ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ‘ಧನಸಹಾಯ’ ಯೋಜನೆಯಡಿ 2022–23ನೇ ಸಾಲಿನಲ್ಲಿ ಕೆಲ ಸಾಂಸ್ಕೃತಿಕ ಸಂಘ–ಸಂಸ್ಥೆಗಳಿಗೆ ಜಿಲ್ಲಾ ಸಮಿತಿಯ ಶಿಫಾರಸಿಗಿಂತ ಅಧಿಕ ಅನುದಾನವನ್ನು ಬಿಡುಗಡೆ ಮಾಡಿದೆ.
ನಾಡಿನ ಕಲೆ, ಸಾಹಿತ್ಯ, ಸಂಗೀತ, ಜಾನಪದ, ನೃತ್ಯ, ಕಲಾ ಪ್ರಕಾರಗಳನ್ನು ಉಳಿಸಿ ಬೆಳೆಸುವ ಸಲುವಾಗಿ, ನೋಂದಾಯಿತ ಸಂಘ–ಸಂಸ್ಥೆಗಳು ಏರ್ಪಡಿಸುವ ಕಾರ್ಯಕ್ರಮಗಳಿಗೆ ಸರ್ಕಾರ ನಿಯಮಿತವಾಗಿ ಅನುದಾನ ಒದಗಿಸುತ್ತಿದೆ. ಈ ಅನುದಾನ ಪಡೆಯಲು ನೋಂದಾಯಿತ ಸಂಘ–ಸಂಸ್ಥೆಗಳು ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಿ, ನಡೆಸಿರುವ ಕಾರ್ಯಕ್ರಮಗಳ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟಗೊಂಡ ವಿವರ ಸೇರಿದಂತೆ ಅಗತ್ಯ ದಾಖಲಾತಿಗಳ ಸ್ಕ್ಯಾನ್ ಪ್ರತಿಗಳನ್ನು ಒದಗಿಸಬೇಕು. ಇಲಾಖೆಯ ವಲಯ ಜಂಟಿ ನಿರ್ದೇಶಕರ ಅಧ್ಯಕ್ಷತೆಯ ಜಿಲ್ಲಾ ಸಮಿತಿಯು ಸಂಘ–ಸಂಸ್ಥೆಗಳ ಕಾರ್ಯಚಟುವಟಿಕೆಗಳನ್ನು ಪರಿಶೀಲಿಸಿ, ಅಗತ್ಯ ಅನುದಾನಕ್ಕೆ ಶಿಫಾರಸು ಮಾಡಲಿದೆ. ಆದರೆ, ಕಳೆದ ಸಾಲಿನಲ್ಲಿ ಜಿಲ್ಲಾ ಸಮಿತಿ ಶಿಫಾರಸು ಮಾಡಿದ ಅನುದಾನಕ್ಕಿಂತ ಹೆಚ್ಚಿನ ಅನುದಾನ ಕೆಲ ಸಂಘ–ಸಂಸ್ಥೆಗಳಿಗೆ ಇಲಾಖೆ ಮಂಜೂರು ಮಾಡಿದೆ.
ಕಳೆದ ಸಾಲಿನಲ್ಲಿ ಜಿಲ್ಲಾ ಸಮಿತಿ ಶಿಫಾರಸು ಮಾಡಿದ ಅನುದಾನಕ್ಕಿಂತ ₹1 ಲಕ್ಷದಿಂದ ₹2 ಲಕ್ಷದವರೆಗೆ ಹೆಚ್ಚುವರಿ ಅನುದಾನವನ್ನು 20ಕ್ಕೂ ಅಧಿಕ ಸಂಸ್ಥೆಗಳಿಗೆ ಮಂಜೂರು ಮಾಡಲಾಗಿದೆ. ಇಲಾಖೆಯ ಈ ಕ್ರಮ ಕಲಾವಿದರ ಅಸಮಾಧಾನಕ್ಕೆ ಕಾರಣವಾಗಿದೆ.
ಲೋಕಾಯುಕ್ತಕ್ಕೆ ದೂರು: ಜಿಲ್ಲಾ ಸಮಿತಿ ಶಿಫಾರಸು ಮಾಡಿದ ಅನುದಾನಕ್ಕಿಂತ ಅಧಿಕ ಅನುದಾನವನ್ನು ಮಂಜೂರು ಮಾಡಿರುವುದಕ್ಕೆ ಕಲಾವಿದರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಜಿಲ್ಲಾ ಸಮಿತಿ ಶಿಫಾರಸು ಮಾಡಿದ ಅನುದಾನಕ್ಕಿಂತ ಹೆಚ್ಚುವರಿ ಅನುದಾನ ನೀಡಿರುವುದಕ್ಕೆ ಸೂಕ್ತ ತನಿಖೆ ನಡೆಸಬೇಕೆಂದು ಆಗ್ರಹಿಸಿ, ದಾಖಲೆಗಳನ್ನು ಸಲ್ಲಿಸಿದ್ದಾರೆ. ₹2 ಲಕ್ಷದಿಂದ ₹3 ಲಕ್ಷದವರೆಗೆ ಅನುದಾನಕ್ಕೆ ಶಿಫಾರಸು ಮಾಡಲಾಗಿದ್ದ ಸಂಘ–ಸಂಸ್ಥೆಗಳಿಗೆ, ₹5 ಲಕ್ಷದವರೆಗೆ ಅನುದಾನ ಮಂಜೂರು ಮಾಡಿರುವ ಸಂಘ–ಸಂಸ್ಥೆಗಳ ಪಟ್ಟಿಯನ್ನೂ ದೂರಿನ ಜತೆಗೆ ಒದಗಿಸಿದ್ದಾರೆ.
‘ಇಲಾಖೆಯ ಈ ರೀತಿಯ ನಡೆಯಿಂದ ನಿಯಮಿತವಾಗಿ ಸಾಂಸ್ಕೃತಿಕ ಚಟುವಟಿಕೆ ನಡೆಸುತ್ತಿರುವ ಸಂಘ–ಸಂಸ್ಥೆಗಳು ಧನಸಹಾಯ ಯೋಜನೆಯ ಬಗ್ಗೆ ವಿಶ್ವಾಸ ಕಳೆದುಕೊಳ್ಳುತ್ತಿವೆ. ಪ್ರಭಾವ ಬಳಸಿದವರಿಗೆ ಅನುದಾನ ಎಂಬ ವಾತಾವರಣ ನಿರ್ಮಾಣವಾಗಿದೆ. ನಿಯಮಿತವಾಗಿ ಕಾರ್ಯಕ್ರಮಗಳನ್ನು ನಡೆಸಿ, ಧನಸಹಾಯಕ್ಕೆ ಅರ್ಜಿ ಸಲ್ಲಿಸಿದವರಿಗೆ ಆರ್ಥಿಕ ನೆರವಿನ ಖಚಿತತೆ ಇಲ್ಲವಾಗಿದೆ’ ಎಂದು ಕಲಾವಿದ ಜಯಸಿಂಹ ಎಸ್. ಬೇಸರ ವ್ಯಕ್ತಪಡಿಸಿದರು.
ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಅವರನ್ನು ಪ್ರತಿಕ್ರಿಯೆಗಾಗಿ ಸಂಪರ್ಕಿಸಲು ಯತ್ನಿಸಿದರೂ ಅವರು ಲಭ್ಯರಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.