ADVERTISEMENT

ಚೇತರಿಕೆಯತ್ತ ಕನ್ನಡ ಪುಸ್ತಕೋದ್ಯಮ; ಆನ್‌ಲೈನ್ ಮಾರುಕಟ್ಟೆ ವಿಸ್ತರಣೆ

ಪುಸ್ತಕಗಳ ಮಾರಾಟ ಶೇ 40ರಷ್ಟು ಹೆಚ್ಚಳ

ವರುಣ ಹೆಗಡೆ
Published 13 ಡಿಸೆಂಬರ್ 2020, 20:37 IST
Last Updated 13 ಡಿಸೆಂಬರ್ 2020, 20:37 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕೋವಿಡ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ಕನ್ನಡ ಪುಸ್ತಕೋದ್ಯಮ ಚೇತರಿಕೆಯ ಹಾದಿ ಹಿಡಿದಿದ್ದು, ಎರಡು ತಿಂಗಳಿನಿಂದ ಪುಸ್ತಕಗಳ ಮಾರಾಟ ಶೇ 40 ರಷ್ಟು ಏರಿಕೆ ಕಂಡಿದೆ.

ರಾಜ್ಯದಲ್ಲಿ ಮಾರ್ಚ್‌ ತಿಂಗಳಲ್ಲಿ ಕೋವಿಡ್‌ ಪ್ರಕರಣಗಳು ವರದಿಯಾದ ಬಳಿಕ ಸರ್ಕಾರವು ಲಾಕ್‌ಡೌನ್‌ ಘೋಷಿಸಿತ್ತು. ಲಾಕ್‌ಡೌನ್‌ನಿಂದಾಗಿ ವ್ಯಾಪಾರ ವಹಿವಾಟುಗಳು ಸಂಪೂರ್ಣ ಸ್ತಬ್ಧವಾಗಿದ್ದವು. ಇದಕ್ಕೆ ಪುಸ್ತಕೋದ್ಯಮ ಕೂಡ ಹೊರತಾಗಿರಲಿಲ್ಲ. ಪುಸ್ತಕಗಳ ಸಗಟು ಮಾರಾಟ ನಿಂತ ಪರಿಣಾಮ ಶೇ 80 ರಷ್ಟು ಪುಸ್ತಕ ಮಾರಾಟ ಕುಸಿತ ಕಂಡಿತ್ತು. ಇದರಿಂದ ಪ್ರಕಾಶಕರು ಹಾಗೂ ಮಾರಾಟಗಾರರು ಕಂಗಾಲಾಗಿದ್ದರು. ಆಗಸ್ಟ್, ಸೆಪ್ಟೆಂಬರ್ ವರೆಗೂ ಇದೇ ಪರಿಸ್ಥಿತಿಯಿತ್ತು.

ಕೋವಿಡ್‌ ಪ್ರಕರಣಗಳ ಇಳಿಕೆ, ರಿಯಾಯಿತಿ ದರದಲ್ಲಿ ಮಾರಾಟ ಹಾಗೂ ಆನ್‌ಲೈನ್ ವೇದಿಕೆಯು ಪುಸ್ತಕೋದ್ಯಮ ಚೇತರಿಸಿಕೊಳ್ಳಲು ನೆರವಾಗಿದ್ದು, ಏಪ್ರಿಲ್, ಮೇ ತಿಂಗಳಿಗೆ ಹೋಲಿಕೆ ಮಾಡಿದಲ್ಲಿ ಪುಸ್ತಕ ಮಾರಾಟವು ಶೇ 40ರಿಂದ ಶೇ 50ರಷ್ಟು ಚೇತರಿಕೆ ಕಂಡಿದೆ. ಆನ್‌ಲೈನ್ ಮಾರಾಟ ವ್ಯವಸ್ಥೆಯಡಿ ಪುಸ್ತಕ ಖರೀದಿಸುವವರ ಸಂಖ್ಯೆ ಏರಿಕೆ ಕಾಣುತ್ತಿರುವ ಕಾರಣ ಎರಡು ತಿಂಗಳಲ್ಲಿ ಪುಸ್ತಕೋದ್ಯಮವು ಕೋವಿಡ್‌ ಪೂರ್ವದ ಸ್ಥಿತಿಗೆ ತಲುಪಲಿದೆ ಎಂಬ ಲೆಕ್ಕಾಚಾರದಲ್ಲಿದ್ದಾರೆ ಪ್ರಕಾಶಕರು.

