ಬೆಂಗಳೂರು: ವಿಧಾನಸಭೆ ಚುನಾವಣೆಯಿಂದಾಗಿ ನಗರದಲ್ಲಿ ಕುಂಠಿತಗೊಂಡಿದ್ದ ಸಾಂಸ್ಕೃತಿಕ ಚಟುವಟಿಕೆಗಳು ಈಗ ಗರಿಗೆದರಿದ್ದು, ರವೀಂದ್ರ ಕಲಾಕ್ಷೇತ್ರ ಸೇರಿ ವಿವಿಧ ಸರ್ಕಾರಿ ರಂಗಮಂದಿರಗಳಿಗೆ ಬೇಡಿಕೆ ಹೆಚ್ಚಿದೆ.
ಚುನಾವಣಾ ಆಯೋಗವು ಮಾರ್ಚ್ 29ರಿಂದ ಮೇ 15ರವರೆಗೆ ಚುನಾವಣೆ ನೀತಿ ಸಂಹಿತೆಯನ್ನು ಜಾರಿ ಮಾಡಿತ್ತು. ಇದರಿಂದಾಗಿ ಪೂರ್ವನಿಯೋಜಿತ ಕೆಲ ಕಾರ್ಯಕ್ರಮಗಳನ್ನು ಮುಂದೂಡಲಾಗಿತ್ತು. ಚುನಾವಣಾ ಆಯೋಗದಿಂದ ಅನುಮತಿ ಪತ್ರ ಪಡೆಯಬೇಕೆಂಬ ಕಾರಣಕ್ಕೆ ಕೆಲ ಸಂಘ–ಸಂಸ್ಥೆಗಳು ಕಾರ್ಯಕ್ರಮಗಳನ್ನು ನಡೆಸಿರಲಿಲ್ಲ. ಈಗ ಸಂಘ–ಸಂಸ್ಥೆಗಳು ಕಾರ್ಯಕ್ರಮ ನಡೆಸಲು ಆಸಕ್ತಿ ತಾಳಿವೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು 2022–23ನೇ ಸಾಲಿನ ಧನಸಹಾಯಕ್ಕೆ ಸಂಬಂಧಿಸಿದಂತೆ ಮಾರ್ಚ್ ತಿಂಗಳಲ್ಲಿ ಆದೇಶ ಹೊರಡಿಸಿ, ಹಣ ಬಿಡುಗಡೆ ಮಾಡಿತ್ತು. ಇದರಿಂದಾಗಿಯೂ ಸಂಘ–ಸಂಸ್ಥೆಗಳು ಕಾರ್ಯಕ್ರಮ ನಡೆಸಲು ಉತ್ಸಾಹ ತೋರಿವೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ರಂಗಮಂದಿರಗಳ ಕಾಯ್ದಿರಿಸುವಿಕೆಗೆ ಸಂಬಂಧಿಸಿದಂತೆ ಪ್ರತ್ಯೇಕ ಪೋರ್ಟಲ್ ರೂಪಿಸಿ, ಅವಕಾಶ ಕಲ್ಪಿಸಿದೆ. ಮೂರು ತಿಂಗಳು ಮುಂಚಿತವಾಗಿ ಕಾಯ್ದಿರಿಸಬಹುದಾಗಿದೆ. ಎಲ್ಲಾ ಪ್ರಕ್ರಿಯೆಗಳು ಆನ್‌ಲೈನ್ ಮೂಲಕ ನಡೆಯಲಿದೆ. ರವೀಂದ್ರ ಕಲಾಕ್ಷೇತ್ರ ಈಗಾಗಲೇ ಜೂನ್ ತಿಂಗಳಲ್ಲಿ 24 ಹಾಗೂ ಜುಲೈ ತಿಂಗಳಲ್ಲಿ 17 ದಿನಗಳು ಕಾಯ್ದಿರಿಸಲಾಗಿದೆ. ಇದೇ ರೀತಿ ನಯನ ಸಭಾಂಗಣ 16 ಹಾಗೂ 9, ಕಲಾಗ್ರಾಮದಲ್ಲಿರುವ ಸಾಂಸ್ಕೃತಿಕ ಸಮುಚ್ಚಯ 12 ಹಾಗೂ 9 ದಿನ ಕಾಯ್ದಿರಿಸಲ್ಪಟ್ಟಿವೆ. ಕೆಲ ದಿನ ಬೆಳಿಗ್ಗೆ ಮತ್ತು ಸಂಜೆ ಕಾರ್ಯಕ್ರಮವಿದೆ.
