ಬೆಂಗಳೂರು: ನಶಿಸುತ್ತಿರುವ ತಳಸಮುದಾಯಗಳ ವಿಶಿಷ್ಟ ಕಲೆಗಳನ್ನು ಮುನ್ನೆಲೆಗೆ ತರಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಮುಂದಾಗಿದೆ.
ಈ ಸಂಬಂಧ ಇಲಾಖೆ ಪ್ರತ್ಯೇಕವಾಗಿ ಯೋಜನೆ ರೂಪಿಸಿ, ನಶಿಸುತ್ತಿರುವ ಕಲೆಗಳನ್ನು ಗುರುತಿಸಲಾರಂಭಿಸಿದೆ. ಈಗಾಗಲೇ ಕೆಲವು ಕಲೆಗಳನ್ನು ಗುರುತಿಸಲಾಗಿದೆ. ಈ ಕಲೆಗಳಲ್ಲಿ ಬಹುತೇಕವು ಜಾನಪದ ಪ್ರಕಾರಕ್ಕೆ ಸೇರಿವೆ. ಅಂಟಿಕೆ ಪಿಂಟಿಕೆ ಸೇರಿ ಗುರುತಿಸಲಾದ ಕಲೆಗಳಲ್ಲಿ ಕಲಾವಿದರ ಪಟ್ಟಿಯನ್ನೂ ಅಕಾಡೆಮಿಗಳ ನೆರವಿನಿಂದ ಸಿದ್ಧಪಡಿಸಲಾಗಿದೆ. ಈ ಕಲಾವಿದರ ನೆರವಿನಿಂದ ಸಮುದಾಯದ ಆಸಕ್ತರಿಗೆ ಕಲೆಯ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತದೆ. ತರಬೇತಿ ಪೂರ್ಣಗೊಂಡ ಬಳಿಕ ವಲಯ ಹಾಗೂ ರಾಜ್ಯಮಟ್ಟದಲ್ಲಿ ಕಲಾ ಪ್ರದರ್ಶನಕ್ಕೆ ವೇದಿಕೆಗಳನ್ನು ಇಲಾಖೆಯೇ ಕಲ್ಪಿಸಲಿದೆ.
ದುರ್ಗಮುರ್ಗಿ, ಜೋಗಿ ಪದ, ಲಾವಣಿ ಪದ,ಅಂಟಿಕೆ ಪಿಂಟಿಕೆ, ಮಾರಿ ಕುಣಿತ, ಚೌಡಿಕೆ ಪದ, ಸೋಬಾನೆ ಪದ, ಹೆಜ್ಜೆ ಮೇಳ,ಬುರ್ರಕಥಾ, ಹಗಲುವೇಷ, ಭೂತೇರ ನೃತ್ಯ ಸೇರಿಸುಮಾರು 40 ಕಲೆಗಳನ್ನು ಇಲಾಖೆ ಪಟ್ಟಿ ಮಾಡಿದೆ. ಗುರುತಿಸಲಾದ ಹೆಚ್ಚಿನ ಕಲೆಗಳು ಉತ್ತರ ಕರ್ನಾಟಕ ಭಾಗದಲ್ಲಿ ಪ್ರಚಲಿತದಲ್ಲಿದ್ದ ಕಲೆಗಳಾಗಿವೆ.ಈ ಕಲೆಗಳನ್ನು ಪ್ರದರ್ಶಿಸುತ್ತಿದ್ದ ಸಮುದಾಯದ ಎಲ್ಲ ವಯೋಮಾನದ ಆಸಕ್ತರಿಗೆ ಕಲಿಕಾ ಶಿಬಿರದಲ್ಲಿ ಅವಕಾಶ ಕಲ್ಪಿಸಲಾಗುತ್ತದೆ. ಮುಂಬರುವ ಜನವರಿಯಿಂದ ರಾಜ್ಯದ ವಿವಿಧೆಡೆ ಈ ಶಿಬಿರ ನಡೆಯಲಿದೆ.
ಕಲೆಗೆ ಪ್ರೋತ್ಸಾಹ: ‘ಜಾನಪದ ಸೇರಿ ವಿವಿಧ ಅಕಾಡೆಮಿಗಳ ನೆರವಿನಿಂದನಶಿಸುತ್ತಿರುವ ಕಲೆಗಳನ್ನು ಗುರುತಿಸುತ್ತಿದ್ದೇವೆ.ಆಧುನಿಕತೆಯ ಭರಾಟೆಯಲ್ಲಿ ಯುವ ಜನಾಂಗ ನಮ್ಮ ಜನಪದ ಕಲೆಗಳನ್ನು ಮರೆಯುತ್ತಿದೆ. ಆದ್ದರಿಂದ ದುರ್ಗಮುರ್ಗಿ ಜನಾಂಗ ಸೇರಿ ವಿವಿಧ ಸಮುದಾಯಗಳನಶಿಸುತ್ತಿರುವ ಅಪರೂಪದ ಕಲೆಗಳನ್ನು ಮುನ್ನೆಲೆಗೆ ತರಲು ಕ್ರಮವಹಿಸಿದ್ದೇವೆ. ಈ ಯೋಜನೆಯಿಂದ ಕಲೆಯನ್ನೇ ವೃತ್ತಿಯಾಗಿಸಿಕೊಂಡಿರುವ ಕಲಾವಿದರಿಗೂ ಪ್ರೋತ್ಸಾಹ ಸಿಗಲಿದೆ’ ಎಂದು ಇಲಾಖೆಯ ಜಂಟಿ ನಿರ್ದೇಶಕ ಬಲವಂತರಾವ್ ಪಾಟೀಲ ತಿಳಿಸಿದರು.
‘ಗ್ರಾಮೀಣ ಪ್ರದೇಶದಲ್ಲಿ ಅಂಟಿಕೆ ಪಿಂಟಿಕೆ, ಗೀಗೀ ಪದ, ಲಾವಣಿ ಸೇರಿ ವಿವಿಧ ಕಲೆಗಳ ಹಲವಾರು ಕಲಾವಿದರಿದ್ದಾರೆ. ಸದ್ಯ ಕಲೆಯನ್ನೇ ನಂಬಿಕೊಂಡಿರುವ ಸಮುದಾಯದವರಿಗೆ ಮಾತ್ರ ಕಲೆ ಕಲಿಸುತ್ತೇವೆ.ಮುಂದಿನ ದಿನಗಳಲ್ಲಿ ಬೇರೆ ಸಮುದಾಯದ ಆಸಕ್ತರಿಗೂ ಕಲಿಸಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.