ADVERTISEMENT

ಓದುಗರ ಸಂಖ್ಯೆ ಹೆಚ್ಚಳ: ‘ಕೋವಿಡ್‌ನಿಂದಾಗಿ ಹಲವಾರು ಪ್ರಕಾಶನ ಸಂಸ್ಥೆಗಳು ಸಂಕಷ್ಟಕ್ಕೆ ಸಿಲುಕಿದ್ದವು. ಈ ವೇಳೆ ಸರ್ಕಾರ ಅಥವಾ ಪುಸ್ತಕ ಹಾಗೂ ಸಾಹಿತ್ಯ ಕೇಂದ್ರಿತ ಸರ್ಕಾರಿ ಸಂಸ್ಥೆಗಳು ನಮ್ಮ ನೆರವಿಗೆ ಬರಲಿಲ್ಲ. ಇದರಿಂದ ಈ ಉದ್ಯಮವನ್ನು ಹೇಗೆ ಮುನ್ನಡೆಸುವುದು ಎಂಬ ಪ್ರಶ್ನೆಗಳು ಕಾಡಿದ್ದವು. ಆದರೆ, ಈ ಸಂದರ್ಭದಲ್ಲಿ ಬಹುತೇಕ ಜನರು ಮನೆಯಲ್ಲಿಯೇ ಸಮಯ ಕಳೆದಿದ್ದರಿಂದ ಓದುವ ಹವ್ಯಾಸ ರೂಢಿಸಿಕೊಂಡಿದ್ದಾರೆ. ಇದರಿಂದ ನಮ್ಮ ಕಳವಳ ದೂರವಾಗಿದ್ದು, ಪುಸ್ತಕ ಖರೀದಿ ಹೆಚ್ಚಳಕ್ಕೆ ಕೂಡ ಸಹಕಾರಿಯಾಯಿತು’ ಎನ್ನುತ್ತಾರೆ ಪ್ರಕಾಶಕರು.

ಕರ್ನಾಟಕ ಪ್ರಕಾಶಕ ಸಂಘದ ಅಧ್ಯಕ್ಷ ಪ್ರಕಾಶ್ ಕಂಬತ್ತಳ್ಳಿ, ‘ಕೋವಿಡ್ ಬಳಿಕ ಪುಸ್ತಕಗಳ ಮಾರಾಟವು ಶೇ 20ಕ್ಕೆ ಇಳಿಕೆಯಾಗಿತ್ತು. ಈಗ ಚೇತರಿಕೆ ಕಾಣುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪುಸ್ತಕಗಳ ಬಗ್ಗೆ ಸಾಹಿತ್ಯಾಸಕ್ತರು ಹಾಗೂ ಲೇಖಕರು ಪ್ರಚಾರ ಮಾಡು
ತ್ತಿರುವುದರಿಂದ ಆನ್‌ಲೈನ್ ಮೂಲಕ ಖರೀದಿಸುವವರ ಸಂಖ್ಯೆಯೂ ಹೆಚ್ಚಳವಾಗಿದೆ. ಆದರೆ, ಅಲ್ಲಿ ಕೆಲವೊಂದು ಲೇಖಕರ ಇತ್ತೀಚಿನ ಪುಸ್ತಕಗಳಿಗೆ ಮಾತ್ರ ಹೆಚ್ಚಿನ ಬೇಡಿಕೆಯಿದೆ. ಪುಸ್ತಕ ಪ್ರೇಮಿಗಳು ಮಳಿಗೆಗೆ ಬಂದಲ್ಲಿ ತಮಗೆ ಬೇಕಿರುವ ಪುಸ್ತಕಗಳ ಜತೆಗೆ ಬೇರೆ ಪುಸ್ತಕಗಳನ್ನು ಕೊಳ್ಳುವ ಸಾಧ್ಯತೆ ಇರುತ್ತದೆ. ಕಳೆದ ತಿಂಗಳಿನಿಂದ ಮಳಿಗೆಗೆ ಬರುವವರ ಸಂಖ್ಯೆಯಯೂ ಏರಿಕೆ ಕಂಡಿದೆ’ ಎಂದು ತಿಳಿಸಿದರು.