ಠೇವಣಿ ಹಣ ವಾಪಸ್: ಸರ್ಕಾರಿ ರಂಗಮಂದಿರಗಳ ಕಾಯ್ದಿರಿಸುವಿಕೆಯಲ್ಲಿ ಪಾರದರ್ಶಕತೆ ತರಲು 2022ರ ಏ.1ರಿಂದ ಆನ್‌ಲೈನ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಸರ್ಕಾರಿ ನಿಯಮಗಳ ಅನುಸಾರ ನಿಗದಿಯಾದ ಕಾರ್ಯಕ್ರಮ ನಿಂತಲ್ಲಿ, ಹಣ ಹಿಂತಿರುಗಿಸುವ ಬದಲು, ಮತ್ತೊಂದು ದಿನಾಂಕ ಆಯ್ಕೆಗೆ ಅವಕಾಶ ನೀಡಲಾಗುತ್ತಿದೆ. ಮೂರು ದಿನಗಳಿಗಿಂತಲೂ ಹೆಚ್ಚಿನ ಅವಧಿ ಸತತವಾಗಿ ಸಭಾಂಗಣ ಕಾಯ್ದಿರಿಸಲು ಅವಕಾಶವಿಲ್ಲ.
ರವೀಂದ್ರ ಕಲಾಕ್ಷೇತ್ರದಲ್ಲಿ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ತಲಾ 28 ದಿನಗಳು ಕಾಯ್ದಿರಿಸಲಾಗಿದೆ. ಅದೇ ರೀತಿ, ನಯನ ಸಭಾಂಗಣ 26 ಹಾಗೂ 17 ದಿನಗಳು, ಕಲಾಗ್ರಾಮದಲ್ಲಿರುವ ಸಾಂಸ್ಕೃತಿಕ ಸಮುಚ್ಚಯ 18 ಹಾಗೂ 22 ದಿನಗಳು ಮುಂಚಿತವಾಗಿ ಬುಕ್ಕಿಂಗ್ ಆಗಿದ್ದವು. ಚುನಾವಣೆ ನೀತಿ ಸಂಹಿತೆ ಕಾರಣ ಕೆಲ ಸಂಸ್ಥೆಗಳು ಕಾರ್ಯಕ್ರಮ ರದ್ದು ಮಾಡಿದ್ದವು. ಆ ಸಂಸ್ಥೆಗಳಿಗೆ ಠೇವಣಿ ಹಣ ಮಾತ್ರ ವಾಪಸ್ ನೀಡಲಾಗಿದೆ. ಇಲಾಖೆ ವತಿಯಿಂದಲೇ ಕಾರ್ಯಕ್ರಮ ರದ್ದುಗೊಳಿಸಿದರೆ ಠೇವಣಿ ಜತೆಗೆ ಬಾಡಿಗೆ ಹಣ, ಜಿಎಸ್‌ಟಿ ಮೊತ್ತವನ್ನೂ ಮರಳಿಸಲಾಗುತ್ತದೆ.
ಸರ್ಕಾರಿ ರಂಗಮಂದಿರಗಳಿಗೆ ಬೇಡಿಕೆ ಹೆಚ್ಚಿದೆ. ರವೀಂದ್ರ ಕಲಾಕ್ಷೇತ್ರದ ಬಾಡಿಗೆ ಕೊಂಚ ಏರಿಸಿದರೂ ಕಲೆಗೆ ಪ್ರೋತ್ಸಾಹಿಸಲು ಕಡಿಮೆ ಬಾಡಿಗೆಯನ್ನೇ ನಿಗದಿ ಮಾಡಲಾಗಿದೆ.ಎನ್. ನರೇಂದ್ರ ಬಾಬು ರವೀಂದ್ರ ಕಲಾಕ್ಷೇತ್ರದ ವ್ಯವಸ್ಥಾಪಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.