆ. ರಂಗಸಮಾಜಕ್ಕೆ ಏಳು ಮಂದಿಯನ್ನು ನೇಮಿಸಲಾಗಿದೆ. ಈ ನೇಮಕಾತಿಯು ಮುಂದಿನ ಆದೇಶ ಅಥವಾ ಮೂರು ವರ್ಷಗಳ ಅವಧಿಗೆ ಜಾರಿಯಲ್ಲಿ ಇರಲಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ಹೆಚ್ಚಿನ ಲಾಬಿ ನಡೆದಿತ್ತು. ಈ ಸ್ಥಾನಕ್ಕೆ ದೆಹಲಿಯ ಜೆಎನ್‌ಯು ನಿವೃತ್ತ ಪ್ರಾಧ್ಯಾಪಕ, ಸುಳ್ಯದವರಾದ ಪುರುಷೋತ್ತಮ ಬಿಳಿಮಲೆ ಅವರನ್ನು ನೇಮಿಸಲಾಗಿದೆ. 

ADVERTISEMENT

ಕೆಲದಿನಗಳ ಹಿಂದಷ್ಟೇ ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಅವರು ಉಡುಪಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ‘ಕಾಂಗ್ರೆಸ್ ಕಟ್ಟಾಳು, ಪಕ್ಷದ ಬಾವುಟ ಹಿಡಿದು ದುಡಿದವರಿಗೆ ಅಕಾಡೆಮಿಗಳಲ್ಲಿ ಅವಕಾಶ ಕಲ್ಪಿಸಲಾಗುವುದು’ ಎಂದು ಭರವಸೆ ನೀಡಿದ್ದರು. ಇದರ ಬೆನ್ನಲ್ಲಿಯೇ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರಕ್ಕೆ ವಿಜಯಪುರದ ಚನ್ನಪ್ಪ ಕಟ್ಟಿ, ಕರ್ನಾಟಕ ನಾಟಕ ಅಕಾಡೆಮಿಗೆ ಕೆ.ವಿ. ನಾಗರಾಜಮೂರ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಗೆ ಎಲ್‌.ಎನ್. ಮುಕುಂದರಾಜ್, ಕನ್ನಡ ಪುಸ್ತಕ ಪ್ರಾಧಿಕಾರಕ್ಕೆ ಮೈಸೂರಿನ ಮಾನಸ, ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿಗೆ ಕೃಪಾ ಫಡ್ಕೆ, ಕರ್ನಾಟಕ ಲಲಿತಕಲಾ ಅಕಾಡೆಮಿಗೆ ಪ.ಸ.ಕುಮಾರ್ ಅಧ್ಯಕ್ಷರಾಗಿ ನೇಮಕರಾಗಿದ್ದಾರೆ. 

ಕರ್ನಾಟಕ ರಾಜ್ಯ ಗಡಿ ಪ್ರದೇಶದ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ಶಿಗ್ಗಾವಿಯ ಕಾಂಗ್ರೆಸ್ ಮುಖಂಡ ಸೋಮಣ್ಣ ಬೇವಿನಮರದ ಅವರನ್ನು ಸರ್ಕಾರ ಕಳೆದ ತಿಂಗಳು ನೇಮಿಸಿ ಆದೇಶ ಹೊರಡಿಸಿತ್ತು. ಈಗ ಸದಸ್ಯರನ್ನು ನೇಮಕ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.