ಸೃಷ್ಟಿ ಪ್ರಕಾಶನದ ಸೃಷ್ಟಿ ನಾಗೇಶ್, ‘ಆನ್‌ಲೈನ್‌ ಮೂಲಕ ಪುಸ್ತಕ ಖರೀದಿಸುವವರ ಸಂಖ್ಯೆ ಹೆಚ್ಚಳವಾಗಿದೆ. ಹಳೆಯ ಪುಸ್ತಕಗಳಿಗೆ ಕೂಡ ಬೇಡಿಕೆ ಬಂದಿದ್ದು, ಇದು ಆಶಾದಾಯಕ ಬೆಳವಣಿಗೆ. ಪುಸ್ತಕ ಅಗತ್ಯ ಇರುವವರಿಗೆ ನೇರವಾಗಿ ತಲುಪಿಸಲು ಸಾಧ್ಯವಾಗುತ್ತಿದ್ದು, ಇದರಿಂದ ಓದುಗರಿಗೆ ಕೂಡ ರಿಯಾಯಿತಿ ದರದಲ್ಲಿ ಪುಸ್ತಕಗಳು ದೊರೆಯುತ್ತಿವೆ’ ಎಂದು ಹೇಳಿದರು.

ಹೊಸ ಸ್ವರೂಪ ಪಡೆದ ಮಾರಾಟ ವ್ಯವಸ್ಥೆ
ಕೋವಿಡ್‌ನಿಂದ ಪುಸ್ತಕ ಮಾರಾಟ ವ್ಯವಸ್ಥೆಯು ಹೊಸ ಸ್ವರೂಪ ಪಡೆದುಕೊಂಡಿದೆ. ಪ್ರಕಾಶನ ಸಂಸ್ಥೆಗಳು ಆನ್‌ಲೈನ್ ಸೇವೆಯನ್ನೂ ಪ್ರಾರಂಭಿಸಿದ್ದರಿಂದ ಓದುಗರ ಮನೆ ಬಾಗಿಲಿಗೆ ಪುಸ್ತಕಗಳು ತಲುಪುತ್ತಿವೆ. ಲಾಕ್‌ಡೌನ್ ಕಾರಣ ಸಾಹಿತಿಗಳು ಹಾಗೂ ಹವ್ಯಾಸಿ ಬರಹಗಾರರು ಮನೆಯಲ್ಲಿ ಹೆಚ್ಚಿನ ಸಮಯ ಕಳೆದು, ಬರವಣಿಗೆಗೆ ತೊಡಗಿಸಿಕೊಂಡ ಪರಿಣಾಮ ಪ್ರಮುಖ ಪ್ರಕಾಶನ ಸಂಸ್ಥೆಗಳು ಪ್ರತಿ ತಿಂಗಳು 5ರಿಂದ 10 ಪುಸ್ತಕಗಳನ್ನು ಪ್ರಕಟಿಸಲಾರಂಭಿಸಲಿವೆ. ‌

‘ಕೋವಿಡ್‌ ಕಾಣಿಸಿಕೊಂಡ ಬಳಿಕ ಓದುಗರ ಸಂಖ್ಯೆ ಹೆಚ್ಚಳವಾಗಿದೆ. ಇದರಿಂದಾಗಿ ಆನ್‌ಲೈನ್‌ ವಹಿವಾಟು ಏರಿಕೆ ಕಂಡಿದೆ. ನಮ್ಮ ಆನ್‌ಲೈನ್ ವೇದಿಕೆಗೆ ದಿನಕ್ಕೆ 300ರಿಂದ 400 ಪುಸ್ತಕಗಳಿಗೆ ಬೇಡಿಕೆ ಬರುತ್ತಿದೆ. ಈಗ ಮಳಿಗೆಗೆ ಬಂದು ಖರೀದಿಸುವವರ ಸಂಖ್ಯೆ ಸಹ ಹೆಚ್ಚಳವಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಪುಸ್ತಕೋದ್ಯಮಕ್ಕೆ ಪ್ರೋತ್ಸಾಹ ದೊರೆತಿದೆ. ಕೋವಿಡ್ ಕಾಣಿಸಿಕೊಂಡ ಪ್ರಾರಂಭಿಕ ತಿಂಗಳಿಗೆ ಹೋಲಿಸಿದಲ್ಲಿ ಮಾರಾಟವು ಶೇ 60ರಷ್ಟು ಚೇತರಿಕೆ ಕಂಡಿದೆ’ ಎಂದು ಸಪ್ನ ಬುಕ್‌ ಹೌಸ್‌ನ ವ್ಯವಸ್ಥಾಪಕ ಆರ್. ದೊಡ್ಡೇಗೌಡ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.